ತುಮಕೂರು
ತುಮಕೂರು ಜಿಲ್ಲೆಯಲ್ಲಿ 2018 ರ ಸೆಪ್ಟೆಂಬರ್‍ನಿಂದ 2019 ರ ಅಕ್ಟೋಬರ್‍ವರೆಗೆ ನಿಯಮಬಾಹಿರವಾಗಿವೆಯೆಂಬ ಕಾರಣದಿಂದ ಒಟ್ಟು 23,091 ಬಿ.ಪಿ.ಎಲ್. (ಬಡತನ ರೇಖೆಗಿಂತ ಕೆಳಗಿರುವವರು) ಪಡಿತರ ಕಾರ್ಡ್‍ಗಳು ರದ್ದುಗೊಂಡಿವೆ.
`ಬಿ.ಪಿ.ಎಲ್. ಕಾರ್ಡ್‍ಗಳಿಗೆ ಸರ್ಕಾರ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಆ ನಿಯಮ ಉಲ್ಲಂಘಿಸಿ ಬಿ.ಪಿ.ಎಲ್. ಪಡಿತರ ಕಾರ್ಡ್ ಹೊಂದಿದ್ದರೆ, ಅಂಥವನ್ನು ಗುರುತಿಸಿ ರದ್ದುಪಡಿಸಲಾಗುವುದು. ಆ ಪ್ರಕ್ರಿಯೆ ಅನುಸರಿಸಿ ಇಲಾಖೆ ಇಂಥದ್ದೊಂದು ಕ್ರಮ ಜರುಗಿಸಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಸಿ. ಶ್ರೀನಿವಾಸಯ್ಯ `ಪ್ರಜಾಪ್ರಗತಿ’ಯೊಡನೆ ಮಾತನಾಡುತ್ತ ಮಾಹಿತಿ ನೀಡಿದರು.
1,987 ಕಾರ್ಡ್ ಸ್ವಯಂ ವಾಪಸ್
`ಮತ್ತೊಂದು ಬೆಳವಣಿಗೆಯಲ್ಲಿ 2019 ರ ಜುಲೈನಿಂದ ಈವರೆಗೆ 1,987 ಬಿ.ಪಿ.ಎಲ್. ಕಾರ್ಡುದಾರರು ಸ್ವಯಂಪ್ರೇರಣೆಯಿಂದ ಬಿ.ಪಿ.ಎಲ್. ಕಾರ್ಡ್‍ಗಳನ್ನು ಇಲಾಖೆಗೆ ವಾಪಸ್ ಮಾಡಿದ್ದಾರೆ. ಹಿಂದೆ ಯಾವಾಗಲೋ ಇವರಿಗೆ ಕಾರ್ಡ್ ಮಂಜೂರಾಗಿರುತ್ತದೆ. ಆದರೆ ನಿಯಮದ ಪ್ರಕಾರ ಅವರು ಬಿ.ಪಿ.ಎಲ್. ಕಾರ್ಡ್‍ಗೆ ಬೇಕಾದ ಅರ್ಹತೆಗಳನ್ನು ವಿವಿಧ ಕಾರಣಗಳಿಂದ ಈಗ ಕಳೆದುಕೊಂಡಿರುತ್ತಾರೆ. ಅಂದರೆ ಆರ್ಥಿಕವಾಗಿ ಸುಸ್ಥಿತಿಗೆ ಬಂದಿರುತ್ತಾರೆ. ಇದನ್ನು ತಿಳಿದುಕೊಂಡು ಅವರುಗಳೇ ಸ್ವಯಂಪ್ರೇರಣೆಯಿಂದ ಬಿ.ಪಿ.ಎಲ್.ಕಾರ್ಡ್‍ಗಳನ್ನು ಹಿಂತಿರುಗಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಕ್ರಿಮಿನಲ್ ಕೇಸ್ ಆದೀತು
`ಏಳೂವರೆ ಎಕರೆಗಿಂತ ಅಧಿಕ ಕೃಷಿ ಭೂಮಿ ಇರಬಾರದು. ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು. ಒಂದು ಸಾವಿರ ಚದುರಡಿಗಳಿಗಿಂತ ಹೆಚ್ಚು ಅಳತೆಯ ಆರ್.ಸಿ.ಸಿ. ಮನೆ ಇರಬಾರದು. ಎ.ಪಿ.ಎಂ.ಸಿ. ವರ್ತಕರು ಅಥವಾ ಎಜೆಂಟರಾಗಿರಬಾರದು. ಸರ್ಕಾರಿ ನೌಕರರು ಅಥವಾ ಇತರೆ ಅರೆಸರ್ಕಾರಿ/ ಅನುದಾನವುಳ್ಳ ಶಾಲಾಕಾಲೇಜು/ ಕಂಪನಿಗಳ ನೌಕರರಾಗಿರಬಾರದು.
ಒಟ್ಟಾರೆ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿರಬಾರದು ಎಂಬಿತ್ಯಾದಿಯಾಗಿ ಬಿ.ಪಿ.ಎಲ್. ಕಾರ್ಡ್‍ಗೆ ಸಂಬಂಧಿಸಿದಂತೆ ನಿಯಮಾವಳಿಗಳಿವೆ. ಈ ನಿಯಮಗಳಿಗೆ ಒಳಪಡದವರು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದರೆ, ಅಂಥವರನ್ನು ಇಲಾಖೆಯು ಪತ್ತೆ ಮಾಡಿ, ಸಂಬಂಧಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಜೊತೆಗೆ ಅಂಥವರು ಈವರೆಗೆ ಬಿ.ಪಿ.ಎಲ್. ಕಾರ್ಡ್ ಬಳಸಿಕೊಂಡು ಪಡೆದುಕೊಂಡಿರುವ ಆಹಾರ ಧಾನ್ಯಗಳ ಒಟ್ಟು ಮೊತ್ತವನ್ನು ಸರ್ಕಾರಕ್ಕೆ ವಾಪಸ್ ಪಾವತಿಸುವಂತೆ ಮಾಡಲೂ ಅವಕಾಶವಿದೆ. ಜೊತೆಗೆ ಅಂಥವರ ಬಿ.ಪಿ.ಎಲ್. ಕಾರ್ಡ್‍ಗಳನ್ನು ರದ್ದು ಮಾಡಲಾಗುವುದು’ ಎಂದು ಶ್ರೀನಿವಾಸಯ್ಯ ವಿವರಿಸಿದರು.
6.28 ಲಕ್ಷ ಬಿ.ಪಿ.ಎಲ್. ಕಾರ್ಡ್
`ಪ್ರಸ್ತುತ ತುಮಕೂರು ಜಿಲ್ಲೆಯಲ್ಲಿ 6 ಲಕ್ಷ 28 ಸಾವಿರದಷ್ಟು ಬಿ.ಪಿ.ಎಲ್. ಕಾರ್ಡ್‍ಗಳಿವೆ. 28,000 ದಷ್ಟು ಅಂತ್ಯೋದಯ ಅನ್ನಯೋಜನೆ (ಎ.ಎ.ವೈ.) ಕಾರ್ಡ್‍ಗಳಿವೆ. ಜಿಲ್ಲೆಯಲ್ಲಿ ಒಟ್ಟು 1,098 ಡಿಪೋಗಳಿವೆ. ಜಿಲ್ಲೆಯಲ್ಲಿ ಶೇ.100 ರಷ್ಟು ಬಯೋಮೆಟ್ರಿಕ್ ಸಾಧಿಸಲಾಗಿದೆ.
ಶೇ.100 ರಷ್ಟು ಆಧಾರ್‍ಲಿಂಕ್ ಮಾಡಿಸಲಾಗಿದೆ. ಇದರಿಂದ ಎಲ್ಲ ಪ್ರಕ್ರಿಯೆಗಳೂ ಆನ್‍ಲೈನ್‍ನಲ್ಲಿ ಪಾರದರ್ಶಕವಾಗಿ ನಡೆಯುತ್ತವೆ. ಕಾರ್ಡುದಾರರು ಮೊಬೈಲ್ ಸಂಖ್ಯೆ ನೀಡಿದ್ದರೆ, ಪ್ರತಿ ಕಾರ್ಡುದಾರರ ಮೊಬೈಲ್‍ಗೂ ಪಡಿತರ ವಿತರಣೆ ಬಗ್ಗೆ ಮೆಸೇಜ್ ಬರುತ್ತದೆ’ ಎಂದು ಹೇಳಿದ ಅವರು, `ಕಳೆದ ಮೂರು ತಿಂಗಳುಗಳಿಂದ ಜಿಲ್ಲೆಯಲ್ಲಿ ಬಿ.ಪಿ.ಎಲ್. ಕಾರ್ಡ್‍ಗಳಿಗೆ ಅಕ್ಕಿಯನ್ನು ಪ್ರತಿ ಕಾರ್ಡಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ ತಲಾ 7 ಕೆ.ಜಿ.ಯಂತೆ ವಿತರಿಸಲಾಗಿದೆ. ಈ ತಿಂಗಳು ಮಾತ್ರ ತುಮಕೂರು ಮತ್ತು ಕುಣಿಗಲ್ ತಾಲ್ಲೂಕಿನಲ್ಲಿ ಅಕ್ಕಿಯೊಡನೆ ಪ್ರತಿ ಕಾರ್ಡ್‍ಗೆ 3 ಕೆ.ಜಿ.ಯಂತೆ ರಾಗಿ ವಿತರಿಸಲಾಗಿದೆ’ ಎಂದರು.
ಎ.ಪಿ.ಎಲ್.ಕಾರ್ಡ್‍ಗಳಿಗೆ
`ಇನ್ನು ಬಡತನ ರೇಖೆಗಿಂತ ಮೇಲಿರುವ (ಎ.ಪಿ.ಎಲ್.) ಕಾರ್ಡುದಾರರು ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡರೆ ಅಂಥವರಿಗೆ ಡಿಪೋದಲ್ಲಿ ಪ್ರತಿ ಕೆ.ಜಿ.ಗೆ 15 ರೂ.ಗಳಂತೆ ಒಟ್ಟು 10 ಕೆ.ಜಿ. ಅಕ್ಕಿಯನ್ನು ಪ್ರತಿ ತಿಂಗಳೂ ವಿತರಿಸಲಾಗುವುದು’ ಎಂದು ಶ್ರೀನಿವಾಸಯ್ಯ ತಿಳಿಸಿದರು.