ದಾವಣಗೆರೆ:
ಅಕ್ಟೋಬರ್ 13 ಮತ್ತು 14ರಂದು ಮಲೇಷಿಯಾದಲ್ಲಿ ನಡೆಯಲಿರುವ 32ನೇ ಅಂತರಾಷ್ಟ್ರೀಯ ಮಾಸ್ಟರ್ ಆಫ್ ಅಥ್ಲೆಟಿಕ್ ಚಾಂಪಿಯನ್ ಶಿಫ್‍ಗೆ ನಗರದ ಹಿರಿಯ ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಲಕ್ಷ್ಮಣ್ ರಾವ್ ಸಾಳಂಕಿ, ಗುರುಶಾಂತಪ್ಪ ಹಾಗೂ ನಾಗರಾಜ್ ತಾವರಕೆರೆ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಮಾಸ್ಟರ್ ಅಥ್ಲೆಟಿಕ್ ಅಸೋಸಿಯನ್‍ನ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಸ್ಫರ್ಧೆಯಲ್ಲಿ ಭಾಗವಹಿಸಿ, ಈ ಮೂವರು ವಿಜೇತರಾಗಿ ಆಯ್ಕೆಯಾಗಿದ್ದು, ಇಂದು ಸಂಜೆ ಮಲೇಷಿಯಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಿದರು.
ಬೇರೆ ದೇಶಗಳಲ್ಲಿ ಕ್ರೀಡಾಪಟುಗಳನ್ನು ಉದ್ಯಮಿಗಳು ದತ್ತು ಪಡೆದು ಪೋಷಿಸುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಈ ಕೊರತೆ ಇದೆ. ಆದರೆ, ಕೆಲವರು ನೆರವು ನೀಡುತ್ತಿದ್ದಾರೆ. ಇದರ ಬದಲು ವಿವಿಧ ಕಂಪೆನಿಗಳು, ಕೈಗಾರಿಕೆಗಳು ಕ್ರೀಡಾಪಟುಗಳನ್ನು ದತ್ತು ಪಡೆದು ಪೋಷಣೆ ಮಾಡುವಂತಾಗಬೇಕು. ಪಾಲಿಕೆಯಿಂದ ಕ್ರೀಡಾಪಟುಗಳಿಗೆ ಸಾಧ್ಯವಾದಷ್ಟು ನೆರವು ಕೊಡಿಸಲಾಗುವುದು ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮಣ್ ರಾವ್ ಸಾಳಂಕಿ ಮಾತನಾಡಿ, ಮಲೇಷಿಯಾದಲ್ಲಿ ನಡೆಯಲಿರುವ ಚಾಂಪಿಯನ್‍ಶಿಫ್‍ನಲ್ಲಿ 5 ಕಿ.ಮೀ ಓಟ ಹಾಗೂ 5 ಕಿ.ಮೀ.ನಡಿಗೆ, 1500 ಮೀ ಹಾಗೂ 800 ಓಟದಲ್ಲಿ ಭಾಗವಹಿಸಲಿದ್ದೇನೆ. ಈ ವರೆಗೂ ರಾಜ್ಯ, ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯ ಮಟ್ಟಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 60ಕ್ಕೂ ಹೆಚ್ಚು ಬಂಗಾರ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದೇನೆ. ಆದರೆ, ಏನೂ ಪ್ರಯೋಜನವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಕ್ರೀಡಾಪಟುಗಳಿಗೆ ಸರ್ಕಾರದಿಂದ ಅಗತ್ಯ ಪ್ರೋತ್ಸಾಹ ಹಾಗೂ ನೆರವು ದೊರೆಯುತ್ತಿಲ್ಲ. ಆದರೂ ಕ್ರೀಡಾ ಕ್ಷೇತ್ರದಿಂದ ಹಿಂದೆ ಸರಿಯಬಾರದು ಎಂಬ ಛಲದಿಂದ ಮುಂದಡಿ ಇಡುತ್ತಿದ್ದೇನೆ. ಮಲೇಷಿಯಕ್ಕೆ ಹೋಗಿ ಬರಲು ಸುಮಾರು 74 ಸಾವಿರ ರೂ. ಖರ್ಚು ಆಗಲಿದೆ. ಸ್ನೇಹಿತರು, ಕ್ರೀಡಾ ಪ್ರೋತ್ಸಾಹಕರು ದಾನಿಗಳ ನೆರವಿನಿಂದ ತೆರಳಿದ್ದೇನೆ ಎಂದರು.
ಇನ್ನೋರ್ವ ಹಿರಿಯ ಕ್ರೀಡಾಪಟು ಗುರುಶಾಂತಪ್ಪ ಮಾತನಾಡಿ, ಶಾಟ್ ಫುಟ್. ಲಾಂಗ್ ಜಂಪ್, ಟ್ರಿಪಲ್ ಜಂಪ್, ಹ್ಯಾಮರ್ ಥ್ರೂ ಮತ್ತಿತರ ಕ್ರೀಡೆಗಳಿಗೆ ಆಯ್ಕೆಯಾಗಿದ್ದೇನೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸಾಳಂಕಿ ಅವರ ಪತ್ನಿ ಅಂಬುಜಾ, ಎಂ.ರವಿ ಹಾಜರಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
