ದಾವಣಗೆರೆ:
ಅನ್ನ ಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಸಾಗಾಟ ಮಾಡುತ್ತಿರುವುದರ ಬಗ್ಗೆ, ಮಾಹಿತಿ ನೀಡುವುದಾಗಿ ಹೇಳಿ, ಆಹಾರ ನಿರೀಕ್ಷಕರೊಬ್ಬರನ್ನು ಕರೆಸಿ ಸಿನಿಮಿಯ ರೀತಿಯಲ್ಲಿ ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಆರ್‍ಎಂಸಿ ಯಾರ್ಡ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಚೌಕಿಪೇಟೆ ಜುಬ್ಲಿ ಬಾವಿ ರಸ್ತೆ ನಿವಾಸಿ, ಬಿಟಿ ಪೆಟ್ರೋಲ್ ಬಂಕ್‍ನ ವ್ಯವಸ್ಥಾಪಕ ಅಬ್ದುಲ್ ರೆಹಮಾನ್(32 ವರ್ಷ), ಚಾರ್ಲಿ ಪೈಲ್ವಾನ್ ಮನೆಯ ಸಮೀಪದ ನಿವಾಸಿ, ಆಟೋ ಚಾಲಕ ಮಹಮ್ಮದ್ ಯೂನಸ್(24 ವರ್ಷ) ಹಾಗೂ ನೂರಾನಿ ಮಸೀದಿ ಬಳಿಯ ನಿವಾಸಿ, ಕೂಲಿ ಕೆಲಸಗಾರ ಜಾಫರ್(20 ವರ್ಷ) ಬಂಧಿತ ಆರೋಪಿಗಳಾಗಿದ್ದು, ಇವರನ್ನು ಚಿತ್ರದುರ್ಗ ತಾಲೂಕು ಕಚೇರಿಯ ಆಹಾರ ನಿರೀಕ್ಷಕ ವಿ.ತಿಪ್ಪೇಶಪ್ಪ ಅವರನ್ನು ಕೊಲೆ ಮಾಡಲು ಪ್ರಯತ್ನಿಸಿದ ಆರೋಪದದ ಹಿನ್ನೆಲೆಯಲ್ಲಿ ಘಟನೆಗೆ ಬಳಸಿದ ಬೈಕ್‍ಗಳು, ಮಾರಕಾಸ್ತ್ರಗಳ ಸಮೇತ ಬಂಧಿಸಲಾಗಿದೆ.
ಇದೇ ಮೇ.24 ರಂದು ಆಹಾರ ನಿರೀಕ್ಷಕ ತಿಪ್ಪೇಶಪ್ಪನವರ ಮೊಬೈಲ್‍ಗೆ ವ್ಯಕ್ತಿಯೊಬ್ಬರು ಕರೆ ಮಾಡಿ, ದಾವಣಗೆರೆಯಲ್ಲಿ ಅನ್ನ ಭಾಗ್ಯದ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವುದರ ಬಗ್ಗೆ ಹಾಗೂ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಸಮಗ್ರ ಮಾಹಿತಿ ನೀಡುವುದಾಗಿ, ಹೇಳಿದ ಹಿನ್ನೆಲೆಯಲ್ಲಿ ತಿಪ್ಪೇಶಪ್ಪನವರು ಅಂದು ರಾತ್ರಿ 8.50ಕ್ಕೆ ತಿಪ್ಪೇಶಪ್ಪ ಚಿತ್ರದುರ್ಗದಿಂದ ದಾವಣಗೆರೆಗೆ ಬಂದು, ತಮಗೆ ಕರೆ ಮಾಡಿದ್ದ ವ್ಯಕ್ತಿಗೆ ಸಂಪರ್ಕಿಸಿದ ನಂತರ ಕರೆ ಮಾಡಿದ್ದ ವ್ಯಕ್ತಿ ಆನಂದ್ ರೆಸಿಡೆನ್ಸಿ ಬಳಿ ಬಂದು, ತಿಪ್ಪೇಸ್ವಾಮಿ ಅವರನ್ನು ಆವರಗೆರೆ ಹೊರ ವಲಯದ ಉತ್ತಮಚಂದ್ ಬಡಾವಣೆಯತ್ತ ಬೈಕ್‍ನಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಹಿಂಬದಿಯಿಂದ ಬೈಕ್‍ನಲ್ಲಿ ಇಬ್ಬರು ಯುವಕರು ಬೈಕ್‍ನಲ್ಲಿ ಬಿಳಿ ಬಟ್ಟೆಯಲ್ಲಿ ಉದ್ದನೆಯ ವಸ್ತು ಇಟ್ಟುಕೊಂಡು ತಿಪ್ಪೇಶಪ್ಪನವರನ್ನು ಹಿಂಬಾಲಿಸುತ್ತಿರುವುದನ್ನು ಕಂಡು, ತಿಪ್ಪೇಶಪ್ಪ ಕುಳಿತಿದ್ದ ಬೈಕ್ ಸ್ಕಿಡ್ ಮಾಡಿದಂತಾಗಿದ್ದರಿಂದ ಬೈಕ್ ಓಡುಸುತ್ತಿದ್ದ ಅಬು ಅಲಿಯಾಸ್ ಅಬ್ದುಲ್ ರೆಹಮಾನ್ ನೆಲಕ್ಕೆ ಬೀಳುತ್ತಾನೆ. ಅಷ್ಟರಲ್ಲಿ ಹಿಂಬಾಲಿಸುತ್ತಿದ್ದ ಇಬ್ಬರು ಯುವಕರೂ ತಮ್ಮ ಬಳಿ ಇದ್ದ ಮಾರಕಾಸ್ತ್ರಗಳಿಂದ ತಿಪ್ಪೇಶಪ್ಪನ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ. ಆಗ ಅಕ್ಕಿ ಕಳ್ಳರ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿ ಕರಿಸಿದ್ದ, ಅಬು ಅಲಿಯಾಸ್ ಅಬ್ದುಲ್ ರೆಹಮಾನ್ ಒಡೆದು ಹಾಕಿ ಒಂದು ತಿಪ್ಪೇಶಪ್ಪನ ಮೇಲೆ ಎರಗಿ ಬೀಳುತ್ತಾನೆ.
ಅನ್ನ ಭಾಗ್ಯದ ಪಡಿತರದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಆಗುತ್ತಿರುವುದರ ಬಗ್ಗೆ ಮಾಹಿತಿ ನೀಡುವುದಾಗಿ ಕರೆಸಿದ ವ್ಯಕ್ತಿವು, ಅಕ್ಕಿ ಮಾಫಿಯದವರೊಂದಿಗೆ ಸೇರಿ, ಕೊಲೆಗೆ ಸಂಚು ರೂಪಿಸಿರುವದನ್ನು ಗ್ರಹಿಸಿದ ಆಹಾರ ನಿರೀಕ್ಷಕ ತಿಪ್ಪೇಶಪ್ಪ ಜೋರಾಗಿ ಕೂಗಿಕೊಳ್ಳುತ್ತಾ, ದೂರದವರೆಗೂ ಓಡಿ ಹೋಗಿ, ಸಾರ್ವಜನಿಕರ ಮನೆಯ ಬಳಿ ಹೋಗಿ ಮತ್ತಷ್ಟು ಜೋರಾಗಿ ಕೂಗುತ್ತಾರೆ. ಗಲಾಟೆಯಿಂದ ಮನೆಗಳಲ್ಲಿದ್ದ ಜನರು ಹೊರಗೆ ಬರುತ್ತಿದ್ದಂತೆ, ಮಾರಕಾಸ್ತ್ರಗಳಿಂದ ಹತ್ಯೆಗೆ ಯತ್ನಿಸಿದ ಅಬು ಅಲಿಯಾಸ್ ಅಬ್ದುಲ್ ರೆಹಮಾನ್, ಮಹಮ್ಮದ್ ಯೂನಸ್, ಜಾಫರ್ ಅಲ್ಲಿಂದ ಕತ್ತಲಲ್ಲಿ ಬೈಕ್‍ಗಳನ್ನೇರಿ ಪರಾರಿಯಾಗಿದ್ದಾರೆ.
ನಂತರ ತಿಪ್ಪೇಶಪ್ಪ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆಗೆ ತೆರಳಿ, ತಮ್ಮ ಮೇಲೆ ಕೊಲೆ ಯತ್ನ ನಡೆದಿರುವ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಆರೋಪಿಗಳ ಬಂಧನಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್, ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್, ಡಿಎಸ್ಪಿ ಎಸ್.ಎನ್.ನಾಗರಾಜ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಶ್ರೀನಿವಾಸರಾವ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡದಲ್ಲಿದ್ದ ಆರ್‍ಎಂಸಿ ಠಾಣೆ ಎಸ್‍ಐ ಡಿ.ಶಿವಕುಮಾರ ಮತ್ತು ಸಿಬ್ಬಂದಿಯಾದ ಆಂಜನೇಯ, ಶಿವಕುಮಾರ, ಪ್ರಸನ್ನಕುಮಾ, ಗುಗ್ಗರಿ ಲೋಕೇಶ, ವೀರೇಶ ಮತ್ತಿತರರು ತಿಪ್ಪೇಶಪ್ಪನವರ ಮೊಬೈಲ್‍ಗೆ ಕರೆ ಹೋಗಿದ್ದ ಮೊಬೈಲ್ ನಂಬರ್‍ನ ಜಾಡು ಹಿಡಿದು, ಆರೋಪಿಗಳಾದ ಅಬು ಅಲಿಯಾಸ್ ಅಬ್ದುಲ್ ರೆಹಮಾನ್, ಮಹಮ್ಮದ್ ಯೂನಸ್, ಜಾಫರ್‍ನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಬೈಕ್‍ಗಳು, ಲಾಂಗ್‍ನ್ನು ಜಪ್ತು ಮಾಡಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.