ತುಮಕೂರು
ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಘಟಾನುಘಟಿ ನಾಯಕರು ಬಂದು ಹೋಗಿದ್ದಾರೆ. ಸಾರ್ವಜನಿಕರನ್ನು ಉದ್ದೇಶಿಸಿ ಹುರಿದುಂಬಿಸಿ ಹೋಗಿದ್ದಾರೆ.
ಉಮೇದುವಾರಿಕೆ ಸಲ್ಲಿಸುವ ಸಂದರ್ಭದಲ್ಲಿ ಶಕ್ತಿ ಪ್ರದರ್ಶನ ಬಿಂಬಿಸಲಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಕಾರ್ಯಕರ್ತರನ್ನು ಕಲೆ ಹಾಕುವಲ್ಲಿ ಯಶಸ್ವಿಯಾಗಿವೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದದ್ದೇ ತಡ ಮತದಾರರನ್ನು ತಲುಪುವ ಬಗ್ಗೆ ಪಕ್ಷಗಳು ಈಗ ಹೆಚ್ಚು ಸಕ್ರಿಯವಾಗಿವೆ.
ಕಾಂಗ್ರೆಸ್‍ನಿಂದ ಮಾಜಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದು ಸುತ್ತು ಹಾಕಿ ಹೋಗಿದ್ದಾರೆ. ಅವರು ಬರುವ ದಿನ ಭರ್ಜರಿ ಜನವೂ ಸೇರಿತ್ತು. ಇನ್ನು ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಎಚ್.ಡಿ.ರೇವಣ್ಣ, ಪ್ರಜ್ವಲ್, ಎಚ್.ಕೆ.ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಉಪ ಮುಖ್ಯಮಂತ್ರಿಗಳಾದ ಡಾ.ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ ಇತರರು ಭಾಗಿಯಾಗಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಹಾಗೂ ಆನಂತರ ವಿಜಯೇಂದ್ರ ಸಭೆ ನಡೆಸಿದ್ದಾರೆ.
ಬಹಿರಂಗ ಪ್ರಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಹೆಚ್ಚು ಕಮ್ಮಿ ಸಮಬಲದಲ್ಲಿಯೇ ತಮ್ಮ ಪ್ರದರ್ಶನ ತೋರ್ಪಡಿಸಿಕೊಳ್ಳುತ್ತಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಮುಗಿಯುವ ವೇಳೆಗೆ ನಾಲ್ಕು ಬಾರಿ ಬಂದು ಹೋಗುತ್ತೇನೆಂದು ಅಭಯ ನೀಡಿದ್ದಾರೆ. ಒಂದು ದಿನ ಸ್ಥಳೀಯವಾಗಿಯೇ ಉಳಿದುಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ್ದ ಟಿ.ಬಿ.ಜಯಚಂದ್ರ ಅವರನ್ನು ಮತ್ತೆ ಗೆಲ್ಲಿಸಿಕೊಳ್ಳಬೇಕು ಎಂಬುದು ಕಾಂಗ್ರೆಸ್ ತವಕ. ಈ ಕಾರಣದಿಂದಾಗಿ ಕಾಂಗ್ರೆಸ್‍ನ ಮುಖಂಡರುಗಳೆಲ್ಲ ಈಗ ಒಂದಾಗಿ ಬಹಿರಂಗ ವೇದಿಕೆಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಮುಂತಾದವರೆಲ್ಲ ಪಕ್ಷದ ಅಭ್ಯರ್ಥಿ ಗೆಲುವಿಗೆ ನಿಂತಿದ್ದಾರೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಈ ಕ್ಷೇತ್ರದಲ್ಲಿ ತಾನೆ ಕಾಂಗ್ರೆಸ್ ಅಭ್ಯರ್ಥಿ ಎಂಬುದು ಖಚಿತವಾಗಿ ಅಂದಿನಿಂದಲೇ ಅಲ್ಲಲ್ಲಿ ಪ್ರಚಾರ ಕಾರ್ಯಗಳನ್ನು ಟಿ.ಬಿ. ಜಯಚಂದ್ರ ಕೈಗೊಳ್ಳುತ್ತಾ ಬಂದರು. ಜೆಡಿಎಸ್ ಹಾಗೂ ಬಿಜೆಪಿ ವಲಯದಲ್ಲಿ ಸಾಕಷ್ಟು ಚರ್ಚೆಗಳಾದವು. ಅಭ್ಯರ್ಥಿ ಘೋಷಣೆಗೆ ಕೊನೆಯವರೆಗೂ ಕಾಯಲಾಯಿತು. ಅಳೆದೂ ತೂಗಿ ಮಾಜಿ ಸಂಸದ ಮೂಡಲಗಿರಿಯಪ್ಪ ಅವರ ಪುತ್ರ ಡಾ.ರಾಜೇಶ್ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿತು. ಇನ್ನು ಜೆಡಿಎಸ್‍ನಿಂದ ದಿವಂಗತ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಟಿಕೆಟ್ ಘೋಷಿಸಿದರು.
ಕಾಂಗ್ರೆಸ್‍ನಲ್ಲಿ ಅಪಸ್ವರಗಳು ಹೆಚ್ಚಾಗಿ ಕೇಳಿಬರುತ್ತಿಲ್ಲ. ಜೆಡಿಎಸ್‍ನಲ್ಲಿ ನನಗೇ ಟಿಕೆಟ್ ಬೇಕೆಂದು ಹಂಬಲಿಸಿದವರು ಇಲ್ಲ. ಬಿಜೆಪಿಯೊಳಗೆ ಇದೇ ಪ್ರಥಮ ಬಾರಿಗೆ ಎದುರಾದ ಅಪಸ್ವರವನ್ನು ಶಮನಗೊಳಿಸುವ ಪ್ರಯತ್ನಗಳು ನಡೆದವು. ಈಗ ಶಾಂತವಾದಂತೆ ಕಾಣುತ್ತಿದೆ. ನಾಮಪತ್ರ ಸಲ್ಲಿಕೆ ಹಾಗೂ ಆನಂತರದ ವಿದ್ಯಮಾನಗಳನ್ನು ಗಮನಿಸುತ್ತಾ ಹೋದರೆ ಕಾಂಗ್ರೆಸ್ ಹೆಚ್ಚು ಪ್ರಚಾರ ಸಭೆಗಳನು ನಡೆಸುತ್ತಾ ಮುಂದುವರೆದಿದ್ದರೆ, ಬಿಜೆಪಿ ತನ್ನದೇ ಆದ ತಂತ್ರಗಾರಿಕೆಯಲ್ಲಿ ಮಗ್ನವಾಗಿದೆ.
ಯುವಕರನ್ನು ಹೆಚ್ಚು ಆಕರ್ಷಿಸಲು ಬಿಜೆಪಿ ಮುಂದಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದೇ ಕಾರಣಕ್ಕೆ ಬಿ.ವೈ.ವಿಜಯೇಂದ್ರ ಕ್ಷೇತ್ರಕ್ಕೆ ಬರಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ತಮ್ಮದೇ ಪಕ್ಷದ ಆಡಳಿತ ಇರುವ ಕಾರಣ ಹೇಗಾದರೂ ಸರಿ ಈ ಕ್ಷೇತ್ರವನ್ನು ನಾವು ಪಡೆಯಲೇಬೇಕೆಂಬ ತೀರ್ಮಾನ ಮಾಡಿಕೊಂಡಿರುವ ಬಿಜೆಪಿ ಇನ್ನಿಲ್ಲದ ತಂತ್ರಗಳನ್ನು ರೂಪಿಸುತ್ತಿದೆ. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರು ದಿಢೀರ್ ಗಡಿಭಾಗ ಮಡಕಶಿರಾ ತಾಲ್ಲೂಕು ನೀಲಕಂಠಾಪುರದ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ರಘುವೀರಾರೆಡ್ಡಿ ಅವರನ್ನು ಭೇಟಿ ಮಾಡುವ ಹಂತಕ್ಕೆ ಹೋಗಿದ್ದಾರೆಂದರೆ ಆ ಪಕ್ಷದ ಸ್ಟ್ರ್ಯಾಟಜಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ರಘುವೀರಾರೆಡ್ಡಿ ಯಾದವ ಸಮುದಾಯದಲ್ಲಿ ಹಾಗೂ ಇತರೆ ಹಿಂದುಳಿದ ವರ್ಗಗಳಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದವರು. ಮಧುಗಿರಿ, ಶಿರಾ, ಪಾವಗಡ ಭಾಗದಲ್ಲಿ ಇವರ ಜನಪ್ರಿಯತೆ ಹೆಚ್ಚು. ಹೀಗಾಗಿ ರಘುವೀರಾರೆಡ್ಡಿ ಅವರನ್ನು ಒಲಿಸಿಕೊಂಡರೆ ಗೊಲ್ಲರ ಮತಗಳನ್ನು ಸೆಳೆಯಬಹುದೆಂಬ ತಂತ್ರಗಾರಿಕೆ ಬಿಜೆಪಿಯದ್ದು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತರಾಗಿ ಹಿಂದಿನಿಂದಲೂ ಬಂದಿರುವ ರಘುವೀರಾರೆಡ್ಡಿ ಅವರಿಗೆ ಈ ಜಿಲ್ಲೆಯ ಅನೇಕ ಕಾಂಗ್ರೆಸ್ ಮುಖಂಡರುಗಳ ತೀರಾ ಆತ್ಮೀಯ ಸಂಬಂಧ ಇದೆ. ಹೀಗಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ. ಗೊಲ್ಲರ ಮತಗಳನ್ನು ಸೆಳೆಯಲೆಂದೆ ಇತ್ತೀಚೆಗೆ ಕರ್ನಾಟಕ ಸರ್ಕಾರ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಮುಂದಾಗಿದ್ದು.
ಶಿರಾ ಭಾಗದಲ್ಲಿ ಅಷ್ಟಾಗಿ ಬಿಜೆಪಿ ಒಲವಿಲ್ಲ. ಆದರೆ ಕಳೆದ ಚುನಾವಣೆ ಸಂದರ್ಭದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಪಕ್ಷ ತ್ಯಜಿಸುವವರ ಹಾಗೂ ಪಕ್ಷ ವಿರೋಧಿ ನಿಲುವು ಹೊಂದುವವರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಇಂದೂ ಸಹ ಈ ಪ್ರಕ್ರಿಯೆಗಳು ಮುಂದುವರೆದಿವೆ. ಇದನ್ನೇ ಬಂಡವಾಳ ಮಾಡಿಕೊಂಡು ಪಕ್ಷದತ್ತ ಸೆಳೆಯಲು ಬಿಜೆಪಿ ಮುಖಂಡರು ಗಾಳ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಬಹಿರಂಗ ಪ್ರಚಾರದಲ್ಲಿ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದಿದ್ದರೆ, ಬಿಜೆಪಿಯವರು ಸಮಾರಂಭಗಳ ಜೊತೆಗೆ ಗ್ರಾಮಗಳನ್ನು ತಲುಪುವುದು ಹೇಗೆ ಎಂಬ ಚಾಣಾಕ್ಷ ನೀತಿಯನ್ನು ಹೆಣೆಯುತ್ತಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಭರ್ಜರಿಯಾಗಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸೇರಿದ್ದ ಕಾರ್ಯಕರ್ತರ ದಂಡೇ ಇದಕ್ಕೆ ಸಾಕ್ಷಿ. ಇಲ್ಲಿ ಎದ್ದು ಕಾಣುತ್ತಿರುವ ಕೊರತೆ ಎಂದರೆ ಜೆಡಿಎಸ್ ಮುಖಂಡರು ಅಖಾಡಕ್ಕೆ ಇಳಿಯದೇ ಇರುವುದು. ಆಸಕ್ತಿ ಇರುವ ಕಾರ್ಯಕರ್ತರನ್ನು ಮುಖಂಡರು ಹುರಿದುಂಬಿಸದೆ ಹೋದರೆ ಅಂತಹವರೆಲ್ಲ ಆಸಕ್ತಿ ಕಳೆದುಕೊಳ್ಳುವ ಸಂಭವವೂ ಇದೆ. ಜಿಲ್ಲೆಯಲ್ಲಿ ಜೆಡಿಎಸ್‍ನಿಂದ ಗೆದ್ದು ಮಾಜಿ ಶಾಸಕರಾಗಿರುವವರು ಬಹಳಷ್ಟು ಜನರಿದ್ದಾರೆ. ಅವರಾರೂ ಇಲ್ಲಿ ಕಾಣಿಸಿಕೊಂಡಿಲ್ಲ. ಮುಂದೆ ಬರುವರೋ ತಿಳಿದಿಲ್ಲ. ಆ ವೇಳೆಗಾಗಲೇ ಇತರೆ ಪಕ್ಷದ ಮುಖಂಡರು ಇವರನ್ನೆಲ್ಲಾ ತಮ್ಮತ್ತ ಸೆಳೆದುಕೊಂಡರೆ ಆಶ್ಚರ್ಯವೂ ಇಲ್ಲ. ಆದರೆ ಜೆಡಿಎಸ್ ಮೇಲಿನ ಪಕ್ಷನಿಷ್ಠೆ. ಸತ್ಯನಾರಾಯಣ ಅವರ ಕುಟುಂಬದ ಮೇಲಿನ ಒಲವು ಬೇರೆ ಪಕ್ಷಗಳತ್ತ ಜಿಗಿಯಲು ಬಿಡಲಾರದು ಎಂಬ ಭಾವನೆ ಆ ಪಕ್ಷದ ಕೆಲವರಲ್ಲಿದೆ.
ಒಟ್ಟಾರೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾದ ನಂತರ ಪಕ್ಷಗಳ ಆಂತರಿಕ ವಲಯದಲ್ಲಿ ತಂತ್ರಗಾರಿಕೆಗಳು ತರಹೇವಾರಿ ಪಡೆದುಕೊಂಡಿವೆ. ಪಕ್ಷದ ಘಟಾನುಘಟಿ ಮುಖಂಡರುಗಳು ಅಖಾಡಕ್ಕೆ ಧುಮುಕುವ ಸಾಧ್ಯತೆಗಳು ನಿಚ್ಚಳವಾಗಿವೆ. ಇಡೀ ರಾಜ್ಯದ ಗಮನ ಸೆಳೆಯುತ್ತಿರುವ ಶಿರಾ ವಿಧಾನಸಭಾ ಕ್ಷೇತ್ರ ಅಂತಿಮವಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಿದ್ದಾನೆ ಎಂಬುದನ್ನು ಗಮನಿಸಲು ಇನ್ನೂ ಒಂದಷ್ಟು ದಿನಗಳ ಕಾಲ ಕಾಯಬೇಕು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ