ಪ್ಲಾಸ್ಟಿಕ್ ನಿಷೇಧ ಜಾರಿಗೆ 3 ದಿನಗಳ ಗಡುವು

ತುಮಕೂರು
      ತುಮಕೂರು ನಗರದಲ್ಲಿ ಪ್ಲಾಸ್ಟಿಕ್ ಕವರ್, ಫ್ಲೆಕ್ಸ್ ಇತ್ಯಾದಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲು ಮೂರು ದಿನಗಳ ಗಡುವು ನೀಡುತ್ತಿರುವುದಾಗಿ ಪಾಲಿಕೆಯ ಆಯುಕ್ತ, ಐ.ಎ.ಎಸ್. ಅಧಿಕಾರಿ ಟಿ. ಭೂಬಾಲನ್ ಪ್ರಕಟಿಸಿದರು.
     ಜನಾಗ್ರಹದ ಮೇರೆಗೆ ತುಮಕೂರು ಪಾಲಿಕೆಗೆ ರಾಜ್ಯ ಸರ್ಕಾರದಿಂದ ಪುನರ್ ನೇಮಕಗೊಂಡ ತಕ್ಷಣವೆ ಬುಧವಾರ ಬೆಳಗ್ಗೆ ಪಾಲಿಕೆ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ತಮ್ಮನ್ನು ಭೇಟಿಯಾದ ಪತ್ರಕರ್ತರ ಜೊತೆ ಮಾತನಾಡುತ್ತ ಅವರು ಈ ವಿಷಯ ತಿಳಿಸಿದರು.
     ಮುಂದಿನ ಮೂರು ದಿನಗಳ ಕಾಲಾವಕಾಶವನ್ನು ಕೊಡಲಾಗುತ್ತಿದೆ. ಅಷ್ಟರೊಳಗೆ ನಗರದ ಎಲ್ಲೆಡೆ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲೆಬೇಕು. ಪ್ಲಾಸ್ಟಿಕ್ ಕವರ್ ಮೊದಲಾದ ನಿಷೇಧಿತ ಪ್ಲಾಸ್ಟಿಕ್‍ಗಳನ್ನು ಯಾರೂ ಸಹ ಉಪಯೋಗಿಸಬಾರದು. ಒಂದು ವೇಳೆ ಯಾರಾದರೂ ದಾಸ್ತಾನು ಹೊಂದಿದ್ದರೆ ತಕ್ಷಣವೆ ಪಾಲಿಕೆಯ ವಶಕ್ಕೆ ಒಪ್ಪಿಸಿಬಿಡಬೇಕು.
 
     ಇಲ್ಲದಿದ್ದರೆ ಪಾಲಿಕೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ಸಿಕ್ಕಿ ಬಿದ್ದರೆ, ಅಂತಹ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗುವುದಲ್ಲದೆ ದಂಡವನ್ನೂ ವಿಧಿಸಲಾಗುವುದು. ಇದೇ ರೀತಿ ಸರ್ಕಾರದ ನಿಯಮದ ಪ್ರಕಾರ ಫ್ಲೆಕ್ಸ್ ಅಳವಡಿಕೆಯೂ ಅಕ್ರಮವಾಗಿರುವುದರಿಂದ ಫ್ಲೆಕ್ಸ್‍ಗಳನ್ನೂ ತೆರವುಗೊಳಿಸಲಾಗುವುದು ಎಂದು ಅವರು ಸ್ಪಷ್ಟ ಶಬ್ದಗಳಲ್ಲಿ ಹೇಳಿದರು. 
    ತುಮಕೂರು ನಗರದ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಈ ವಿಷಯದಲ್ಲಿ ಎಲ್ಲ ಸಾರ್ವಜನಿಕರೂ ಪಾಲಿಕೆಯ ಜೊತೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡರು. ಈ ಮೊದಲು ಪಾಲಿಕೆಯ ಆಯುಕ್ತರಾಗಿದ್ದು ನಡುವೆ ಹಠಾತ್ತನೆ ಬೆಳಗಾವಿಗೆ ವರ್ಗಾವಣೆ ಗೊಂಡಿದ್ದು, ಮೂರು ತಿಂಗಳುಗಳ ಗ್ಯಾಪ್ ಬಳಿಕ ಈಗ ಮತ್ತೆ ಪಾಲಿಕೆ ಆಯುಕ್ತರ ಜವಾಬ್ದಾರಿ ವಹಿಸಿಕೊಂಡೊಡನೆ ಅವರು ಹಮ್ಮಿಕೊಳ್ಳುತ್ತಿರುವ ಆಡಳಿತಾತ್ಮಕ ಮೊದಲನೇ ಕ್ರಮ ಇದಾಗಿದೆ.
ಕಾಮಗಾರಿ ಚುರುಕಿಗೆ ಕ್ರಮ
    ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್‍ಸಿಟಿ ವತಿಯಿಂದ ಹಲವು ಕಾಮಗಾರಿಗಳು ನಗರದಲ್ಲಿ ನಡೆಯುತ್ತಿವೆ. ಆದರೆ ಇವುಗಳು ನಾನಾ ಕಾರಣಗಳಿಂದ ಮಂದಗತಿಯಲ್ಲಿವೆ ಹಾಗೂ ಗುಣಮಟ್ಟದಿಂದಿಲ್ಲವೆಂಬ ದೂರುಗಳೂ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಇವುಗಳು ಕ್ಷಿಪ್ರಗತಿಯಲ್ಲಿ ಸಾಗಲು ಹಾಗೂ ಗುಣಮಟ್ಟದಿಂದ ನಡೆಯುವಂತೆ ಮಾಡಲು ಸಂಬಂಧಿಸಿದ ವ್ಯವಸ್ಥೆಯನ್ನು ಚುರುಕುಗೊಳಿಸÀಲಾಗುವುದು ಎಂದು ಹೇಳಿದರು. 
ಸಂಪನ್ಮೂಲ ಸಂಗ್ರಹ ಹಿನ್ನಡೆ
    ಪಾಲಿಕೆಯ ಸಂಪನ್ಮೂಲ ಸಂಗ್ರಹ ಬಗ್ಗೆ ಪ್ರಸ್ತಾಪಿಸಿದ ಭೂಬಾಲನ್, ಸಂಪನ್ಮೂಲ ಕ್ರೋಡೀಕರಣ ಪಾಲಿಕೆಗೆ ಅತ್ಯಂತ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಪಾಲಿಕೆ ಈಗ ನಿರಾಶಾದಾಯಕ ಸ್ಥಿತಿಯಲ್ಲಿದೆ. ಬಿಲ್‍ಗಳ ಮೊತ್ತವನ್ನು ಪಾವತಿ ಮಾಡುವ ವಿಷಯದಲ್ಲಿ ತುಂಬ ಹಿನ್ನಡೆ ಅನುಭವಿಸುತ್ತಿದೆ. ಆದ್ದರಿಂದ ವಿವಿಧ ತೆರಿಗೆ, ಶುಲ್ಕಗಳ ಸಂಗ್ರಹದೊಂದಿಗೆ ಒಟ್ಟಾರೆ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಸೂಕ್ತಕ್ರಮ ಜರುಗಿಸಲಾಗುವುದು ಎಂದರು.
ಕೆರೆಗಳ ಅಭಿವೃದ್ಧಿಗೆ ಕ್ರಮ
    ತಾವು ಈ ಹಿಂದೆ ಇಲ್ಲಿ ಆಯುಕ್ತರಾಗಿದ್ದ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿತ್ತು. ಅಷ್ಟರಲ್ಲಿ ವರ್ಗಾವಣೆ ಆಗಿದ್ದರಿಂದ ಆ ವಿಷಯದಲ್ಲಿ ಪುನಃ ಯಾವುದೇ ಪ್ರಗತಿಯಾಗಿಲ್ಲ. ಈ ಬಾರಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಳೆ ಬಂದರೂ ನಗರದ ಕೆರೆಗಳಿಗೆ ನೀರು ಹರಿದುಬಂದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡಿದ್ದು, ಮುಂದಿನ ಮಳೆಗಾಲದಲ್ಲಾದರೂ ಮಳೆ ನೀರು ಕೆರೆಗಳಿಗೆ ಹರಿದುಬರುವಂತೆ ಅಗತ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಭೂಬಾಲನ್ ಆಶಯವನ್ನು ವ್ಯಕ್ತಪಡಿಸಿದರು. 
ಜನರಿಂದ ಸಂಭ್ರಮಾಚರಣೆ
    ಮಂಗಳವಾರ ಬೆಳಗ್ಗೆಯಷ್ಟೇ ಇದೇ ಟೌನ್ ಹಾಲ್ ವೃತ್ತದಲ್ಲಿ ಭೂಬಾಲನ್ ಅವರ ಪುನರ್ ನೇಮಕಕ್ಕೆ ಒತ್ತಾಯಿಸಿ ಹೋರಾಟ ಮಾಡಿದ್ದ ಗಣ್ಯರು ಮತ್ತು ಸಂಘಟನೆಗಳವರು ಬುಧವಾರ ಬೆಳಗ್ಗೆ ಪಾಲಿಕೆ ಕಚೇರಿಯಲ್ಲಿ ಭೂಬಾಲನ್ ಅವರಿಗೆ ಅದ್ದೂರಿ ಸ್ವಾಗತ ನೀಡಿ ಸಂಭ್ರಮಿಸಿದರು. 
    ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ (ಜೆಡಿಎಸ್), ಹೋರಾಟಗಾರ ಇಮ್ರಾನ್ ಪಾಷ ಮತ್ತು ಮಂಜುನಾಥ ಗೌಡ ಅವರ ನೇತೃತ್ವದಲ್ಲಿ ಈ ಸಂಭ್ರಮಾಚರಣೆ ನಡೆಯಿತು. ರಂಗಕರ್ಮಿ ಡಮರುಗ ಉಮೇಶ್, ಕೊಳಗೇರಿ ಸಂಘಟನೆಯ ಎ.ನರಸಿಂಹ ಮೂರ್ತಿ, ರೈತ ಸಂಘದ ಜಗದೀಶ್, ಕನ್ನಡಪರ ಸಂಘಟನೆಯ ರಕ್ಷಿತ್ ಕರಿಮಣ್ಣೆ, ಕಾಂಗ್ರೆಸ್ ಮುಖಂಡರಾದ ಟಿ.ಬಿ. ಮಲ್ಲೇಶ್ ಮತ್ತು ನಟರಾಜ್, ರಘು ಮೊದಲಾದ ಸುಮಾರು 50 ಜನ ಹೋರಾಟಗಾರರು ಸಮಾವೇಶಗೊಂಡಿದ್ದರು. 
ಶಾಸಕರಿಗೂ ಸಿಹಿ ವಿತರಣೆ
    ಬೆಳಗ್ಗೆ 9-45 ರ ಹೊತ್ತಿಗೆ ಪಾಲಿಕೆ ಕಚೇರಿಗೆ ಆಗಮಿಸಿದ ಭೂಬಾಲನ್ ಅವರು ಆಯುಕ್ತರ ಕೊಠಡಿಗೆ ತೆರಳಿ ಅಧಿಕಾರ ಸ್ವೀಕರಿಸಿದರು. ಇದೇ ಹೊತ್ತಿಗೆ ಈ ಹೋರಾಟಗಾರರ ತಂಡವು ಪಕ್ಕದಲ್ಲೇ ಕೃಷ್ಣರಾಜೇಂದ್ರ ಪುರಭವನದಲ್ಲಿರುವ ಶಾಸಕರ ಕಚೇರಿಗೆ ತೆರಳಿ ಶಾಸಕ ಜ್ಯೋತಿಗಣೇಶ್ ಅವರಿಗೂ ಹೂಗುಚ್ಛ ನೀಡಿ, ಸಿಹಿ ವಿತರಿಸಿ ಮತ್ತೆ ಭೂಬಾಲನ್ ವರ್ಗಾವಣೆಗೊಂಡ ಸಂತಸವನ್ನು ಹಂಚಿಕೊಂಡರು.
ಭೂಬಾಲನ್‍ರಿಗೆ ಸನ್ಮಾನ
    ಬಳಿಕ ಇವರೆಲ್ಲರೂ ನೇರವಾಗಿ ಪಾಲಿಕೆ ಕಚೇರಿಗೆ ಆಗಮಿಸಿ ಆಯುಕ್ತ ಟಿ.ಭೂಬಾಲನ್ ಅವರನ್ನು ಭೇಟಿ ಆದರು. ಅವರಿಗೆ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ, 5 ಅಡಿ ಎತ್ತರದ ಹಾರ ಹಾಕಿ, ಸಿಹಿ ವಿತರಿಸಿ ಸಂಭ್ರಮಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಕಾರ್ಪೊರೇಟರ್ ಪ್ರೆಸ್ ರಾಜಣ್ಣ, ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲಿಗೆ ಭೂಬಾಲನ್ ಅವರು ಎರಡನೇ ಬಾರಿಗೆ ಆಯುಕ್ತರಾಗಿ ನೇಮಕವಾಗಿರುವುದು ವಿಶೇಷವಾಗಿದೆ.
   ಈ ಹಿಂದೆ ಇದೇ ನಗರಸಭೆಯಲ್ಲಿ ಐ.ಎ.ಎಸ್. ಅಧಿಕಾರಿಗಳಾಗಿದ್ದ ಮಣಿವಣ್ಣನ್ ಮತ್ತು ರೋಹಿಣಿ ಸಿಂಧೂರಿ ಅವರು ಅನೇಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದರು. ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ಜನಪರವಾಗಿ ಆಡಳಿತ ನಡೆಸಿದ್ದರು. ಭೂಬಾಲನ್ ರವರೂ ಈಗ ಅದೇ ರೀತಿ ರಾಜಕೀಯ ಒತ್ತಡಗಳಿಗೆ ಮಣಿಯದೆ ಜನಪರವಾಗಿ ಕರ್ತವ್ಯ ನಿರ್ವಹಿಸಬೇಕು. ಇದು ಈ ನಗರದ ಜನರ ಅಪೇಕ್ಷೆಯೂ ಆಗಿದ್ದು, ಈ ನಿಟ್ಟಿನಲ್ಲಿ ಎಲ್ಲ ಹೋರಾಟಗಾರರ ಬೆಂಬಲ ಇರುತ್ತದೆ ಎಂದು ಹೇಳಿದರು. ಡಮರುಗ ಉಮೇಶ್ ಸಹ ಮಾತನಾಡಿದರು. ಬಳಿಕ ಎಲ್ಲರೂ ಹೊರಬಂದು ಪಾಲಿಕೆ ಕಚೇರಿ ಮುಂದೆ ಪಟಾಕಿ ಸರಮಾಲೆ ಸಿಡಿಸಿ ಖುಷಿಪಟ್ಟರು. 
ಅಭಿನಂದನೆ ಮಹಾಪೂರ
    ಭೂಬಾಲನ್ ಅವರು ಅಧಿಕಾರ ಸ್ವೀಕರಿಸಿದ ಕ್ಷಣದಿಂದ ಇಡೀ ದಿನ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂತು. ಪಾಲಿಕೆಯ ಮೇಯರ್ ಲಲಿತಾ ರವೀಶ್ ನೇತೃತ್ವದಲ್ಲಿ ಕೆಲವು ಕಾರ್ಪೊರೇಟರ್‍ಗಳು, ಬಳಿಕ ಇತರೆ ಕಾರ್ಪೊರೇಟರ್‍ಗಳು, ಪಾಲಿಕೆ ಅಧಿಕಾರಿಗಳು-ಸಿಬ್ಬಂದಿ ವರ್ಗದವರು, ಗುತ್ತಿಗೆದಾರರು, ನಗರದ ಗಣ್ಯರು, ಜನಸಾಮಾನ್ಯರು, ಸಂಘಟನೆಗಳವರು, ವಿವಿಧ ಇಲಾಖಾಧಿಕಾರಿಗಳು ಆಗಮಿಸಿ ಭೂಪಾಲರ್ ಅವರಿಗೆ  ಹೂಗುಚ್ಛ ನೀಡಿ, ಮಾಲಾರ್ಪಣೆ ಮಾಡಿ, ಸಿಹಿ ವಿತರಿಸಿ, ಅಭಿನಂದಿಸಿ, ಅವರೊಡನೆ ಫೋಟೋ ತೆಗೆಸಿಕೊಂಡು ಸಂತಸಪಟ್ಟರು. ಇಂತಹ ಅಸಂಖ್ಯಾತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap