ಚಳ್ಳಕೆರೆ : 20 ಕೂಲಿ ಕಾರ್ಮಿಕರಿಗೆ ಕೊರೋನಾ ಪಾಸಿಟಿವ್

ಚಳ್ಳಕೆರೆ

     ಚಳ್ಳಕೆರೆ ನಗರದ ಹೊರವಲಯದ ಬಿಸಿಎಂ ಹಾಸ್ಟಲ್‍ನಲ್ಲಿ ಹಾಲಿ ಕ್ವಾರಂಟೈನ್‍ನಲ್ಲಿರುವ ಸುಮಾರು 20ಕ್ಕೂ ಹೆಚ್ಚು ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರಿಗೆ ಕೊರೋನಾ ವೈರಾಣು ಸೋಂಕು ವ್ಯಾಪಿಸಿರುವುದು ದೃಢಪಟ್ಟಿದ್ದು, ಎಲ್ಲಾ ಕಾರ್ಮಿಕರನ್ನು ಪ್ರತ್ಯೇಕವಾಗಿಟ್ಟು ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ ತಿಳಿಸಿದರು.

     ಅವರು, ಮಂಗಳವಾರ ಮಧ್ಯಾಹ್ನ ಇಲ್ಲಿನ ಬಿಸಿಎಂ ಹಾಸ್ಟಲ್‍ಗೆ ಭೇಟಿ ನೀಡಿ, ಕ್ವಾರಂಟೈನ್‍ಲ್ಲಿದ್ದ 20 ವಲಸೆ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರನ್ನು ಭೇಟಿ ಮಾಡಿ ಅಲ್ಲಿನ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ಆರೋಗ್ಯ ಇಲಾಖೆ ಕೊರೋನಾ ವೈರಾಣು ನಿಯಂತ್ರಣ ಹಿನ್ನೆಲೆಯಲ್ಲಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ನಮ್ಮ ಜಿಲ್ಲೆಯ ಯಾವ ಭಾಗದಲ್ಲೂ ಕೊರೋನಾ ವೈರಾಣು ಗೋಚರಿಸಿಲ್ಲ.

    ಆದರೆ, ಬೇರೆ ರಾಜ್ಯಗಳಿಂದ ಇಲ್ಲಿಗೆ ಬಂದವರ ಆರೋಗ್ಯವನ್ನು ಪರಿಶೀಲನೆ ನಡೆಸಿದ ನಂತರ ಮಾತ್ರ ಪಾಸಿಟಿವ್ ಇರುವುದ ಕಂಡು ಬಂದಿದೆ. ಈಗಾಗಲೇ ಈ ಭಾಗದಲ್ಲಿ ಕ್ವಾರಂಟೈನ್‍ನಲ್ಲಿದ್ದ ಮೂವರಲ್ಲಿ ಕೊರೋನಾ ವೈರಾಣು ಪಾಸಿಟಿವ್ ಇದ್ದು, ಅವರಿಗೆ ಚಿಕಿತ್ಸೆ ಮುಂದುವರೆಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ ಬಿಸಿಎಂ ಹಾಸ್ಟಲ್ ಕ್ವಾರಂಟೈನ್‍ನಲ್ಲಿರುವ 20 ಜನರಲ್ಲಿ ಪಾಸಿಟಿವ್ ವ್ಯಕ್ತವಾಗಿದ್ದು, ಅವರನ್ನು ವಿಶೇಷ ಕೊಠಡಿಯಲ್ಲಿದ್ದು ಚಿಕಿತ್ಸೆಯನ್ನು ಮುಂದುವರೆಸಲಾಗುವುದು.

   ಯಾವುದೇ ಕಾರಣಕ್ಕೂ ಈ ಭಾಗದ ಜನರು ಭಯಪಡುವ ಅಗತ್ಯವಿಲ್ಲ. ಆರೋಗ್ಯ ಇಲಾಖೆ ಇತರೆ ಇಲಾಖೆಗಳ ಸಹಕಾರದೊಂದಿಗೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕೊರೋನಾ ವೈರಾಣು ನಿಯಂತ್ರಣ ಒಂದು ಮಹತ್ವದ ಕಾರ್ಯವಾಗಿದ್ದು, ಇದಕ್ಕೆ ಸ್ವಯಂ ಪ್ರೇರಣೆಯಿಂದ ಎಲ್ಲರೂ ಸಹಕಾರ ನೀಡಬೇಕೆಂದರು.

    ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಮಾಹಿತಿ ನೀಡಿ, ಪ್ರಸ್ತುತ ನಗರದ ವಿವಿಧ ಭಾಗಗಳಲ್ಲಿ ಕ್ವಾರಂಟೈನ್‍ನಲ್ಲಿರುವ ಎಲ್ಲರಿಗೂ ಅಗತ್ಯವಿರುವ ಚಿಕಿತ್ಸೆ, ಊಟ, ಉಪಚಾರದ ಜೊತೆಗೆ ಮಾಸ್ಕ್, ಹ್ಯಾಂಡ್ ಗ್ಲೌಸ್ ಹಾಗೂ ಸ್ಯಾನಿಟೇಜರ್‍ಗಳನ್ನು ನೀಡಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯವನ್ನು ಪ್ರತಿನಿತ್ಯ ವೈದ್ಯರು ಬಂದು ಪರೀಕ್ಷೆ ನಡೆಸುತ್ತಿದ್ದಾರೆ. ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಕೂಡಲೇ ಅಲ್ಲಿನ ಉಸ್ತುವಾರಿ ಅಧಿಕಾರಿಗಳು ಮಾಹಿತಿ ನೀಡಿದ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದರು.

    ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಇಒ ಶ್ರೀಧರ್ ಐ.ಬಾರಿಕೇರ್, ಸಿಎಂಒ ಡಾ.ಬಸವರಾಜು, ಆರ್‍ಆರ್‍ಟಿ ತಂಡದ ಮುಖ್ಯಸ್ಥರಾದ ಪ್ರಸನ್ನಕುಮಾರ್, ನಾಗರಾಜ, ಚಂದ್ರಪ್ಪ, ಗಂಗಾಧರ, ಎಸ್.ಬಿ.ತಿಪ್ಪೇಸ್ವಾಮಿ, ಎನ್.ಪ್ರೇಮಕುಮಾರ್, ಎಚ್.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link