ತುಮಕೂರು

ಮಹಿಳೆಯೊಬ್ಬರು ಬಸ್ ಹತ್ತುವಾಗ ಅವರ ಬಳಿ ಇದ್ದ ವ್ಯಾನಿಟಿ ಬ್ಯಾಗ್‍ನಿಂದ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಒಂದು ಲಕ್ಷ ರೂ. ನಗದನ್ನು ಯಾರೋ ಕಳ್ಳರು ಅಪಹರಿಸಿರುವ ಘಟನೆ ನಡೆದಿದೆ.ತಿಪಟೂರು ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಾರ್ಚ್ 4 ರಂದು ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ಈ ಘಟನೆ ಜರುಗಿದೆ.
ಹಾಸನ ನಗರದ ನಿವಾಸಿ ರೂಪಾ ಎಂಬುವವರು ತಮ್ಮ ಬಂಧುವೊಬ್ಬರ ವಿವಾಹಕ್ಕೆಂದು ತುಮಕೂರು ಜಿಲ್ಲೆಯ ತುರುವೇಕೆರೆಗೆ ತೆರಳಲೆಂದು ಬಸ್‍ನಲ್ಲಿ ತಿಪಟೂರಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು. ತಿಪಟೂರಿನಿಂದ ತುರುವೇಕೆರೆಗೆ ತೆರಳಲು ಕೆ.ಎಸ್.ಆರ್.ಟಿ.ಸಿ. ಬಸ್‍ನ ಮುಂದಿನ ಬಾಗಿಲ ಬಳಿ ಬಂದು ಬಸ್ ಹತ್ತುತ್ತಿದ್ದರು. ಆಗ ಜನದಟ್ಟಣಿ ಇದ್ದುದರಿಂದ ತಮ್ಮ ಬಳಿ ಇದ್ದ ವ್ಯಾನಿಟಿ ಬ್ಯಾಗನ್ನು ಮುಂಭಾಗಕ್ಕೆ ಹಾಕಿಕೊಂಡಿದ್ದರು.
ಆ ಸಂದರ್ಭದಲ್ಲಿ ವ್ಯಾನಿಟಿ ಬ್ಯಾಗ್ ಅರ್ಧ ತೆರೆದಿದ್ದುದು ಇವರ ಗಮನಕ್ಕೆ ಬಂತು. ಗಾಬರಿಯಾದ ಇವರು ತಕ್ಷಣವೇ ವ್ಯಾನಿಟಿ ಬ್ಯಾಗ್ ತೆರೆದು ನೋಡಿದಾಗ ಅದರೊಳಗಿದ್ದ ಇನ್ನೊಂದು ಪರ್ಸ್ ಕಾಣೆಯಾಗಿತ್ತು. ಸದರಿ ಪರ್ಸ್‍ನಲ್ಲಿ ಚಿನ್ನದ ಲಾಂಗ್ ಸರ, ನೆಕ್ಲೆಸ್, ಚಿನ್ನದ ಬಳೆಗಳು, ಓಲೆ ಹಾಗೂ ಒಂದು ಲಕ್ಷ ರೂ. ನಗದು ಹಣ ಇತ್ತು. ಮದುವೆ ಮಾಡುತ್ತಿರುವ ಸಂಬಂಧಿಕರಿಗೆ ನೀಡಲೆಂದು ಇವುಗಳನ್ನು ಅವರು ತಂದಿದ್ದರು. ಕಳುವಾಗಿರುವ 138 ಗ್ರಾಂ ತೂಕದ ಚಿನ್ನಾಭರಣಗಳ ಒಟ್ಟು ಮೌಲ್ಯ 3,00,000 ರೂ. ಎಂದು ಅಂದಾಜಿಸಲಾಗಿದೆ. ಜೊತೆಗೆ ಒಂದು ಲಕ್ಷ ರೂ. ನಗದು ಸಹ ಕಳುವಾಗಿದೆ. ಈ ಬಗ್ಗೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 379 ಪ್ರಕಾರ ಮೊಕದ್ದಮೆ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
