ಬೆಂಗಳೂರು
ಬೀದರ್, ಧಾರವಾಡ, ಗದಗ, ಬೆಳಗಾವಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂಗಾರು ಆರ್ಭಟ ಜೋರಾಗಿ ಭಾರೀ ಮಳೆಯಾಗಿದ್ದು, ತಾಯಿ ಮಗ ಸೇರಿ ಒಟ್ಟು ಮೂವರು ಬಲಿಯಾಗಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯಲದಗುಂಡಿ ಗ್ರಾಮದಲ್ಲಿ ಅರ್ಧಗಂಟೆ ಸುರಿದ ದಿಢೀರ್ ಮಳೆಗೆ ತಾಯಿ ಹಾಗೂ ಮಗ ನೀರುಪಾಲಾದ ಘಟನೆ ನಡೆದಿದೆ. ತಾಯಿ ಅನಿತಾ (35), ಮಗ ಭಾಗೇಶ್ (15) ನೀರು ಪಾಲಾದ ದುರ್ದೈವಿಗಳು. ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಅವರು ಹಳ್ಳ ದಾಟುತ್ತಿದ್ದರು. ಈ ವೇಳೆ ಕಾಲು ಜಾರಿ ನೀರಿನಲ್ಲಿ ಮಗ ಕೊಚ್ಚಿ ಹೋಗುವುದನ್ನು ನೋಡಿ ಕಾಪಾಡಲು ಹೋಗಿ ಅನಿತಾ ಅವರು ಕೂಡ ನೀರು ಪಾಲಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮಂಠಾಳ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಮೃತ ದೇಹಗಳಿಗಾಗಿ ಶೋಧ ಕಾರ್ಯ ನಡೆಸಿದರು. ಸ್ವಲ್ಪ ಸಮಯದ ಬಳಿಕ ಭಾಗೇಶ್ ಮೃತದೇಹ ಪತ್ತೆಯಾಗಿದ್ದು, ಅನೀತಾ ಅವರ ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಮಂಠಾಳ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು ಸಾವು
ಸಿಡಿಲು ಬಡಿದು ರೈತ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗದಗ ಜಿಲ್ಲೆಯ ಲಿಂಗದಾಳ ಗ್ರಾಮದಲ್ಲಿ ನಡೆದಿದೆ. ದೇವಕ್ಕ ಚನ್ನಪ್ಪ ದೊಡ್ಡನವರ್ (61) ಮೃತ ರೈತ ಮಹಿಳೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದಿದ್ದು, ದೇವಕ್ಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜಿಲ್ಲೆ ಹಲವೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಹುಕ್ಕೇರಿ ತಾಲೂಕಿನಲ್ಲಿ ಧಾರಕಾರ ಮಳೆಯಾಗಿದೆ. ವರಣನ ಅಬ್ಬರದಿಂದಾಗಿ ರಸ್ತೆಗಳು ನೀರಿನಲ್ಲಿ ಮುಚ್ಚಿಹೋಗಿ, ಸವಾರರು ಪರದಾಡುವಂತಾಯಿತು. ರಾಯಭಾಗ ಜೋಡಕುರಳಿ ಗ್ರಾಮದಲ್ಲಿ ಸಿಡಿಲಿಗೆ 2 ಎಮ್ಮೆ ಬಲಿಯಾಗಿವೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣ ಆರ್ಭಟಿಸಿದ್ದಾನೆ. ಮಳೆ ನೀರಿಗೆ ರಸ್ತೆಗಳು ಕೆರೆಯಂತಾಗಿದ್ದವು. ಇದರಿಂದಾಗಿ ಬೈಕ್ ಸವಾರರು ಪರದಾಡುವಂತಾಯಿತು. ದಾವಣಗೆರೆಯಲ್ಲೂ ಭರ್ಜರಿ ಮಳೆಯಾಗಿದೆ.
ರಾಮನಗರ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದ್ದು, ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಮಳೆಯಿಂದಾಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ಉತ್ತರ ತತ್ತರ
ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಲಕ್ಷ್ಮೀಶ್ವರ, ಬೀದರ್, ಬೆಳಗಾವಿ, ಹಾವೇರಿ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿ ಲಾರಿ, ಬಸ್, ಕಾರು ನೀರು ಪಾಲಾಗಿವೆ. ಒಂದು ಕಡೆ ಮಳೆ ರೈತರ ಮುಖದಲ್ಲಿ ಹರ್ಷತಂದಿದರೆ ಮತ್ತೊಂದೆಡೆ ಮಳೆ ಅವಾಂತರ ಜನರನ್ನು ಬಸವಳಿಯುವಂತೆ ಮಾಡಿದೆ.ಭಾನುವಾರ ರಾತ್ರಿಯಿಡೀ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಸುರಿದ ಮಳೆಗೆ ಜನ ಜೀವನ ನಲುಗಿಹೋಗಿದೆ.
ಆಂಧ್ರ ಪ್ರದೇಶದ ಗಡಿ ಭಾಗವಾದ ಬಳ್ಳಾರಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಸಿರಗುಪ್ಪ ತಾಲ್ಲೂಕಿನ ರಾರಾವಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ ತಡೆಗೋಡೆ ಇಲ್ಲದ ಕಾರಣ 2 ಲಾರಿ ಹಾಗೂ ಬಸ್ ಪಲ್ಟಿ ಹೊಡೆದು ನೀರಿಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.ಜಿಲ್ಲೆಯ ಆಲೂರು ತಾಲ್ಲೂಕಿನ ಗೆಜ್ಜಳ್ಳಿ, ಆಲೂರು, ಹೊಳಗುಂದಿ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಿಂದಾಗಿ ನೀರು ತುಂಬಿ ಹರಿದಿವೆ.
ನಾಲೆಯೊಳಕ್ಕೆ ಬಸ್ ಬೀಳುತ್ತಿದ್ದಂತೆ ಸಾರ್ವಜನಿಕರು ಪ್ರಯಾಣಿಕರನ್ನು ರಕ್ಷಣೆ ಮಾಡಿರುವುದರಿಂದ ಭಾರೀ ಅನಾಹುತ ತಪ್ಪಿದೆ.ಅನೇಕ ವರ್ಷಗಳಿಂದ ಈ ಭಾಗದಲ್ಲಿ ಮಳೆಯಾದರೆ ಸಾಕು ಎಂದು ಜನರು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದರು. ಆದರೆ ಈಗ ಮಳೆ ಅವಾಂತರ ಸೃಷ್ಟಿಸಿದ್ದು ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕದಲ್ಲಿ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಿಸಿಲಿನಿಂದ ಕಂಗೆಟ್ಟಿದ ಜನರಿಗೆ ಮಳೆ ಖುಷಿ ಕೊಟ್ಟಿದೆ. ಕಲ್ಬುರ್ಗಿ, ಬೀದರ್, ಯಾದಗಿರಿ, ವಿಜಯಪುರ, ಕೊಪ್ಪಳ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲ್ಲೂಕಿನ ಹಾರಕೊಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂಬಿ ಹರಿಯುತ್ತಿದ್ದು ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








