`ಸ್ಮಾರ್ಟ್‍ಸಿಟಿ’ ಯೋಜನೆಯಡಿ ನಗರದ ಎಂ.ಜಿ.ರಸ್ತೆಯ 3 ಕನ್ಸರ್‍ವೆನ್ಸಿಗಳಲ್ಲಿ ಪಾರ್ಕಿಂಗ್‍ಗೆ ಸಿದ್ಧತೆ

ತುಮಕೂರು

        ತುಮಕೂರು ನಗರದ ಅತ್ಯಂತ ಪ್ರಮುಖ ರಸ್ತೆಗಳಲ್ಲೊಂದಾದ ಹಾಗೂ ನಗರದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ರಸ್ತೆಯ ಮೂರು ಕನ್ಸರ್‍ವೆನ್ಸಿಗಳನ್ನು `ಸ್ಮಾರ್ಟ್ ಸಿಟಿ’ ಯೋಜನೆಯಡಿ ದ್ವಿಚಕ್ರ ವಾಹನಗಳ ಪಾರ್ಕಿಂಗ್‍ಗೆ ಅನುಕೂಲವಾಗುವಂತೆ ಸಿದ್ಧಗೊಳಿಸುವ ಯೋಜನೆ  ಭರದಿಂದ ಅನುಷ್ಠಾನವಾಗುತ್ತಿದೆ.

       ನಗರದ ವಿವಿಧ ಬಡಾವಣೆಗಳಲ್ಲಿರುವ ಕನ್ಸರ್‍ವೆನ್ಸಿಗಳನ್ನು ತುಮಕೂರು ಮಹಾನಗರ ಪಾಲಿಕೆಯ ಹಿಂದಿನ ಕೌನ್ಸಿಲ್ ಲಕ್ಷಾಂತರ ರೂ. ಅಂದಾಜು ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿಗಳನ್ನು ಕೈಗೊಂಡು ಜಾರಿಗೊಳಿಸಿತ್ತು. ಅದರಂತೆ ಮಹಾತ್ಮಗಾಂಧಿ ರಸ್ತೆಗೆ ಸಂಪರ್ಕವುಳ್ಳ ಕನ್ಸರ್‍ವೆನ್ಸಿಗಳನ್ನೂ ಕಾಂಕ್ರಿಟ್‍ನಿಂದ ಸಜ್ಜುಗೊಳಿಸಲಾಗಿತ್ತು. ಇದೀಗ ಸದರಿ ಕನ್ಸರ್‍ವೆನ್ಸಿಗಳಲ್ಲಿ ಮೊದಲ ಮೂರು ಕನ್ಸರ್‍ವೆನ್ಸಿಗಳನ್ನು ಆಯ್ಕೆ ಮಾಡಿಕೊಂಡು ದ್ವಿಚಕ್ರ ವಾಹನಗಳ ನಿಲುಗಡೆಗೆ ಬಳಸಿಕೊಳ್ಳಲು ಯೋಜಿಸಲಾಗಿದೆ.

         ಮಹಾತ್ಮಗಾಂಧಿ ರಸ್ತೆ ಮತ್ತು ಜನರಲ್ ಕಾರಿಯಪ್ಪ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ಈ ಮೂರು ಕನ್ಸರ್‍ವೆನ್ಸಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಜನರಲ್ ಕಾರಿಯಪ್ಪ ರಸ್ತೆಯನ್ನು `ಸ್ಮಾರ್ಟ್‍ಸಿಟಿ’ ಯೋಜನೆಯಡಿಯಲ್ಲಿ “ಸ್ಮಾರ್ಟ್ ರಸ್ತೆ”ಯನ್ನಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿಯನ್ನು ಈಗಾಗಲೇ ಆರಂಭಿಸಿರುವ ಹಿನ್ನೆಲೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಪಾರ್ಕಿಂಗ್‍ಗಾಗಿ ಉಪಯೋಗಿಸುವ ಈ ಯೋಜನೆ ಮಹತ್ವ ಪಡೆದುಕೊಂಡಿದೆ.

         32.96 ಲಕ್ಷ ರೂ. ಯೋಜನೆ, 502 ವಾಹನ ನಿಲುಗಡೆಗೆ ವಿನ್ಯಾಸ ಒಟ್ಟು 32.96 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಈ ಮೂರು ಕನ್ಸರ್‍ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕನ್ಸರ್‍ವೆನ್ಸಿಯಲ್ಲಿರುವ ಚರಂಡಿ ಸುವ್ಯವಸ್ಥೆ, ಕಾಂಕ್ರೀಟೀಕರಣ, ಎರಡೂ ಬದಿಯ ಗೋಡೆಗಳಿಗೆ ಬಿಳಿ ಮತ್ತು ತಿಳಿನೀಲಿ ಬಣ್ಣದ ಪಟ್ಟಿಗಳನ್ನು ಬಳಿಯುವುದು, ಎರಡೂ ತುದಿಗಳಲ್ಲಿ ಸೆಕ್ಯೂರಿಟಿ ಕ್ಯಾಬಿನ್ ನಿರ್ಮಾಣ, ದ್ವಿಚಕ್ರ ವಾಹನಗಳ ವ್ಯವಸ್ಥಿತ ನಿಲುಗಡೆಗಾಗಿ ಬಣ್ಣದಿಂದ ಪಟ್ಟಿ ಬಳಿಯುವುದು, ಉದ್ದಕ್ಕೂ ಹೂವಿನಕುಂಡಗಳನ್ನಿಟ್ಟು ಗಿಡಗಳನ್ನು ಬೆಳೆಸುವುದು ಈ ಯೋಜನೆಯ ಮುಖ್ಯಾಂಶಗಳಾಗಿವೆ.

        ಒಂದು ಬದಿಯಿಂದ ಇನ್ನೊಂದು ಬದಿಗೆ 200 ಮೀಟರ್ ಉದ್ದವಿರುವ ಈ ಮೂರೂ ಕನ್ಸರ್‍ವೆನ್ಸಿಗಳಿಂದ ಸೈಕಲ್ ನಿಲುಗಡೆ ಸೇರಿ ಒಟ್ಟು 502 ದ್ವಿಚಕ್ರ ವಾಹನಗಳನ್ನು ನಿಲುಗಡೆಗೊಳಿಸಲು ಸಾಧ್ಯವಾಗುವಂತೆ ವಿನ್ಯಾಸ ಮಾಡಲಾಗಿದೆ.

        ಶ್ರೀದೇವಿ ಆಸ್ಪತ್ರೆ ಹಿಂಬದಿಯ ಮೊದಲನೇ ಕನ್ಸರ್‍ವೆನ್ಸಿಯು ಸುಮಾರು 20 ಅಡಿ ಅಗಲದಷ್ಟು ವಿಶಾಲವಾಗಿರುವುದರಿಂದ ಇಲ್ಲಿ ಎರಡೂ ಬದಿ ದ್ವಿಚಕ್ರ ವಾಹನ ನಿಲುಗಡೆಗೆ ಯೋಜಿಸಲಾಗಿದೆ. ಹಟ್ ಹೋಟೆಲ್ ಹಿಂಭಾಗದ ಎರಡನೇ ಕನ್ಸರ್‍ವೆನ್ಸಿ ಮತ್ತು ಹಳೆಯ ಪ್ರಿಯಾ ವೆಜ್ ಹೋಟೆಲ್ ಪಕ್ಕದ ಕನ್ಸರ್‍ವೆನ್ಸಿಯು ತಲಾ ಸುಮಾರು 15 ಅಡಿಗಳಷ್ಟು ಅಗಲಿವಿದ್ದು, ಇವೆರಡರಲ್ಲೂ ಒಂದು ಬದಿ ಮಾತ್ರ ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಮಾಡಲಾಗುತ್ತಿದೆ.

         ಮೊದಲನೇ ಕನ್ಸರ್‍ವೆನ್ಸಿಯಲ್ಲಿ 260 ದ್ವಿಚಕ್ರ ವಾಹನಗಳು, ಎರಡನೇ ಕನ್ಸರ್‍ವೆನ್ಸಿಯಲ್ಲಿ 130 ದ್ವಿಚಕ್ರ ವಾಹನಗಳು ಮತ್ತು ಮೂರನೇ ಕನ್ಸರ್‍ವೆನ್ಸಿಯಲ್ಲಿ 112 ದ್ವಿಚಕ್ರ ವಾಹನಗಳ (ಸೈಕಲ್ ಸೇರಿ) ನಿಲುಗಡೆಗೆ ಸ್ಥಳಾವಕಾಶವಿರುತ್ತದೆ. ಮೂರನೇ ಕನ್ಸರ್‍ವೆನ್ಸಿಯಲ್ಲಿ ಮಾತ್ರ ದ್ವಿಚಕ್ರ ವಾಹನಗಳ ಜೊತೆಗೆ ನಿಗದಿತ ಸ್ಥಳದಲ್ಲಿ ಸೈಕಲ್‍ಗಳ ನಿಲುಗಡೆಗೂ ಪ್ರತ್ಯೇಕ ಅವಕಾಶ ಕಲ್ಪಿಸಲಾಗುತ್ತಿದೆಯೆಂಬುದು ಗಮನಾರ್ಹ.

         ಮೊದಲನೇ ಕನ್ಸರ್‍ವೆನ್ಸಿಯಲ್ಲಿ ಎರಡೂ ಬದಿ ದ್ವಿಚಕ್ರ ವಾಹನ ನಿಲುಗಡೆ ಆಗುವುದರಿಂದ ಎರಡೂ ಸಾಲುಗಳಲ್ಲಿ ತಲಾ ಎಂಟರಂತೆ ಒಟ್ಟು 16 ಹೂವಿನ ಕುಂಡಗಳನ್ನು, ಎರಡನೇ ಮತ್ತು ಮೂರನೇ ಕನ್ಸರ್‍ವೆನ್ಸಿಗಳಲ್ಲಿ ಒಂದು ಬದಿ ಮಾತ್ರ ವಾಹನ ನಿಲುಗಡೆಗೆ ಅವಕಾಶವಿರುವುದರಿಂದ ಎರಡೂ ಕನ್ಸರ್‍ವೆನ್ಸಿಗಳಲ್ಲಿ ಒಂದು ಸಾಲಿನಲ್ಲಿ ಎಂಟು ಹೂವಿನ ಕುಂಡಗಳನ್ನು ಇರಿಸಲಾಗುವುದು. ಒಟ್ಟಾರೆ ಮೂರೂ ಕನ್ಸರ್‍ವೆನ್ಸಿಗಳಲ್ಲಿ ಒಟ್ಟು 32 ಹೂವಿನ ಕುಂಡಗಳಿರಲಿವೆ. ಇವುಗಳಲ್ಲಿ ನಿಗದಿಪಡಿಸಲಾದ ಗಿಡಗಳನ್ನೇ ಬೆಳೆಸಬೇಕಾಗಿದೆ. ತುಮಕೂರಿನ ಎಚ್.ಜಿ. ಉದಯರವಿ ಅವರು ಈ ಕಾಮಗಾರಿಯ ಗುತ್ತಿಗೆದಾರರಾಗಿದ್ದು, ನಾಲ್ಕು ತಿಂಗಳ ಕಾಲಾವಧಿಯಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕಾಗಿದೆ.

         ಈ ಹಿಂದೆ ಕನ್ಸರ್‍ವೆನ್ಸಿಯನ್ನು ಕಾಂಕ್ರಿಟ್ ಹಾಕಿ ಅಭಿವೃದ್ಧಿಪಡಿಸಿದ ಬಳಿಕ ಇವುಗಳಲ್ಲಿ ಮಹಾತ್ಮ ಗಾಂಧಿ ರಸ್ತೆ ಮತ್ತು ಕಾರಿಯಪ್ಪ ರಸ್ತೆಗಳಲ್ಲಿರುವ ರಸ್ತೆ ಬದಿ ವ್ಯಾಪಾರಸ್ಥರನ್ನು ಇಲ್ಲಿಗೆ ಸ್ಥಳಾಂತರಿಸಬೇಕೆಂಬ ವಿಷಯ ಚರ್ಚೆಗೆ ಬಂದಿತ್ತು. ಮೊದಲಿಗೆ ಈ ಹಿಂದಿನ ಪಾಲಿಕೆಯಲ್ಲಿ ನಿರ್ಣಯವೂ ಆಗಿತ್ತು.

          ಆದರೆ ಇದಕ್ಕೆ ಸ್ಥಳೀಯ ನಿವಾಸಿಗಳು ಮತ್ತು ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಆಗ ಮತ್ತೆ ಪಾಲಿಕೆಯ ಸಭೆಯಲ್ಲಿ ಹಿಂದಿನ ನಿರ್ಣಯ ಬದಲಿಸಿ, ಪಾರ್ಕಿಂಗ್ ಉದ್ದೇಶಕ್ಕೆ ಮಾತ್ರ ಬಳಸಲು ತೀರ್ಮಾನಿಸಲಾಗಿತ್ತು. ಆದರೆ ಆ ವಿಷಯವೂ ನೆನೆಗುದಿಗೆ ಬಿದ್ದಿದ್ದರಿಂದ, ಕಾಂಕ್ರಿಟ್ ಆಗಿದ್ದ ಕನ್ಸರ್‍ವೆನ್ಸಿಗಳಲ್ಲಿ ಮತ್ತೆ ಕಸದ ರಾಶಿ ಬಿತ್ತು. ವಿಷಯ ಅಲ್ಲಿಗೇ ಸ್ಥಗಿತಗೊಂಡಿತ್ತು. ಆದರೆ ಇದೀಗ ಕಾರಿಯಪ್ಪ ರಸ್ತೆ `ಸ್ಮಾರ್ಟ್ ಸಿಟಿ’ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಅದಕ್ಕೆ ಹೊಂದಿಕೊಂಡಂತೆಯೇ ಇರುವ ಹಾಗೂ ಪಕ್ಕದ ಮಹಾತ್ಮಗಾಂಧಿ ರಸ್ತೆಗೆ ನೇರ ಸಂಪರ್ಕ ಕಲ್ಪಿಸುವಂತಹ ಈ ಕನ್ಸರ್‍ವೆನ್ಸಿಗಳನ್ನು ಸದುಪಯೋಗಪಡಿಸಿಕೊಳ್ಳುವ ವಿಷಯ ಮುನ್ನಲೆಗೆ ಬಂದು, ಪ್ರಸ್ತುತ ಕನ್ಸರ್‍ವೆನ್ಸಿಗಳು ಭರದಿಂದ ಸಿದ್ಧಗೊಳ್ಳುತ್ತಿವೆ

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link