ಕೊರೊನಾ ತಪಾಸಣೆಗೆ 2 ಲಕ್ಷ ಕಿಟ್ ಖರೀದಿ

ದಾವಣಗೆರೆ

    ಕೊರೊನಾ ಸೋಂಕು ತಪಾಸಣೆಗಾಗಿ 2 ಲಕ್ಷ ಕಿಟ್ ಖರೀದಿಸಲಾಗಿದ್ದು, ಎಲ್ಲಾ ಜಿಲ್ಲೆಗಳಿಗೂ ಸರಬರಾಜು ಮಾಡಲಾಗುವುದು. ಇದರಿಂದ ಸೋಂಕಿತರ ಜೊತೆಗೆ ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವವರನ್ನು ತಪಾಸಣೆಗೆ ಒಳಪಡಿಸಲು ಕ್ರಮ ವಹಿಸಬೇಕೆಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸೂಚನೆ ನೀಡಿದರು.

    ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೊರೊನಾ ಸೋಂಕು ನಿಯಂತ್ರಣ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ಯಾವೊಬ್ಬ ರೋಗಿಯು ಸಹ ವೆಂಟಿಲೇಟರ್‍ಗೆ ಹೋಗದಂತೆ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಬೇಕು. ವೆಂಟಿಲೇಟರ್ ಆಪರೇಟರ್‍ಗಳಿಗೆ ತರಬೇತಿ ನೀಡಲು ಕ್ರಮವಹಿಸಲಾಗುವುದು. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲಿಯೂ ಸಹ ವೈದ್ಯರು, ನರ್ಸ್, ಸಿಬ್ಬಂದಿ ಹಾಗೂ ಮೆಡಿಕಲ್‍ಗೆ ಸಂಬಂಧಿಸಿದಂತೆ ಉತ್ತಮ ಸೌಲಭ್ಯವಿದೆ ಎಂದರು.

    ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಿರುವ ಏಳು ಸೂಚನೆಗಳನ್ನು ಎಲ್ಲರೂ ಪಾಲಿಸೋಣ. ಮುಖ್ಯಮಂತ್ರಿ ಯಡಿಯೂರಪ್ಪ ಸಹ ಜಿಲ್ಲಾವಾರು ಮಾಹಿತಿ ಪಡೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೆಲ್ಲರೂ ಮನೆಯಲ್ಲಿಯೇ ಇದ್ದು, ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಸೋಣ ಎಂದು ಸಲಹೆ ನೀಡಿದರು.

    ಜಿಲ್ಲೆಯಲ್ಲಿ ಮೊದಲು ಮೂರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದಾಗ ಆತಂಕ ವಾತಾವರಣ ನಿರ್ಮಾಣವಾಗಿತ್ತು. ನಂತರದಲ್ಲಿ ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆಗಳ ನಿರಂತರ ಶ್ರಮದಿಂದ ಕೊರೊನಾ ಪಾಸಿಟಿವ್ ಸೋಂಕಿತರು ಗುಣಮುಖರಾಗಿದ್ದಾರೆ. ಅದಕ್ಕಾಗಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸುತ್ತೇನೆಂದು ತಿಳಿಸಿದರು.

    ಮೈಸೂರಿನ ನಂಜನಗೂಡಿನ ಜುಬಿಲಿಯೆಂಟ್ ಕಾರ್ಖಾನೆಲ್ಲಿ 58 ಜನರಿಗೆ ಕೋವಿಡ್ ಪಾಸಿಟಿವ್ ಪ್ರಕರಣ ಬಂದಿದೆ. ಇಲ್ಲಿಗೆ ಚೀನಾ, ಜಪಾನ್ ಹಾಗೂ ದೆಹಲಿಯಿಂದ ಅನೇಕರು ಭೇಟಿ ನೀಡಿ ಹೋಗಿದ್ದಾರೆ. ಇದುವರೆಗೂ ಪ್ರಕರಣದ ಮೂಲವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದರು.

   ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯ ಎಲ್ಲ ಅಧಿಕಾರಿಗಳು, ಆರೋಗ್ಯ ಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ಇದರಿಂದ ಕೊರೊನಾ ವೈರಸ್ ಕುರಿತಾದ ಮಾಹಿತಿ ದೊರೆಯಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪ್ರಧಾನಮಂತ್ರಿಯವರು ಲಾಕ್‍ಡೌನ್ ಅವಧಿಯನ್ನ ಮೇ 3 ರವರೆಗೆ ವಿಸ್ತರಿಸಿದ್ದಾರೆ. ಇನ್ನೂ 20 ರಿಂದ 25 ದಿನಗಳವರೆಗೆ ಎಚ್ಚರಿಕೆಯಿಂದ ಶ್ರಮವಹಿಸಿ ರೋಗ ನಿಯಂತ್ರಣ ಮಾಡೋಣ ಎಂದರು.

    ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಬಡವರು ಹಸಿವಿನಿಂದ ಬಳಲದಂತೆ ಸಕಾಲಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ನಮ್ಮ ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಬೇಕಾದಷ್ಟು ವೈದ್ಯರು ಹಾಗೂ ನರ್ಸ್‍ಗಳಿದ್ದಾರೆ. ನೀವು ಜಿಲ್ಲಾಡಳಿತದಿಂದ ಕೋವಿಡ್ ಪರೀಕ್ಷೆಗೆ ಕಿಟ್ ಒದಗಿಸಿದಲ್ಲಿ ತಪಾಸಣೆಗಾಗಿ ಇವರನ್ನು ಬಳಸಿಕೊಳ್ಳಬಹುದು ಎಂದರು.

    ಹರಿಹರ ಶಾಸಕ ಎಸ್.ರಾಮಪ್ಪ ಮಾತನಾಡಿ, ಲಾಕ್‍ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರು, ಆಟೋ ಚಾಲಕರು ಹಾಗೂ ಗ್ಯಾರೇಜ್ ಕೆಲಸಗಾರು ಸೇರಿದಂತೆ ಕೂಲಿ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಈಗಗಾಲೇ 21 ದಿನ ಕಳೆದಿದೆ. ಇವರಿಗೆ ಜೀವನ ಸಾಗಿಸಲು ಯಾವುದೇ ಕಷ್ಟವಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ಬಡವರು, ಹಸಿದವರಿಗೆ ಊಟ ಕೊಡುವ ವ್ಯವಸ್ಥೆ ಸುಗುಮವಾಗಿ ನಡೆಯಬೇಕು. ಶಾಸಕರ ಅನುದಾನ ಬಳಸಿಕೊಂಡು ಆಹಾರದ ಕಿಟ್ ತಯಾರಿಯಾಗಬೇಕು. ಜೊತೆಗೆ ರೈತರ ಮೇಲೆ ಅನಾವಶ್ಯಕವಾಗಿ ಪೊಲೀಸರಿಂದ ಹಲ್ಲೆ ಆಗುತ್ತಿದೆ. ದಯಾಮಾಡಿ ಈ ಬಗ್ಗೆ ಗಮನಹರಿಸಬೇಕಿದೆ ಎಂದರು.

    ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರ ತಾಲ್ಲೂಕಿನಲ್ಲಿ ಇದುವರೆಗೂ ಯಾವುದೇ ಕೊರೊನಾ ಸೋಂಕು ಪ್ರಕರಣ ಕಂಡುಬಂದಿಲ್ಲ. ತಾಲ್ಲೂಕು ಕೇಂದ್ರಸ್ಥಾನವಾಗಿರುವುದರಿಂದ. ಕೂಡ್ಲಿಗಿ, ಕೊಟ್ಟೂರು, ಮೊಳಕಾಲ್ಮುರು ಸೇರಿದಂತೆ ಸುತ್ತಮುತ್ತಲಿನ ಜನರು ತಪಾಸಣೆಗೆ ಬರುತ್ತಾರೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಜೊತೆಗೆ ವೆಂಟಿಲೇಟರ್ ಇದ್ದರೂ ಅದನ್ನು ಆಪರೇಟ್ ಮಾಡುವ ಸಿಬ್ಬಂದಿಗಳಿಲ್ಲ ಎಂದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಜಿಲ್ಲೆಯ ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಮ್‍ಗಳಲ್ಲಿನ ಕೆಲ ಸಿಬ್ಬಂದಿಗಳನ್ನು ನಿಯೋಜಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ಕೊರೊನಾ ಪ್ರಕರಣ ನಿಯಂತ್ರಣಕ್ಕೆ ಬಂದಕೂಡಲೇ ಎಲ್ಲಾ ಆಸ್ಪತ್ರೆಗಳಿಗೆ ಬೇಕಾದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನೇಮಿಸುವ ಭರವಸೆ ನೀಡಿದರು.

    ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಲಾಕ್‍ಡೌನ್ ವಿಸ್ತರಣೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಂಜಾಗ್ರತಾ ಕ್ರಮವಾಗಿ ಬೇರೆ ದೇಶಕ್ಕೆ ಹೋಲಿಸಿದಲ್ಲಿ ನಮ್ಮ ದೇಶದಲ್ಲಿ ಕೋವಿಡ್ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗಳಾಗುತ್ತಿದ್ದು, ಅಂತಹವರ ಮೇಲೆ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಬೆಂಗಳೂರಿನಲ್ಲಿ ಇರುವಂತೆ ಜಿಲ್ಲೆಯಲ್ಲಿಯೂ ಸಹ ಗುಣಮಟ್ಟದ ಸೌಲಭ್ಯಗಳನ್ನು ಒಳಗೊಂಡ ವಾರ್ ರೂಂ ಕಾರ್ಯ ನಿರ್ವಹಿಸಬೇಕು ಎಂದರು.

     ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಶೇ.95 ರಷ್ಟು ಪಡಿತರ ವಿತರಣೆ ಮಾಡಲಾಗಿದೆ. ಲಾಕ್‍ಡೌನ್ ಆದಾಗಿನಿಂದ ಜನ ಸಾಮಾನ್ಯರಿಗೆ ಅಗತ್ಯ ಸಾಮಗ್ರಿಗಳ ಪೂರೈಕೆಗೆ ಕ್ರಮವಹಿಸಲಾಗಿದೆ. ಜಿಲ್ಲೆಯಲ್ಲಿ 2 ಎಪಿಸೆಂಟರ್ ಮಾಡಿ ಅಲ್ಲಿರುವವರಿಗೆ ಫ್ಲೂ ಸರ್ವೇ ಮಾಡಲಾಗಿದೆ. ಈವರೆಗೆ ಪ್ರೈಮರಿ ಕಾಂಟ್ಯಾಕ್ಟ್‍ನಲ್ಲಿರುವರಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಸೆಕೆಂಡರಿ ಕಾಂಟ್ಯಾಕ್ಟ್‍ನಲ್ಲಿ ರುವವರನ್ನು ಗುರುತಿಸಲಾಗಿದ್ದು, ಅವರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಜೊತೆಗೆ ಸಾಕಷ್ಟು ದಾನಿಗಳು ಮುಂದಾಗಿದ್ದು, ಅವರೊಂದಿಗೆ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಅನುದಾನ ಬಳಸಿಕೊಂಡು ವಲಸೆ ಕಾರ್ಮಿಕರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಗಿದೆ ಎಂದರು.

    ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 22 ಚೆಕ್‍ಪೋಸ್ಟ್ ಸ್ಥಾಪಿಸಿದ್ದು, ಅದರಲ್ಲಿ ಜಿಲ್ಲೆಯೊಳಗೆ 11 ಹಾಗೂ ಜಿಲ್ಲೆಯು ಗಡಿ ಭಾಗದಲ್ಲಿ 11 ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆಯೊಂದಿಗೆ ಸೇರಿ ಬರುವವರನ್ನು ತಡೆದು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೋವಿಡ್ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಸೇರಿಸಲಾಗುವುದು ಎಂದು ತಿಳಿಸಿದರು.

    ಜಿ.ಪಂ. ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಜಿಲ್ಲೆÀಯ 209 ಗ್ರಾಮ ಪಂಚಾಯತ್‍ಗಳಲ್ಲಿ ಟಾಸ್ಕ್‍ಫೋರ್ಸ್ ಸಮಿತಿ ರಚಿಸಲಾಗಿದ್ದು, ಸಭೆ ಮೂಲಕ ಜನ ಎಲ್ಲಿ ಗುಂಪು ಸೇರುತ್ತಾರೂ ಅಲ್ಲಿ ಸಾಮಾಜಿಕ ಅಂತರ ಕಾಯಯ್ದುಕೊಳ್ಳುವ ಕುರಿತುಂತೆ ಇತರೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಚರಂಡಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಸಿಬ್ಬಂದಿಗಳಿಗೆ ಸುರಕ್ಷತಾ ಕಿಟ್‍ಗಳನ್ನು ನೀಡಲಾಗಿದೆ ಎಂದರು.

     ಅಕ್ಷರ ದಾಸೋಹ ಯೋಜನೆಯಡಿ ಮನೆ ಮನೆಗೆ ತೆರಳಿ 1,50,231 ಮಕ್ಕಳಿಗೆ 21 ದಿನಗಳಿಗಾಗುವಷ್ಟು ಆಹಾರ ಧಾನ್ಯದ ಕಿಟ್ ವಿತರಣೆ ಮಾಡಲಾಗಿದೆ. ಅದೇ ರೀತಿ ಅಂಗನವಾಡಿ ಮಕ್ಕಳಿಗೂ, ಕಿಶೋರಿಯರು ಹಾಗೂ ಗರ್ಭಿಣಿಯವರಿಗೂ ಸಹ ಮನೆ ಮನೆಗೆ ತೆರಳಿ ಅವರಿಗೆ ಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗಿದೆ.

     ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ದಾವಣಗೆರೆ ಜಿಲ್ಲೆಗೆ 19600 ಜನರು ಆಗಮಿಸಿದ್ದು, ಅವರೆಲ್ಲರಿಗೂ ಸಹ ಆಶಾ ಕಾರ್ಯಕರ್ತೆಯರ ಮೂಲಕ ಗುರುತಿಸಿ ನಿಗಾ ವಹಿಸಲಾಗಿದೆ. ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರಿಗೆ ಸುರಕ್ಷತಾ ಕಿಟ್‍ಗಳಾದ ಮಾಸ್ಕ್ ಹಾಗೂ ಸ್ಯಾನಿಟೈಜರ್ ನೀಡಿ ಅಂತರ ಕಾಯ್ದುಕೊಳ್ಳಲು ಸೂಚಿಸಿ ಪ್ರತಿ 5 ಜನ ಕಾರ್ಮಿಕರಲ್ಲಿ ಒಬ್ಬರನ್ನು ಮುಖಂಡರನ್ನಾಗಿ ಮಾಡಿ ಅವರಿಗೆ ವೈರಸ್ ನಿಯಂತ್ರಣ ಕುರಿತು ನಿಗಾವಹಿಸಲು ತಿಳಿಸಿದೆ. ಜಿಲ್ಲೆಯಲ್ಲಿ ಒಟ್ಟು 195 ಶೌಚಾಲಯಗಳನ್ನು ಪೂರ್ಣವಾಗಿ ನಿರ್ಮಿಸಿದ್ದು, ಅವುಗಳಿಗೆ ಅನುದಾನವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

     ಸಭೆಯಲ್ಲಿ ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಎಂಎಲ್‍ಸಿ ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಉಪ ಮೇಯರ್ ಸೌಮ್ಯ, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link