29ಕ್ಕೆ 22ನೇ ವಾರ್ಡಿಗೆ ಚುನಾವಣೆ: 31ಕ್ಕೆ ಮತ ಎಣಿಕೆ

ನಗರ ಪಾಲಿಕೆ ಉಪ ಚುನಾವಣೆ ಪಕ್ಷಗಳಿಗೆ ಪ್ರತಿಷ್ಠೆ

ತುಮಕೂರು

       ತುಮಕೂರು ನಗರ ಪಾಲಿಕೆಯ 22ನೇ ವಾರ್ಡಿಗೆ ಈ ತಿಂಗಳ 29ರಂದು ಉಪ ಚುನಾವಣೆ ನಡೆಯುತ್ತಿದೆ. ಈ ವಾರ್ಡ್ ಪ್ರತಿನಿಧಿಸುತ್ತಿದ್ದ ಜೆಡಿಎಸ್‍ನ ರವಿಕುಮಾರ್ ನಿಧನರಾದ ಕಾರಣ ತೆರವಾದ ಸ್ಥಾನಕ್ಕೆ ಎಂಟು ತಿಂಗಳ ತರುವಾಯ ಮತ್ತೊಂದು ಚುನಾವಣೆ ಎದುರಾಗಿದೆ..

      ಇತ್ತೀಚಿನ ಅವಧಿಯಲ್ಲಿ 22ನೇ ವಾರ್ಡಿಗೆ ಇದು ಎರಡನೇ ಉಪ ಚುನಾವಣೆ. ವಾರ್ಡಿನ ಸದಸ್ಯರು ಕೊಲೆಯಾದ ಕಾರಣಕ್ಕಾಗಿಯೇ ಉಪ ಚುನಾವಣೆ ನಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಹಿಂದೆ ಜೆಡಿಎಸ್ ನ ಆಂಜನಪ್ಪ ಕೊಲೆಯಾಗಿದ್ದರು. ಅದೇ ಪಕ್ಷದ ರವಿಕುಮಾರ್ ಕೂಡಾ 8 ತಿಂಗಳ ಹಿಂದೆ ಹತ್ಯೆಯಾಗಿದ್ದರು. ಸದಸ್ಯರ ಹತ್ಯೆ, ಉಪಚುನಾವಣೆಯ ಅಪಖ್ಯಾತಿಯಿಂದ 22ನೇ ವಾರ್ಡ್ ಇನ್ನಾದರೂ ಮುಕ್ತವಾಗಲಿ ಎಂಬ ಆಶಯ ವಾರ್ಡ್ ನಾಗರೀಕರದ್ದು.

       ಸಾಮಾನ್ಯ ವರ್ಗಕ್ಕೆ ಮೀಸಲಾದ ವಾರ್ಡಿನ ಉಪಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಸೇರಿ ಏಳು ಸ್ಪರ್ಧಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‍ನ ಹೆಚ್ ಎಸ್ ರುದ್ರೇಶ್, ಜೆಡಿಎಸ್‍ನ ಶ್ರೀನಿವಾಸಮೂರ್ತಿ, ಬಿಜೆಪಿಯ ಕೆ ಸಂದೀಪ್, ಕೆ ಎಸ್ ರೇಣುಕಾಪ್ರಸಾದ್, ಬಿ ಎಂ ನರಸಿಂಹಮೂರ್ತಿ, ಎಂ ಎನ್ ರಾಘವೇಂದ್ರ, ಪಿ ವೀರಭದ್ರ ಸ್ಪರ್ಧೆಯಲ್ಲಿದ್ದು ವಾರ್ಡಿನಲ್ಲಿ ಮನೆಮನೆಗೂ ತೆರೆಳಿ ಮತಯಾಚನೆ ಮಾಡುತ್ತಿದ್ದಾರೆ.

      ಬಿಜೆಪಿಯ ಸಂದೀಪ್ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್ ವಿರುದ್ಧ ಸೋಲು ಅನುಭವಿಸಿದ್ದರು. ಈ ಬಾರಿ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ. ನಗರದಲ್ಲಿ ಬಿಜೆಪಿ ಶಾಸಕ ಜ್ಯೋತಿಗಣೇಶ್, ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಜಿಎಸ್ ಬಸವರಾಜು ಅವರು ಗೆದ್ದಿದ್ದು, ಪಾಲಿಕೆಯ ಉಪಚುನಾವಣೆಯಲ್ಲೂ ಬುಜೆಪಿ ಗೆಲುವು ಮುಂದುವರೆಯಲಿದೆ ಎಂಬ ವಿಶ್ವಾಸದಲ್ಲಿ ಸಂದೀಪ್ ಇದ್ದಾರೆ. ಈಗಾಗಲೇ ಶಾಸಕ ಜ್ಯೋತಿಗಣೇಶ್ ವಾರ್ಡಿನಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ.

       22ನೇ ವಾರ್ಡನ್ನು ಜೆಡಿಎಸ್‍ಗೇ ಉಳಿಸಿಕೊಳ್ಳಬೇಕು ಎಂದು ಸಚಿವ ಎಸ್ ಆರ್ ಶ್ರೀನಿವಾಸ್ ಪ್ರಯತ್ನ ನಡೆಸಿದ್ದಾರೆ. ಹಲವರು ಟಿಕೆಟ್ ಆಕಾಂಕ್ಷಿಗಳಿದ್ದರೂ ತಮ್ಮ ಬೆಂಬಲಿಗ ಶ್ರೀನಿವಾಸಮೂರ್ತಿಯವರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟು ಪ್ರಚಾರ ನಡೆಸಿ, ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹೆಚ್ ಎಸ್ ರುದ್ರೇಶ್ ಪರ ಮಾಜಿ ಶಾಸಕ ಡಾ. ರಫಿಕ್ ಅಹಮದ್ ವಾರ್ಡಿನಲ್ಲಿ ಪ್ರಚಾರ ನಡೆಸಿ ಮತಯಾಚಿಸಿದ್ದಾರೆ.

       ನಗರಪಾಲಿಕೆಯ 35 ಸದಸ್ಯರಲ್ಲಿ 12 ಸದಸ್ಯರ ಬಿಜೆಪಿ ಅಧಿಕ ಸ್ಥಾನ ಪಡೆದಿದೆ. ಕಾಂಗ್ರೆಸ್, ಜೆಡಿಎಸ್‍ನ ತಲಾ 10 ಸದಸ್ಯರು ಹಾಗೂ ಮೂವರು ಪಕ್ಷೇತರರು ಕಳೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಈ ಪೈಕಿ 22ನೇ ವಾರ್ಡಿನ ಜೆಡಿಎಸ್ ಸದಸ್ಯರ ನಿಧನದಿಂದ ಪಕ್ಷಕ್ಕೆ ಒಂದು ಸ್ಥಾನ ಕಡಿಮೆಯಾಗಿ, ಅದನ್ನು ಉಳಿಸಿಕೊಳ್ಳು ಜೆಡಿಎಸ್ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ. ರಾಜ್ಯದ ಮೈತ್ರಿ ಸರ್ಕಾರದ ಮಾದರಿಯಲ್ಲಿ ನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನ ಮೈತ್ರಿ ಆಡಳಿತವಿದೆ.

       ಕಾಂಗ್ರೆಸ್, ಜೆಡಿಎಸ್‍ಗಿಂತಾ ಹೆಚ್ಚಿನ ಸ್ಥಾನ ಪಡೆದ ಬಿಜೆಪಿ ವಿರೋಧ ಪಕ್ಷದ ಸ್ಥಾನದಲ್ಲಿ ತೃಪ್ತಿಪಟ್ಟುಕೊಳ್ಳಬೇಕಾಗಿದೆ. 22ನೇ ವಾರ್ಡಿನ ಉಪ ಚುನಾವಣೆ ಗೆಲ್ಲುವ ಯಾವ ಪಕ್ಷಕ್ಕೂ ಪಾಲಿಕೆಯ ಆಡಳಿತ ಹಿಡಿಯುವಷ್ಟು ಅನುಕೂಲವಾಗದು. ಆದರೆ ಪಕ್ಷದ ಅಸ್ಥಿತ್ವ ಉಳಿಸಿಕೊಳ್ಳಲು ಚುನಾವಣೆ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ.

       ಈ ವಾಡಿನಲ್ಲಿ ಸುಮಾರು 5,300 ಮತದಾರರಿದ್ದಾರೆ. ಎರಡು ಹೆದ್ದಾರಿ ಕೂಡುವ ಪ್ರತಿಷ್ಠಿತ ಬಟವಾಡಿ ವೃತ್ತ ಸೇರಿ, ವಿದ್ಯಾನಗರದ ಪೂರ್ವ ಭಾಗ, ಭಾರತಿನಗರ, ಹೊಸಳಯ್ಯನ ತೋಟ, ವಾಲ್ಮೀಕಿ ನಗರ, ಚೌಡೇಶ್ವರಿ ನಗರ 22ನೇ ವಾರ್ಡ್ ವ್ಯಾಪ್ತಿಯಲ್ಲಿವೆ. ಎಲ್ಲಾ ವರ್ಗದ ಜನರನ್ನು ಒಳಗೊಂಡ ಇಲ್ಲಿ ನಗರದ ಇತರೆ ವಾರ್ಡುಗಳಲ್ಲಿರುವಂತಹ ರಸ್ತೆ, ಚರಂಡಿ, ಕುಡಿಯುವ ನೀರು, ಅನೈರ್ಮಲ್ಯದ ಸಾಮಾನ್ಯ ಸಮಸ್ಯೆಗಳಿವೆ. ಕಾಲೋನಿಗಳಿಗೆ ಶೌಚಾಯ, ಶುದ್ಧ ಕುಡಿಯುವ ನೀರಿನ ಘಟಕಗಳು ಬೇಕು. ಪಾರ್ಕ್‍ಗಳ ಅಭಿವೃದ್ಧಿಗಾಗಬೇಕು. ಸ್ಮಾರ್ಟ್ ಸಿಟಿಗೆ ಪೂರಕವಾದ ನಾಗರೀಕ ಸೌಲಭ್ಯಗಳು ತಮಗೂ ನೀಡಬೇಕು ಎಂಬುದು ಇಲ್ಲಿನ ನಿವಾಸಿಗಳ ಒತ್ತಾಯ.

     ಅಕ್ಕ ತಂಗಿ ಕೆರೆ ಅಂಗಳವನ್ನು ಉದ್ಯಾನವನವಾಗಿ ಅಭಿವೃದ್ಧಿಪಡಿಸುವ ಕೆಲಸ ಪೂರ್ಣಗೊಂಡಿಲ್ಲ. ಒಳ ಚರಂಡಿಯ ಕೊಳಚೆಯನ್ನು ಅಕ್ಕತಂಗಿ ಕೆರೆಗೆ ಹರಿಯಬಿಡಲಾಗಿದೆ. ಕೊಳಚೆಯಿಂದ ದುರ್ವಾಸನೆ, ಸೊಳ್ಳೆ ಕಾಟ ಹೆಚ್ಚಾಗಿದೆ ಎಂಬುದು ವಿದ್ಯಾನಗರ ಹಾಗೂ ಹೊಸಳಯ್ಯನ ತೋಟ ಪ್ರದೇಶದ ನಿವಾಸಿಗಳ ಸಂಕಟ. ಕೆರೆಗೆ ಬಿಟ್ಟಿರುವ ಕೊಳಚೆ ಸ್ವಚ್ಚಗೊಳಿಸಿ, ಸಮಸ್ಯೆ ಬಗೆಹರಿಸಿ ಎಂದು ಹಲವು ವರ್ಷಗಳಿಂದ ಹೋರಾಟ ನಡೆದಿದ್ದರೂ ಯಾರೂ ಗಮನಹರಿಸಿಲ್ಲ ಎಂಬುದು ನಿವಾಸಿಗಳ ಅಸಮಾಧಾನ.

     ಈ ಸ್ಥಿತಿಯಲ್ಲಿ 22ನೇ ವಾರ್ಡಿಗೆ ಮತ್ತೊಂದು ಚುನಾವಣೆ ಬಂದಿದ್ದು ಮತದಾರುರು ಯಾರ ಪರ ಒಲವು ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ವಾರ್ಡ್ ವ್ಯಾಪ್ತಿಯ ಆರು ಮತಗಟ್ಟೆಗಳಲ್ಲಿ ಈ ತಿಂಗಳ 29ರಂದು ಮತದಾನ ನಡೆಯಲಿದೆ. 31 ರಂದು ಮತ ಎಣಿಕೆಯಾಗಿ ಫಲಿತಾಂಶ ಪ್ರಕಟವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap