ನೆರೆ ಸಂತ್ರಸ್ತರ ನೆರವಿಗೆ 2,950 ಕೋಟಿ ರೂ ಬಿಡುಗಡೆ : ಯಡಿಯೂರಪ್ಪ

ಬೆಂಗಳೂರು

      ರಾಜ್ಯದ ನೆರೆ ಸಂತ್ರಸ್ತರಿಗೆ ಶಕ್ತಿಮೀರಿ ಸಹಾಯ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು ಇದಕ್ಕಾಗಿ 2,950 ಕೋಟಿ ರೂ ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿಧಾನಸಭೆಗಿಂದು ಹೇಳಿದ್ದಾರೆ.

    ಅತಿವೃಷ್ಟಿ ಕುರಿತು ನಡೆದ ಸಾರ್ವಜನಿಕ ಮಹತ್ವದ ಚರ್ಚೆಗೆ ಸಂಕ್ಷಿಪ್ತವಾಗಿ ಉತ್ತರ ನೀಡಿದ ಅವರು, ಸಂತ್ರಸ್ತರ ಸಂಕಷ್ಟಕ್ಕೆ ಸರ್ಕಾರ ಧಾವಿಸಿದ್ದು, ಅವರಿಗೆ ಎಲ್ಲಾ ರೀತಿಯ ಮಾನವೀಯತೆಯ ನೆರವು ಕಲ್ಪಿಸಲಾಗುತ್ತಿದೆ. ಇದು ರಾಜ್ಯದ ಜವಾಬ್ದಾರಿಯಾಗಿದೆ. ಸರ್ಕಾರ ತನ್ನ ಹಣಕಾಸಿನ ಇತಿಮಿತಿ ನೋಡಿಕೊಂಡು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಲಿದೆ. ಮುಂದಿನ ಬಜೆಟ್ ನಲ್ಲಿ ಇದಕ್ಕಾಗಿ ಹೆಚ್ಚು ಹಣ ಮೀಸಲಿಟ್ಟು ಅವರಿಗೆ ಇನ್ನೂ ಹೆಚ್ಚು ಅನುಕೂಲ ಮಾಡಿಕೊಡಲಾಗುವುದು ಎಂದರು.

    ನದಿ ಪಾತ್ರದಲ್ಲಿ ಮುಳುಗಡೆಯಾಗುವ ಗ್ರಾಮಗಳನ್ನು ಶಾಶ್ವತವಾಗಿ ಎತ್ತರದ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುವುದು. ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಎ ಕ್ಯಾಟಗರಿಯಲ್ಲಿ 11,687 ಹಾಗೂ ಬಿ ಕ್ಯಾಟಗರಿಯಲ್ಲಿ 31,000 ಮನೆಗಳಿಗೆ ಹಾನಿಯಾಗಿದ್ದು ಒಟ್ಟಾರೆ ಎರಡು ಸೇರಿದರೆ 42 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಎನ್ ಡಿ ಆರ್ ಎಫ್ ನಿಯಮ ಮೀರಿ ಐದು ಲಕ್ಷ ರೂ ಗಳನ್ನು ಮನೆ ಕಟ್ಟಿಕೊಳ್ಳಲು ಸಂತ್ರಸ್ತರಿಗೆ ನೀಡುತ್ತೇವೆ ಎಂದು ಅವರು ಭರವಸೆ ಕೊಟ್ಟರು.

     ಇನ್ನು ಖುಷ್ಕಿ ಜಮೀನಿಗೆ ಸಂಬಂಧಪಟ್ಟಂತೆ, ಎನ್ ಡಿ ಆರ್ ಎಫ್ ನಿಯಮದ ಪ್ರಕಾರ ಹೆಕ್ಟೇರ್ ಗೆ 6,800 ರೂ ಪರಿಹಾರ ಕೊಡಬೇಕು. ಅದಕ್ಕೆ ರಾಜ್ಯ ಸರ್ಕಾರ 10 ಸಾವಿರ ರೂ ಸೇರಿಸಿ ಹೆಕ್ಟೇರ್ ಗೆ 16,800 ರೂ ಕೊಡಲಿದೆ ಎಂದರು.

    ತೋಟಗಾರಿಕಾ ಬೆಳೆಗಳಿಗೆ 13,500 ರೂ ಬದಲಿಗೆ ರಾಜ್ಯ ಸರ್ಕಾರ 10 ಸಾವಿರ ರೂ ಸೇರಿಸಿ 23,500 ರೂ ಅನ್ನು; ಅದೇ ರೀತಿ ಅಡಿಕೆ, ರೇಷ್ಮೆ ಬೆಳೆಗಾರರಿಗೂ ಎನ್ ಡಿ ಆರ್ ಎಫ್ ನಿಯಮ ಮೀರಿ ಹತ್ತು ಸಾವಿರ ರೂ ಹೆಚ್ಚು ಪರಿಹಾರ ನೀಡಲಾಗುವುದು. ನೇಕಾರರು ಮತ್ತು ನಗರ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಂಡವರಿಗೂ ತಲಾ 25 ಸಾವಿರ ರೂ ಪರಿಹಾರ ನೀಡಲಾಗುವುದು. ಮಳೆ ಮತ್ತು ಪ್ರವಾಹದಿಂದ 7,19,000 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಜಮೀನಿಗೆ ಹಾನಿಯಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರಿಸಿದರು.

     ರಾಜ್ಯದಲ್ಲಿ ಇರುವ ಆರ್ಥಿಕ ಇತಿಮಿತಿಗಳ ಒಳಗೆ ಮಳೆ ಬಂದು ಮೂರು ದಿನಗಳಲ್ಲಿಯೇ 2,33,633 ಜನರಿಗೆ ತಲಾ 10 ಸಾವಿರ ರೂ ನಂತೆ ಹಣವನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಅಪಾರ ಪ್ರಮಾಣದ ಮಳೆಯಿಂದಾಗಿ ರಸ್ತೆ ಹಾನಿಯಾಗಿದ್ದು 8 ಸಾವಿರ ಕೋಟಿರೂ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 500 ಕೋಟಿರೂ ಹಣವನ್ನು ತುರ್ತು ಕಾಮಗಾರಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

    ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ,ರಾಜ್ಯದ 22 ಜಿಲ್ಲೆಗಳ 103 ತಾಲೂಕಿನ 2,798 ಹಳ್ಳಿಗಳು ತೊಂದರೆಗೀಡಾಗಿದ್ದು 22 ಜಿಲ್ಲೆಗಳನ್ನು ಪ್ರವಾಹ ಪೀಡಿತ ಜಿಲ್ಲೆಗಳಾಗಿ ಘೋಷಣೆ ಮಾಡಲಾಗಿದೆ. ಮಳೆ ಹಾನಿಯಿಂದ ತೊಂದರೆಗೀಡಾದ ಜನರ ನೆರೆವಿಗೆ ಸುಮಾರು 2800 ಕೋಟಿ ರೂ ನೀಡುವ ಬಗ್ಗೆ ತೀರ್ಮಾನ ಕೈಗೊಂಡಿದ್ದು ಶೀಘ್ರದಲ್ಲಿ ಆರ್ ಟಿಜಿಎಸ್ ಮೂಲಕ ಹಣವನ್ನು ಬಿಡುಗಡೆ ಮಾಡಲಾಗು ವುದು ಎಂದರು.

     ನೆರೆ ಸಂತ್ರಸ್ಥರಿಗಾಗಿ 1445 ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿತ್ತು.ಗುಣಮಟ್ಟದ ಆಹಾರವನ್ನು ನೀಡಲಾಗಿದ್ದು, 4415 ವೈದ್ಯಕೀಯ ಶಿಬಿರದಲ್ಲಿ 10,326 ಆರೋಗ್ಯ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಸರ್ಕಾರದಿಂದ 2,69000 ಆಹಾರ ಕಿಟ್ ಗಳನ್ನು ಸಂತ್ರಸ್ಥರಿಗೆ ಹಂಚಿಕೆ ಮಾಡಲಾಗಿದ್ದು, ಮಲೆನಾಡು ಪ್ರದೇಶಗಳಲ್ಲಿಯೂ ಪರಿಹಾರವನ್ನು ವಿತರಿಸಲಾಗಿದೆ. ಸಂತ್ರಸ್ಥರಿಗೆ ಪ್ರತೀ ತಿಂಗಳು 5000 ರೂ ನಂತೆ 10 ತಿಂಗಳಿಗೆ 50 ಸಾವಿರ ರೂ ನೆರೆವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದರು.ಅತಿವೃಷ್ಠಿಯಿಂದಾಗಿ ಮನೆಗೆ ನೀರು ನುಗ್ಗಿದ ಕುಟುಂಬಗಳಿಗೆ ಪರಿಹಾರ ದೊರೆಯದೇ ಇದ್ದಲ್ಲಿ ಮರು ಸಮೀಕ್ಷೆ ಮಾಡುವುದರ ಜೊತೆಗೆ ಪರಿಹಾರ ನೀಡಲಾಗುವುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಲಹೆಗೆ ಮುಖ್ಯಮಂತ್ರಿ ಅವರು ಭರವಸೆ ನೀಡಿದರು.

     ರಾಜ್ಯದಲ್ಲಿ ಅತಿವೃಷ್ಠಿಯಿಂದಾಗಿ 7,92 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ., 1.09 ಲಕ್ಷ ತೋಟಗಾರಿಕಾ ಬೆಳೆ,1,06,25 ಹೆಕ್ಟೇರ್ ಪ್ರದೇಶವನ್ನು ಕಾಫಿ ಬೆಳೆ ಹಾನಿ,244.45 ಹೆಕ್ಟೇರ್ ರೇಷ್ಮೆ ಬೆಳೆ ಹಾನಿ,ರಾಜ್ಯ ಮತ್ತು ಜಿಲ್ಲಾ 4119 ಕಿ ಮೀ. ಹೆದ್ದಾರಿ ,ಗ್ರಾಮೀಣ ರಸ್ತೆಗಳ 16,921 ಕಿ.ಮೀ ,ನಗರದ 2778 ಕಿ.ಮೀ ಹಾಗೂ 2913 ಸೇತುವೆಗಳು ಹಾನಿಯಾಗಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap