ತುರುವೇಕೆರೆ:
ತಾಲೂಕಿನ 27 ಗ್ರಾಮ ಪಂಚಾಯ್ತಿಗಳಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರವಾಗಿದ್ದು ಈ ಸಂಬಂಧ ತನಿಖೆ ನಡೆಸುವಂತೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಸಂಚಾಲಕಿ ಹುಲ್ಲೇಕೆರೆ ಹೆಚ್.ಕೆ.ಚಂದ್ರಕಲಾ ಆರೋಪಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನ ದಂಡಿನಶಿವರ, ಸಂಪಿಗೆ ಹೊಸಹಳ್ಳಿ, ಅಮ್ಮಸಂದ್ರ, ತಂಡಗ, ಶೆಟ್ಟಿಗೊಂಡನಹಳ್ಳಿ, ಬಾಣಸಂದ್ರ, ಮಾದಿಹಳ್ಳಿ, ವಡವನಘಟ್ಟ, ಮುನಿಯೂರು, ಹಡವನಹಳ್ಳಿ, ಮುತ್ತುಗದಹಳ್ಳಿ, ಗೋಣಿತುಮಕೂರು, ಮಾವಿನಕೆರೆ, ಗೋಣಿತುಮಕೂರು, ಸಂಪಿಗೆ, ತಾಳಕೆರೆ, ಹುಲ್ಲೇಕೆರೆ, ಭೈತರಹೊಸಳ್ಳಿ, ಕೊಡಗೀಹಳ್ಳಿ, ದಬ್ಬೇಘಟ್ಟ, ಆನೇಕೆರೆ, ಅರೇಮಲ್ಲೇನಹಳ್ಳಿ, ಲೋಕಮ್ಮನಹಳ್ಳಿ, ಮಾಯಸಂದ್ರ, ಮಣಿಚೆಂಡೂರು, ಸೊರವನಹಳ್ಳಿ, ಹಾಗೂ ಕಣತೂರು ಗ್ರಾಮ ಪಂಚಾಯ್ತಿಗಳಲ್ಲಿ ಕಳೆದ 2010 ರಿಂದ 2018 ರವರೆಗೆ ನಡೆದಿರುವ ಕಾಮಗಾರಿಗಳಲ್ಲಿ ಭಾರಿ ಅವ್ಯವಹಾರವಾಗಿದೆ.
ಒಟ್ಟು 27 ಗ್ರಾಮ ಪಂಚಾಯ್ತಿಗಳಲ್ಲಿ 20 ಕೋಟಿಗೂ ಅಧಿಕ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಹಣವನ್ನು ಸರ್ಕಾರದ ಖಜಾನೆಯಿಂದ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಕಾಮಗಾರಿಗಳು ಆಗದೇ ಬಿಲ್ಲುಗಳ ಪಾವತಿಯಾಗಿದೆ. ಕಾಮಗಾರಿಗಳ ಹೆಸರಿಗೆ ನಕಲಿ ನೀಲನಕ್ಷೆಗಳನ್ನು ದಾಖಲೆಗೆ ಇಡಲಾಗಿದೆ. ಅಲ್ಲದೇ ಸುಮಾರು 1.23 ಕೋಟಿಗಳಷ್ಟು ಕಾಮಗಾರಿಗಳಿಗೆ ಯಾವುದೇ ದಾಖಲಾತಿಗಳು ಇಲ್ಲವೆಂದು ಅವರು ಆಪಾದಿಸಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಅವ್ಯವಹಾರದ ಕುರಿತು ಕಳೆದ 2016 ರಿಂದಲೂ ಸಂಬಂಧಿಸಿದ ಇಲಾಖಾ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಸಹ ಯಾವುದೇ ತನಿಖೆಯಾಗಿಲ್ಲ. ಭ್ರಷ್ಠಾಚಾರ ಮಾಡಿರುವವರಿಗೆ ಯಾವುದೇ ಶಿಕ್ಷೆಯಾಗಿಲ್ಲ. ಪ್ರತಿ ವರ್ಷದ ಕಾಮಗಾರಿಗಳ ಲೋಪದೋಷಗಳ ಸಹಿತ ದೂರು ಸಲ್ಲಿಸುತ್ತಲೇ ಬರಲಾಗಿದೆ. ಆದರೂ ಇದುವರೆಗೂ ಯಾವ ಸರ್ಕಾರಗಳೂ ಸಹ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತಮ್ಮ ರಾಷ್ಟ್ರೀಯ ಕಿಸಾನ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೊಂಚೆ ಶಿವರುದ್ರಪ್ಪನವರ ಸೂಚನೆಯ ಮೇರೆಗೆ ತಾಲೂಕಿನ ಎಲ್ಲಾ 27 ಗ್ರಾಮ ಪಂಚಾಯ್ತಿಗಳ ವಿರುಧ್ಧ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದು ಚಂದ್ರಕಲಾ ಹೇಳಿದರು.
ಕಳೆದ 2010 ರಿಂದ 2018 ರ ವರೆಗೆ ಗ್ರಾಮ ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸಿರುವ ಅಂದಿನಿಂದ ಇಂದಿನವರೆಗಿನ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ, ಪಿಡಿಓ ಗಳು ಹಾಗೂ ಹಾಲಿ ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಆರೋಪಿತರನ್ನಾಗಿ ದೂಷಿಸಿ ದೂರು ನೀಡಿರುವುದಾಗಿ ಹೇಳಿದರು.
ನ್ಯಾಯಾಲಯದಲ್ಲೂ ದಾವೆ – ತಾಲೂಕಿನ 27 ಗ್ರಾಮ ಪಂಚಾಯ್ತಿಗಳಲ್ಲಿ ಆಗಿರುವ ಭ್ರಷ್ಠಾಚಾರದ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಿಸುವುದರ ಜೊತೆಗೆ ಪ್ರತಿಯೊಂದು ಗ್ರಾಮ ಪಂಚಾಯ್ತಿಯನ್ನೂ ದೂರುದಾರನ್ನಾಗಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗುವುದು.
ತಮ್ಮ ರಾಷ್ಟ್ರೀಯ ಕಿಸಾನ್ ಸಂಘದ ವತಿಯಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಆಗಿರುವ ಕಾಮಗಾರಿಗಳ ಕುರಿತು ತಮ್ಮ ಸಂಘದ ಪದಾದಿಕಾರಿಗಳ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ಎಲ್ಲಾ ಕಡೆಯೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅವುಗಳೆಲ್ಲವನ್ನೂ ಲೋಕಾಯುಕ್ತ ಹಾಗೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಚಂದ್ರಕಲಾ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








