ತುಮಕೂರು
ತುಮಕೂರು ನಗರದ ಶಿರಾಗೇಟ್ ಹೊರವಲಯ ಇರುವ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆಗೆ ಗುರುವಾರ ಬೆಳಗ್ಗೆ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಿಢೀರ್‍ದಾಳಿ ನಡೆಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರಲ್ಲದೆ ಸಂಬಂಧಿಸಿದ ಅಂಗಡಿ ಮಾಲೀಕರಿಂದ ಒಟ್ಟು 22,500 ರೂ. ದಂಡ ಸಂಗ್ರಹಿಸಿದ್ದಾರೆ.
ಪಾಲಿಕೆ ಆಯುಕ್ತ ಟಿ.ಣೂಪಾಲನ್ ಅವರ ನಿರ್ದೇಶನದಂತೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್, ಪರಿಸರ ಇಂಜಿನಿಯರ್‍ಗಳಾದ ಕೃಷ್ಣಮೂರ್ತಿ, ಮೃತ್ಯುಂಜಯ, ಮೋಹನ್ ಕುಮಾರ್, ಹೆಲ್ತ್ ಇನ್ಸ್‍ಪೆಕ್ಟರ್ ರುದ್ರೇಶ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದರು.
ತರಕಾರಿ ಮಾರುಕಟ್ಟೆಯಲ್ಲಿನ ಐದು ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಇದ್ದುದನ್ನು ದಾಳಿ ವೇಳಿಯಲ್ಲಿ ಪತ್ತೆ ಮಾಡಿದ್ದು, ಅದರ ಒಟ್ಟು ತೂಕ ಸುಮಾರು 250 ಕೆ.ಜಿ. ಎನ್ನಲಾಗಿದೆ. ಅವೆಲ್ಲವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದರಿ ಐದು ಅಂಗಡಿಗಳಿಗೆ ಅಲ್ಲಿ ದೊರೆತ ನಿಷೇಧಿತ ಪ್ಲಾಸ್ಟಿಕ್‍ಗೆ ಅನುಗುಣವಾಗಿ 20,000 ರೂ., 1000 ರೂ., 1000 ರೂ. ಹಾಗೂ 500 ರೂ.ಗಳಂತೆ ದಂಡ ವಿಧಿಸಿದ್ದಾರೆ.
ಯಾವುದೇ ಕಾರಣಕ್ಕೂ ಇಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸಬಾರದು. ಈ ಬಗ್ಗೆ ಎಲ್ಲರಿಗೂ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಆಗಾಗ ಅನಿರೀಕ್ಷಿತ ದಾಳಿಗಳನ್ನು ಮುಂದುವರೆಸಲಾಗುವುದು. ಒಂದು ವೇಳೆ ಮತ್ತೆ ಇದು ಪುನರಾವರ್ತನೆ ಆದರೆ, ಮುಂದಿನ ಬಾರಿ ನಿಷೇಧಿತ ಪ್ಲಾಸ್ಟಿಕ್ ಬಳಸುವವರ/ ಮಾರುವವರ ವಿರುದ್ಧ ಮೊಕದ್ದಮೆ ಹೂಡಲಾಗುವುದು” ಎಂದು ಆಯುಕ್ತ ಟಿ.ಭೂಪಾಲನ್ ತಿಳಿಸಿದ್ದಾರೆ.