ಜಿಲ್ಲೆಗೆ 299.32 ಕೋಟಿ ಅನುದಾನ ಹಂಚಿಕೆ

ಚಿತ್ರದುರ್ಗ 

         ಚಿತ್ರದುರ್ಗ ಜಿಲ್ಲೆಗೆ ರಾಜ್ಯ ಹಾಗೂ ಜಿಲ್ಲಾ  ವಲಯದಿಂದ ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆಯಡಿ ರೂ. 299.32 ಕೋಟಿ ಅನುದಾನ ಹಂಚಿಕೆಯಾಗಿದ್ದು ಇದರಲ್ಲಿ ಶೇ 23 ರಷ್ಟು ಮಾತ್ರ ಖರ್ಚಾಗಿದೆ. ಯೋಜನೆ, ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ತಲುಪಿಸಿ ಸಕಾಲದಲ್ಲಿ ಅನುದಾನ ವೆಚ್ಚ ಮಾಡಲು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದರು.

         ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಸ್.ಸಿ.ಪಿ. ಹಾಗೂ ಟಿ.ಎಸ್.ಪಿ.ಯಡಿ ವಿವಿಧ ಇಲಾಖೆಗಳಿಂದ ಸಾಧನೆ ಮಾಡಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

          ಈಗಾಗಲೇ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮೂರನೇ ತ್ರೈಮಾಸಿಕದಲ್ಲಿದ್ದರೂ ಕೆಲವು ಇಲಾಖೆಗಳು ಶೂನ್ಯ ಸಾಧನೆಯಲ್ಲಿವೆ. ಈಗಾಗಲೇ ರಾಜ್ಯ ವಲಯದಿಂದ ಸೆಪ್ಟೆಂಬರ್ ತಿಂಗಳಲ್ಲಿ ಕ್ರಿಯಾ ಯೋಜನೆ ಸಿದ್ದಪಡಿಸಿ ಅನುದಾನ ಹಂಚಿಕೆ ಮಾಡಿ ಮೂರನೇ ತ್ರೈಮಾಸಿಕದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

           ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿಗೆ ಸ್ಪ್ರಿಂಕ್ಲೇರ್ ಸೆಟ್ ಪಡೆಯಲು 2.60 ಕೋಟಿ ಎಸ್.ಸಿ.ಪಿ.ಯಡಿ ನಿಗದಿ ಮಾಡಲಾಗಿದೆ. ಶೇ 10 ರಷ್ಟು ಫಲಾನುಭವಿ ಭರಿಸಿದಲ್ಲಿ ಶೇ 90 ರಷ್ಟು ಸಹಾಯಧನದಡಿ ನೀಡಲಾಗುತ್ತದೆ. ಆದರೆ ಇಷ್ಟೂ ಅನುದಾನ ಖರ್ಚಾಗುವುದಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಯಲ್ಲಿ ತಿಳಿಸಿದರು.

           ಹಿಂದುಳಿದ ಜಿಲ್ಲೆ ಇದಾಗಿದ್ದು ಫಲಾನುಭವಿಗಳಿಲ್ಲ ಎಂದು ಹೇಳಬೇಡಿ, ಯೋಜನೆ, ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕಾಗಿದೆ. ಈ ವೇಳೆ ಜಂಟಿ ಕೃಷಿ ನಿರ್ದೇಶಕರು ಎಸ್.ಸಿ.ಪಿ., ಟಿ.ಎಸ್.ಪಿ.ಯಡಿ ಬೇಡಿಕೆ ಕಡಿಮೆ ಇದ್ದು ಸಾಮಾನ್ಯ ದಲ್ಲಿ ಹೆಚ್ಚು ಅನುದಾನ ಕೋರಲಾಗಿದೆ ಎಂದಾಗ ಸಾಮಾನ್ಯ ಯೋಜನೆ ಬೇರೆ, ಈ ಯೋಜನೆ ಬೇರೆಯಾಗಿದ್ದು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.

           ಮೀನುಗಾರಿಕೆ ಇಲಾಖೆಯಿಂದ ಸಾಧನೆಯಾಗದಿರುವ ಬಗ್ಗೆ ಪರಿಶೀಲನೆ ನಡೆಸಿ ಅನುದಾನ ಹಂಚಿಕೆಯಾಗಿದ್ದು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ ಫಲಾನುಭವಿಗಳಿಗೆ ಅನುಮೋದನೆ ಪಡೆಯಬೇಕಾಗಿದ್ದು ಪಡೆದ ನಂತರ ಎಲ್ಲಾ ಫಲಾನುಭವಿಗಳಿಗೂ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಹಿರಿಯ ಸಹಾಯಕ ನಿರ್ದೇಶಕಿ ಸಭೆಗೆ ತಿಳಿಸಿದರು.

           ಲೋಕೋಪಯೋಗಿ ಇಲಾಖೆಗೆ ಎಸ್.ಸಿ.ಪಿ.ಯಡಿ 22.63 ಕೋಟಿ ಹಾಗೂ ಟಿ.ಎಸ್.ಪಿ.ಯಡಿ 20.49 ಕೋಟಿ ಹಂಚಿಕೆಯಾಗಿದ್ದು ಅನುದಾನ ಬಿಡುಗೆಯಾಗಿದ್ದರೂ ಖರ್ಚಾಗದಿರುವ ಬಗ್ಗೆ ವಿವರ ಪಡೆದ ಜಿಲ್ಲಾಧಿಕಾರಿ ಕಾಮಗಾರಿಗಳಿಗೆ ಆದಷ್ಟು ಬೇಗ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ಅನುಷ್ಟಾನ ಮಾಡಲು ಸೂಚನೆ ನೀಡಿದರು. ಪರಿಶಿಷ್ಟರ ಕಾಲೋನಿಯಲ್ಲಿ ಸಿ.ಸಿ.ರಸ್ತೆ, ಚರಂಡಿ, ರಸ್ತೆಯ ನಿರ್ಮಾಣ ಮಾಡಿ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಎಸ್.ಸಿ.ಪಿ, ಟಿ.ಎಸ್.ಪಿ.ಯಡಿ ವಿವಿಧ 40 ಇಲಾಖೆಗಳು ಇದರ ವ್ಯಾಪ್ತಿಗೆ ಬರಲಿದ್ದು ಈಗಾಗಲೇ ಅನುದಾನ ಬಿಡುಗಡೆಯಾಗಿದ್ದು ಮುಂದಿನ ಸಭೆಯ ವೇಳೆಗೆ ಎಲ್ಲಾ ಇಲಾಖೆಗಳು ನಿಗಧಿತ ಪ್ರಗತಿ ಸಾಧಿಸಬೇಕೆಂದು ಸೂಚನೆ ನೀಡಿ ಆಯಾ ಮಾಹೆಯ ಪ್ರಗತಿ ವಿವರವನ್ನು ಕಡ್ಡಾಯವಾಗಿ ಸಮಾಜ ಕಲ್ಯಾಣ ಇಲಾಖೆಗೆ ನೀಡಲು ಸೂಚನೆ ನೀಡಿದರು.

          ಎಸ್.ಸಿ.ಪಿ.ಯಡಿ 169.87 ಕೋಟಿ, ಟಿ.ಎಸ್.ಪಿ.ಯಡಿ 129.45 ಕೋಟಿ ಅನುದಾನ ಹಂಚಿಕೆಯಾಗಿದೆ. ಇದರಲ್ಲಿ ಈವರೆಗೆ ಎಸ್.ಸಿ.ಪಿ.ಯಡಿ 41.83 ಕೋಟಿ ಹಾಗೂ ಟಿ.ಎಸ್.ಪಿ.ಯಡಿ 26.02 ಕೋಟಿ ಸೇರಿ 67.8 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 67.42 ಕೋಟಿ ವೆಚ್ಚ ಮಾಡಿದ್ದು ಹಂಚಿಕೆಯಾದ ಅನುದಾನದಲ್ಲಿ ಶೇ 23 ರಷ್ಟು ಮಾತ್ರ ಖರ್ಚು ಮಾಡಲಾಗಿದೆ. ಈಗಾಗಲೇ ಮೂರನೇ ತ್ರೈಮಾಸಿಕ ಮುಕ್ತಾಯದ ಹಂತದಲ್ಲಿದ್ದು ಮುಂದಿನ ತ್ರೈಮಾಸಿಕದಲ್ಲಿ ಶೇ 77 ರಷ್ಟು ಸಾಧನೆ ಮಾಡಬೇಕಾಗಿದ್ದು ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಸಾಧನೆಗೆ ಮುಂದಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜಪ್ಪ, ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಖ ರಾಜಶೇಖರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link