ಪಾಲಿಕೆ ಕಾರ್ಯಾಚರಣೆ : 235 ಬೀದಿನಾಯಿಗಳಿಗೆ ಎಬಿಸಿ

ತುಮಕೂರು

    ತುಮಕೂರು ಮಹಾನಗರ ಪಾಲಿಕೆಯು ನಗರದ ವಿವಿಧೆಡೆ ಬೀದಿನಾಯಿಗಳ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದು, 2020 ರ ಜನವರಿ ಮಾಹೆಯಲ್ಲಿ 235 ಬೀದಿನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ (ಎ.ಬಿ.ಸಿ.-ಅನಿಮಲ್ ಬರ್ತ್ ಕಂಟ್ರೋಲ್) ಮಾಡಲಾಗಿದೆ. ಇದಕ್ಕಾಗಿ ಒಟ್ಟು 2,87,750 ರೂ. ವೆಚ್ಚವಾಗಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ.

    ಎ.ಬಿ.ಸಿ. ಮಾಡಲೆಂದೇ ಪಾಲಿಕೆಯು ರಾಮನಗರ ಜಿಲ್ಲೆ ಮಾಗಡಿಯ ಶ್ರೀ ಚೇತಕ್ ಅನಿಮಲ್ ವೆಲ್‍ಫೇರ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಟೆಂಡರ್ ಮೂಲಕ ನಿಯುಕ್ತಿಗೊಳಿಸಿ, ಕಾರ್ಯಾದೇಶ ನೀಡಿದೆ. ಈ ಸಂಸ್ಥೆಯು ಪಾಲಿಕೆ ಪರವಾಗಿ ನಗರದಲ್ಲಿ ದಿನವೂ ಕಾರ್ಯಾಚರಣೆ ನಡೆಸುತ್ತಿದೆ.

     ಪ್ರಸ್ತುತ ಹಿಡಿದು ಎ.ಬಿ.ಸಿ. ಮಾಡಿರುವ 235 ನಾಯಿಗಳಲ್ಲಿ, 118 ಗಂಡು ನಾಯಿಗಳು ಹಾಗೂ 117 ಹೆಣ್ಣು ನಾಯಿಗಳು ಸೇರಿವೆ. ಇವುಗಳಿಗೆ ಹುಚ್ಚು ನಿಯಂತ್ರಣದ ಲಸಿಕೆಯನ್ನೂ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಬೀದಿನಾಯಿಗಳ ಬಗ್ಗೆ ಜನಪ್ರತಿನಿಧಿಗಳಿಂದ ಅಥವಾ ಸಾರ್ವಜನಿಕರಿಂದ ದೂರುಗಳು ಬಂದ ಬಳಿಕ ಚೇತಕ್ ಟ್ರಸ್ಟ್ ತಂಡದವರು ಆಯಾ ಸ್ಥಳಕ್ಕೆ ನಿಗದಿತ ವಾಹನದಲ್ಲಿ ತೆರಳಿ ಬೀದಿನಾಯಿಗಳನ್ನು ವೈಜ್ಞಾನಿಕವಾಗಿ ಹಿಡಿಯುತ್ತಾರೆ. ಬಳಿಕ ಅವುಗಳನ್ನು ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್ ಬಳಿ ತಾವು ರೂಪಿಸಿರುವ ಕೇಂದ್ರಕ್ಕೆ ಒಯ್ಯುತ್ತಾರೆ. ಅಲ್ಲಿ ಪಶುವೈದ್ಯರು ಇವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಾರೆ.

    ಜೊತೆಗೆ ಅವುಗಳ ಕಿವಿಯಲ್ಲಿ ವಿ ಆಕಾರದ ಗುರುತು ಹಾಕುತ್ತಾರೆ. ಇದರಿಂದ ಅವುಗಳಿಗೆ ಎ.ಬಿ.ಸಿ. ಆಗಿದೆಯೆಂಬುದನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಗುತ್ತದೆ. ನಂತರ ಎರಡು-ಮೂರು ದಿನಗಳ ಕಾಲ ಸದರಿ ನಾಯಿಗಳ ಆರೈಕೆ ಮಾಡಿ, ಅವು ಸುಧಾರಿಸುತ್ತಿದ್ದಂತೆ ಅವುಗಳನ್ನು ಎಲ್ಲಿಂದ ಹಿಡಿದು ತರಲಾಗಿತ್ತೋ, ಅದೇ ಬಡಾವಣೆಗೆ ಒಯ್ದು ಮತ್ತೆ ಅಲ್ಲೇ ಬಿಡುಗಡೆ ಮಾಡಲಾಗುತ್ತದೆ. ಇದು ಕಾನೂನಾತ್ಮಕವಾದ ಪ್ರಕ್ರಿಯೆಯಾಗಿದೆ ಎಂದು ನಾಗೇಶ್ ಕುಮಾರ್ ಅವರು ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದರು.

    ಈ ಪ್ರಕ್ರಿಯೆಯು ವರ್ಷ ಪೂರ್ತಿ ನಡೆಯುತ್ತಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ತುಮಕೂರು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಸಂಪೂರ್ಣ ನಿಯಂತ್ರಣಗೊಳ್ಳಲಿದೆ ಎಂದು ಡಾ.ನಾಗೇಶ್ ಕುಮಾರ್ ಅಭಿಪ್ರಾಯಟ್ಟರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap