ನಕಲಿ ನೋಟು ಚಲಾವಣೆ : ಮೂವರ ಬಂಧನ..!!!

ಬೆಂಗಳೂರು

       ಎರಡು ಸಾವಿರ, ಐನೂರರ ಮುಖಬೆಲೆಯ ಖೋಟಾನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ಡ್ರೈವರ್‍ಗಳು ಹಾಗೂ ಫೋಟೋಗ್ರಾಫರ್‍ನನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿ ಕೃತ್ಯದ ಕಿಂಗ್‍ಪಿನ್‍ಗಾಗಿ ತೀವ್ರ ಶೋಧ ನಡೆಸಿದ್ದಾರೆ.

        ಬಿಎಂಟಿಸಿಯಲ್ಲಿ ಚಾಲಕ ಕಂ ಕಂಡಕ್ಟರ್ ಆಗಿದ್ದ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಲಕ್ಕಿಹಾಳದ ಸೋಮನಗೌಡ ಅಲಿಯಾಸ್ ಸೋಮ (38), ಬಿಎಂಟಿಸಿಯಲ್ಲಿ ಚಾಲಕನಾಗಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ ದೊಡ್ಡಮತ್ತಿಘಟ್ಟದ ನಂಜೇಗೌಡ ಅಲಿಯಾಸ್ ಸ್ವಾಮಿ (32) ಹಾಗೂ ಪೋಟೋಗ್ರಾಫರ್ ಆಗಿದ್ದ ಚನ್ನರಾಯಪಟ್ಟಣದ ಕಿರಣ್ ಕುಮಾರ್ ಅಲಿಯಾಸ್ ಕಿರಣ್ ಬಂಧಿತ ಆರೋಪಿಗಳಾಗಿದ್ದಾರೆ.

        ಬಂಧಿತರಿಂದ 81 ಲಕ್ಷ 30 ಸಾವಿರ ರೂ. ಗಳ ಖೋಟಾನೋಟುಗಳು ಸ್ಕಾನಿಂಗ್ ಮಿಷಿನ್ ಕಂಪ್ಯೂಟರ್‍ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬಂಧಿತರು ಕಳೆದ ಏ. 26 ರಂದು ಮಧ್ಯಾಹ್ನ ಕೋಗಿಲು ಕ್ರಾಸ್ ಬಳಿ ಖೋಟಾನೋಟುಗಳನ್ನು ಚಲಾವಣೆ ಮಾಡುತ್ತಿದ್ದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಯಲಹಂಕ ಪೊಲೀಸ್ ಇನ್ಸ್‍ಪೆಕ್ಟರ್ ರಾಮಕೃಷ್ಣ ರೆಡ್ಡಿ, ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದೆ

      ಆರೋಪಿ ಸೋಮನಗೌಡ ಕಾರ್ಯನಿರ್ವಹಿಸುವ ವೇಳೆ ಪ್ರಯಾಣಿಕನ ಸೋಗಿನಲ್ಲಿ ಬಂದ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಆತ 1 ಲಕ್ಷ ರೂ. ಗಳಿಗೆ 2 ಲಕ್ಷ ರೂ. ಗಳನ್ನು ನೀಡುವುದಾಗಿ ತಿಳಿಸಿದ್ದಾನೆ. ಆತನ ಮಾತನ್ನು ನಂಬಿದ ಸೋಮನಗೌಡ 1 ಲಕ್ಷ ರೂ. ಅಸಲಿ ನೋಟುಗಳನ್ನು ಕೊಟ್ಟು 2 ಲಕ್ಷ ನಕಲಿ ನೋಟುಗಳನ್ನು ಪಡೆದು ಚಲಾವಣೆ ಮಾಡಿದ್ದ.

         ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ ತಮ್ಮೂರಿನಲ್ಲಿದ್ದ ಜಮೀನು ಮಾರಾಟ ಮಾಡಿ 8 ಲಕ್ಷ ರೂ. ಹಣವನ್ನು ತಂದು ಅದನ್ನು ನಕಲಿ ನೋಟು ನೀಡಿದ್ದ ವ್ಯಕ್ತಿಗೆ ಕೊಟ್ಟು ದುಪ್ಪಟ್ಟು ನಕಲಿ ನೋಟು ಕೊಡುವಂತೆ ಕೇಳಿದ್ದ. ಕೆಲದಿನಗಳ ಕಾಲ ನಕಲಿ ನೋಟುಗಳನ್ನು ಕೊಡದೆ ಸತಾಯಿಸುತ್ತಿದ್ದ ವ್ಯಕ್ತಿಯು ಕೊನೆಗೆ ಸೋಮನಗೌಡನ ಕಾಟ ತಾಳಲಾರದೆ, ನಕಲಿ ನೋಟು ತಯಾರಿಸುವ ತಂತ್ರಜ್ಞಾನವನ್ನು ಹೇಳಿಕೊಟ್ಟಿದ್ದ.

ವಿಶೇಷ ತಂಡ ರಚನೆ

       ಆರೋಪಿಯು ನಕಲಿ ನೋಟು ಸಿದ್ಧಪಡಿಸುವ ತಂತ್ರಜ್ಞಾನದಿಂದ ಸುಮಾರು 81 ಲಕ್ಷ 30 ಸಾವಿರ ರೂ. ನಕಲಿ ನೋಟುಗಳನ್ನು ಸೋಮನಗೌಡ ಸ್ಕ್ಯಾನ್ ಮೂಲಕ ತಯಾರಿಸಿ, ಅವುಗಳನ್ನು ಮತ್ತೊಬ್ಬ ಆರೋಪಿ ನಂಜೇಗೌಡನ ಜೊತೆ ಸೇರಿ ಚಲಾವಣೆ ಮಾಡುವಾಗ ಫೋಟೋಗ್ರಾಫರ್ ಕಿರಣ್ ಕುಮಾರ್ ಪರಿಚಿತನಾಗಿದ್ದು, ಆತನ ಮೂಲಕವೂ ನಕಲಿ ನೋಟು ದಂಧೆ ನಡೆಸುತ್ತಿದ್ದರು.ಆರೋಪಿಗಳು ವಿಚಾರಣೆ ವೇಳೆ ತಂತ್ರಜ್ಞಾನ ಹೇಳಿಕೊಟ್ಟ ಚಿತ್ರದುರ್ಗ ಮೂಲದ ವ್ಯಕ್ತಿಯ ಮಾಹಿತಿ ನೀಡಿದ್ದು, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.

       ನಕಲಿ ನೋಟು ದಂಧೆ ಹಾಗೂ 62 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, 15ಕ್ಕೂ ಹೆಚ್ಚು ಅಪರಾಧ ಪ್ರಕರಣಗಳನ್ನು ಬೇಧಿಸಿದ ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಸ್ವಾಮಿ ಅವರ ನೇತೃತ್ವದ ತಂಡಕ್ಕೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಸುನಿಲ್ ಕುಮಾರ್ ಘೋಷಿಸಿದರು.ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap