ಬೆಂಗಳೂರು
ರಾಜ್ಯದ ದಾವಣಗೆರೆಯಲ್ಲಿ ಭಾನುವಾರ ಒಂದೇ ದಿನ 21 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ವಾಣಿಜ್ಯ ನಗರಿಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.ದಾವಣಗೆರೆಯಲ್ಲಿ ಏಕಾಏಕಿ ಪ್ರಕರಣಗಳು ಸ್ಫೋಟಗೊಂಡಿರುವುದು ರಾಜ್ಯದ ಆರೋಗ್ಯ ಇಲಾಖೆಯನ್ನು ಆತಂಕಕ್ಕೀಡು ಮಾಡಿದೆ.
ಈ ಮೂಲಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 34 ಪ್ರಕರಣಗಳು ಕಂಡು ಬಂದಿವೆ. ಒಟ್ಟು ಸೋಂಕಿತರ ಸಂಖ್ಯೆ 635ಕ್ಕೆ ಏರಿದೆ. 293 ಮಂದಿ ಗುಣಮುಖರಾಗಿದ್ದು, 25 ಮಂದಿ ಮೃತಪಟ್ಟಿದ್ದಾರೆ.ಕಲಬುರಗಿಯಲ್ಲಿ 6, ಬೆಂಗಳೂರು ನಗರದಲ್ಲಿ 4 ಹಾಗೂ ಬಾಗಲಕೋಟೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.
ಕಲಬುರಗಿಯ 13 ವರ್ಷದ ಬಾಲಕಿ, 54,41 ವರ್ಷದ ವ್ಯಕ್ತಿಗಳು, 35 ವರ್ಷದ ಮಹಿಳೆ, 78 ವರ್ಷದ ವೃದ್ಧ, 22 ವರ್ಷದ ಯುವಕ, ಬಾಗಲಕೋಟೆ ಮುಧೋಲದ 68 ವರ್ಷದ ವೃದ್ಧ ಮತ್ತು 60 ವರ್ಷದ ವೃದ್ಧೆ, ಬಾಗಲಕೋಟೆ ಬಾದಾಮಿಯ 23 ವರ್ಷದ ಯುವತಿ, ಬೆಂಗಳೂರು ನಗರ ಪಾದರಾಯನಪುರದ 24 ವರ್ಷದ ಯುವಕ, ಬೆಂಗಳೂರು ನಗರದ 45, 24 ಮತ್ತು 45 ವರ್ಷದ ಮಹಿಳೆಯರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಮಧ್ಯೆ ಕ್ವಾರಂಟೈನ್‍ನಲ್ಲಿರುವ ಸೋಂಕು ದೃಢಪಡದ ಅಂತಾರಾಷ್ಟ್ರೀಯ ಪ್ರಯಾಣಿಕರು ಸುಸಜ್ಜಿತ ತಾರಾ ಹೊಟೇಲ್‍ಗಳಲ್ಲಿ ವಾಸ್ತವ್ಯ ಹೂಡಲು ಬಯಸಿದರೆ ಅದರ ಸಂಪೂರ್ಣ ವೆಚ್ಚವನ್ನು ಅವರೇ ಭರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.
ಕೋವಿಡ್-19 ಚಿಕಿತ್ಸೆಗಾಗಿ ಎ,ಬಿ,ಸಿ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಎ ವಿಭಾಗದಲ್ಲಿ ಸೋಂಕಿತರನ್ನು ಸೇರಿಸಲಾಗಿದೆ. ಸೋಂಕು ದೃಢಪಟ್ಟವರಿಗೆ ಆಸ್ಪತ್ರೆಗಳ ಐಸೋಲೇಷನ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಬಿ ವರ್ಗದಲ್ಲಿರುವ ಸೋಂಕಿನ ಲಕ್ಷಣ ಇರುವವರನ್ನು ಹಾಸ್ಟೆಲ್, ಅತಿಥಿ ಗೃಹಗಳಲ್ಲಿ ಇಡಲಾಗುತ್ತಿದೆ. ಇವರ ಮೇಲೆ ಆರೋಗ್ಯ ಸಿಬ್ಬಂದಿ ನಿಗಾ ಇಡಲಿದ್ದಾರೆ. ಸಿ. ವರ್ಗದವರನ್ನು ಕ್ವಾರಂಟೈನ್‍ನಲ್ಲಿರುವವರು ಎಂದು ಪರಿಗಣಿಸಿ ಸರ್ಕಾರ ವ್ಯವಸ್ಥೆ ಮಾಡಿರುವ ಪ್ರದೇಶಗಳಲ್ಲಿ ಇಡಲಾಗುತ್ತಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ