ಬೆಂಗಳೂರು
ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು 3 ಲಕ್ಷ ರೂ. ಕಳ್ಳತನ ಮಾಡಿರುವ ದುರ್ಘಟನೆ ಚನ್ನಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ವಿವೇಕಾನಂದ ಬಡಾವಣೆಯ ಬಸವರಾಜ್ ಅರಸ್ ಅವರು ಮನೆಯ ಮುಂದೆ ಕಾರು ನಿಲ್ಲಿಸಿ ಒಳ ಹೋಗಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಖದೀಮರು ಕಾರಿನ ಗ್ಲಾಸ್ ಒಡೆದು 3 ಲಕ್ಷ ರೂ ದೋಚಿ ಪರಾರಿಯಾಗಿದ್ದಾರೆ .ಮನೆಯಲ್ಲಿ ಮದುವೆ ಕಾರ್ಯ ನಿಗದಿಯಾಗಿದ್ದರಿಂದ ಸ್ನೇಹಿತರಿಂದ ಸಾಲ ಪಡೆದುಕೊಂಡು ಹಣ ತಂದಿದ್ದ ಬಸವರಾಜ್ ಕಾರಿನಲ್ಲೇ ಹಣವಿಟ್ಟು ಕುಟುಂಬ ಸದಸ್ಯರನ್ನು ಕರೆತರಲು ಮನೆಯೊಳಗೆ ಹೋಗಿದ್ದಾಗ ಕ್ಷಣಾರ್ಧದಲ್ಲಿ ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿದ್ದಾರೆ.
ಖದೀಮರು ಹೋಂಡಾ ಯೂನಿಕಾರ್ನ್ ಹಾಗೂ ಬಜಾಜ್ ಪಲ್ಸರ್ ಬೈಕ್‌ಗಳಲ್ಲಿ ಬಂದಿದ್ದು, ಡ್ರೈವರ್ ಪಕ್ಕದ ಸೀಟಿನ ಗ್ಲಾಸ್ ಒಡೆದು ಹಣ ದೋಚಿದ್ದಾರೆ ಕಾರಿನ ಗ್ಲಾಸ್ ಒಡೆದ ಶಬ್ದ ಕೇಳಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಎರಡು ಬೈಕ್‌ಗಳಲ್ಲಿ ಖದೀಮರು ಕೃತ್ಯವೆಸಗಿದ್ದಾರೆ.
ಪರಿಚಿತರಿಂದಲೇ ಘಟನೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಕಳ್ಳರ ಗುರುತು ಪತ್ತೆಗಾಗಿ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.
