ದಾವಣಗೆರೆ:
ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆ 24*7 ಸಹಾಯ ವಾಣಿ ಆರಂಭಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯ ವರೆಗಿನ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ಯಾವುದೇ ಸಮಸ್ಯೆಗೆ ತುತ್ತಾಗಿ, ಹತ್ತಿgದ ಪೊಲೀಸ್ ಠಾಣೆಗೆ ಮಾಹಿತಿ ತಲುಪಿಸಲು ಸಾಧ್ಯವಾಗದಿದ್ದರೆ, ಸಹಾಯವಾಣಿ ಸಂಖ್ಯೆಗಳಾದ ಮೊ:9480803200, ಸ್ಥಿರ ದೂರವಣಿ 08192-253100, 08192-262699, 112 ಅಥವಾ 100 ಇವುಗಳಲ್ಲಿ ಯವುದಾದರೂ ಒಂದು ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬೇಕು.
ಆಗ ಸಹಾಯವಾಣಿಗೆ ಬರುವ ಕರೆಯನ್ನು ಸ್ವೀಕರಿಸಿದ ನಮ್ಮ ಕಂಟ್ರೋಲ್ ರೂಂ ಸಿಬ್ಬಂದಿಯು ತಕ್ಷಣವೇ ದೊರೆತ ಮಾಹಿತಿಯನ್ನು ರಾತ್ರಿ ಕರ್ತವ್ಯದಲ್ಲಿರುವ ಪೊಲೀಸರಿಗೆ ರವಾನಿಸಲಿದ್ದು, ಆಗ ರಾತ್ರಿ ಪಾಳಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿಶೇಷ ಗಸ್ತಿನಲ್ಲಿರುವ ನಮ್ಮ ಸಿಬ್ಬಂದಿಗಳು ವಾಹನಗಳ ಮೂಲಕ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ, ಸಮಸ್ಯೆಗೆ ತುತ್ತಾಗಿರುವವರನ್ನು ಸಂರಕ್ಷಿಸುತ್ತಾರೆ ಎಂದು ಮಾಹಿತಿ ನೀಡಿದರು.
ಇದಕ್ಕಾಗಿ 7 ಪಿಸಿಆರ್, 7 ಹೆದ್ದಾರಿ ಗಸ್ತು ವಾಹನ ಹಾಗೂ 14 ಚಿತಾ ಮೋಟರ್ ಸೈಕಲ್‍ಗಳು ಕಾರ್ಯನಿರ್ವಹಿಸುತ್ತಿದ್ದು, ರಾತ್ರಿ ಗಸ್ತು ಸಹ ಹೆಚ್ಚಿಸಲಾಗಿದೆ. ಅಲ್ಲದೇ, ಸ್ವಯಂ ರಕ್ಷಣಾ ಕಲೆಯಲ್ಲಿ ತರಬೇತಿ ಪಡೆದಿರುವ ಮಹಿಳಾ ಸಿಬ್ಬಂದಿಗಳನ್ನೇ ಒಳಗೊಂಡಿರುವ ದುರ್ಗಪಡೆ ಸಹ ಕಾಲೇಜು, ಬಸ್ ನಿಲ್ದಾಣ, ಶಾಪಿಂಗ್ ಮಾಲ್, ಚಿತ್ರಮಂದಿರಗಳು, ಮಹಿಳಾ ವಸತಿ ನಿಲಯ ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ಒತ್ತು ನೀಡುತ್ತಿದೆ ಎಂದು ಹೇಳಿದರು.
ಗುಡ್ ಮಾರ್ನಿಂಗ್ ಬೀಟ್:
ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಂಡು ಬರುತ್ತಿರುವ ಸರಗಳ್ಳತನಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಇಲಾಖೆಯು ಬೆಳಗಿನ ಜಾವದಲ್ಲಿ ಗುಡ್ ಮಾರ್ನಿಂಗ್ ಬೀಟ್ ಹಾಗೂ ನಾಕಾ ಬಂದಿಯ ಮೂಲಕ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದರು.
ಕೆಎಸ್‍ಪಿ ಆ್ಯಪ್:
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಈಗಾಗಲೇ ಪೊಲೀಸ್ ಇಲಾಖೆ ಕೆಎಸ್‍ಪಿ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಅನ್ನು ಸಾರ್ವಜನಿಕರು ತಮ್ಮ ಆಂಡ್ರಾಯ್ಡ್ ಮೊಬೈಲ್‍ನಲ್ಲಿ ಪ್ಲೇ ಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ. ಈ ಆ್ಯಪ್ ಅನ್ನು ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಿದ್ದು, ಇದು ಜಿಪಿಎಸ್ ಆಧಾರಿತ ಲೋಕೇಷನ್ ಸೌಲಭ್ಯ, ಹತ್ತಿರದ ಪೊಲೀಸ್ ಠಾಣೆ ದೂವಾಣಿ ಸಂಖ್ಯೆ ಹಾಗೂ ದೂರ ಮತ್ತಿತರರೆ ಮಾಹಿತಿಯನ್ನು ಒಳಗೊಂಡಿದೆ. ಅಲ್ಲದೇ, ಇದರಲ್ಲಿ ಇರುವ ಎಸ್‍ಓಎಸ್‍ಗೆ ಐದು ಆಪ್ತರ ನಂಬರ್ ಅನ್ನು ಫೀಡ್ ಮಾಡಿರಬೇಕು. ವ್ಯಕ್ತಿಯು ಸಮಸ್ಯೆಗೆ ಒಳಗಾದ ತಕ್ಷಣ ಎಸ್‍ಓಎಸ್‍ನ ಕೆಂಪು ಬಟ್‍ನ್ ಒತ್ತಿದರೆ, ನಿಮ್ಮ ಐದೂ ಜನ ಆಪ್ತರಿಗೆ ನೀವಿರುವ ಲೋಕೇಷನ್, ಸಂದೇಶ ಹಾಗೂ ಕರೆ ಹೋಗುತ್ತದೆ. ಆಗ ಅವರು ನಿಮ್ಮ ರಕ್ಷಣೆಗೆ ಬರಬಹುದು. ಇಲ್ಲದಿದ್ದರೆ, ಹತ್ತಿರದ ಪೊಲೀಸ್ ಠಾಣೆಗಾದರೂ ಮಾಹಿತಿ ನೀಡಿ, ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವವರನ್ನು ಕಾಪಾಡಬಹುದು ಎಂದು ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಎಎಸ್‍ಪಿ ರಾಜೀವ್, ಡಿವೈಎಸ್‍ಪಿ ನಾಗೇಶ್ ಐತಾಳ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








