3 ಅಂತಸ್ಥಿನ ಕುಸಿತ : ಲಕ್ಷಾಂತರ ರೂ ನಷ್ಟ.!

ಬೆಂಗಳೂರು

  ಜೆ.ಪಿ. ನಗರದ 7ನೇ ಹಂತದ ಪುಟ್ಟೇನಹಳ್ಳಿಯ ವಿವೇಕಾನಂದ ಕಾಲೋನಿಯಲ್ಲಿ ಭಾನುವಾರ ಕುಸಿದುಬಿದ್ದ ಮೂರು ಅಂತಸ್ತಿನ ಕಟ್ಟಡದಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದವರು ಮನೆಯಲ್ಲಿ ದಿನ ಬಳಕೆ ವಸ್ತುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

  ಕಟ್ಟಡ ಕುಸಿತದ ಮುನ್ಸೂಚನೆಯಿದ್ದರೂ ಬೇರೆ ಮನೆ ಸಿಗದ ಹಾಗೂ ಕಟ್ಟಡದ ಮಾಲೀಕ ಮುಂಗಡ ಹಣ ಕೊಡದಿದ್ದರಿಂದ ಮನೆಯಲ್ಲೇ ಉಳಿದುಕೊಂಡ 9 ಮನೆಗಳ ಪೈಕಿ ನಾಲ್ಕು ಮನೆಗಳ ನಿವಾಸಿಗಳು ದಿನ ಬಳಕೆಯ ವಸ್ತುಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ದೃಶ್ಯ ಮನಕಲುಕುವಂತಿದೆ.

    ಕಟ್ಟಡದಲ್ಲಿನ 9 ಮನೆಗಳ ಪೈಕಿ 5 ಮನೆಗಳವರು ಮುನ್ನೆಚ್ಚರಿಕೆಯಿಂದ ಮನೆಗಳನ್ನು ಖಾಲಿಮಾಡಿ ಬೇರೆ ಮನೆಗಳಿಗೆ ತೆರಳಿದ್ದರು. ಆದರೆ ಉಳಿದ ನಾಲ್ಕು ಮನೆಗಳ ನಿವಾಸಿಗಳು ಮಾತ್ರ ಈ ಕಟ್ಟಡದಿಂದ ಸ್ಥಳಾಂತರಗೊಂಡಿರಲಿಲ್ಲ. ಇಂದು ಅಥವಾ ನಾಳೆ ಖಾಲಿ ಮಾಡುವ ಆಲೋಚನೆ ಇಟ್ಟುಕೊಂಡೇ ಕಾಲಕಳೆಯಲಾರಂಭಿಸಿದ್ದರು.

     ನಿವಾಸಿಗಳ ಬೇಜವಾಬ್ದಾರಿಯೇ ಇಂದು ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಕಟ್ಟಡದ ಅವಶೇಷಗಳಡಿ ನಜ್ಜುಗುಜ್ಜಾಗಿವೆ. ಆಹಾರ, ದಿನಸಿ ವಸ್ತುಗಳು, ಮಕ್ಕಳ ಪುಸ್ತಕಗಳು, ಉಡುಪುಗಳು, ಫ್ರಿಡ್ಜ್, ವಾಷಿಂಗ್ ಮಿಷಿನ್, ಎಲ್ಲವೂ ಉಪಯೋಗಕ್ಕೆ ಬಾರದಷ್ಟು ಹಾಳಾಗಿವೆ.
ಕಟ್ಟಡ ಕುಸಿದ ಸ್ವಲ್ಪ ಹೊತ್ತಿನಲ್ಲೇ ಕೆಲ ಮಹಿಳೆಯರು ಕಟ್ಟಡ ಅವಶೇಷಗಳ ನಡುವೆಯೇ ತಮ್ಮ ವಸ್ತುಗಳನ್ನು ರಾತ್ರಿಯೇ ಹುಡುಕಾಟ ನಡೆಸಿದರು.

    ಮಹಿಳೆಯರಂತೂ ತಮ್ಮ ಚಿನ್ನಾಭರಣಗಳನ್ನು ಕೊನೆಗೂ ಪತ್ತೆ ಹಚ್ಚಿ ಸಿಕ್ಕಷ್ಟು ತೆಗೆದುಕೊಂಡಿದ್ದಾರೆ.ಮನೆ ಕುಸಿತವಾಗುವುದು ಗಮನಕ್ಕೆ ಬರುತ್ತಿದ್ದಂತೆ ವಯಸ್ಸಾದ ಮಹಿಳೆಯೊಬ್ಬರು ಮಗುವನ್ನು ಎತ್ತಿಕೊಂಡು ಕಿಟಕಿಯಿಂದ ಹೊರ ಜಿಗಿದಾಗ ಕಾಲು ಮುರಿದಿಕೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

     ಲಕ್ಷಾಂತರ ರೂಪಾಯಿ ವಸ್ತುಗಳು ಮಣ್ಣುಪಾಲಾಗಿದ್ದು, ಈ ನಾಲ್ಕು ಮನೆಗಳ ನಿವಾಸಿಗಳು ಪ್ರಾಣಾಪಾಯದಿಂದ ಪಾರಾಗಿದ್ದರೂ, ಮುಂದೆ ಏನು ಮಾಡುವುದು ಎಂದು ಗೊತ್ತಾಗದೆ ಬಂದಬಂದವರಲ್ಲಿ ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳಲಾರಂಭಿಸಿದ್ದಾರೆ.ಕಟ್ಟಡದ ಅವಶೇಷಗಳ ಮುಂದೆ, ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಕಟ್ಟಡದ ತೆರವು ಕಾರ್ಯಾಚರಣೆ ನಡೆಸುತ್ತಿರುವಾಗಲೇ ಅವಶೇಷಗಳ ಮುಂದೆ ನಿಂತು ಕಣ್ಣೀರು ಸುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

     ಯಾರ ಮನೆ, ಎಲ್ಲಿ ಬಿದ್ದಿದೆ, ವಸ್ತುಗಳು ಎಲ್ಲಿ ಎಂಬುದರ ಹುಡುಕಾಟ ಕೂಡ ಆಗದಷ್ಟು ಮನೆಗಳು ಕುಸಿದುಬಿದ್ದು, ಅವಶೇಷಗಳ ಪಾಲಾಗಿವೆ. ಈ ಮನೆಗಳಲ್ಲಿ ಮಧ್ಯಮ ವರ್ಗದವರೇ ವಾಸವಾಗಿದ್ದರು. ರಾತ್ರಿ ಕಟ್ಟಡ ಕುಸಿದ ಬಳಿಕ ಹೊರಬಂದಿರುವ ನಿವಾಸಿಗಳು ಇಡೀ ರಾತ್ರಿ ಮಕ್ಕಳೊಂದಿಗೆ ಜಾಗರಣೆ ನಡೆಸಿದ್ದಾರೆ. ಬೆಳಿಗ್ಗೆ ಮಕ್ಕಳನ್ನು ಶಾಲೆಗೂ ಕಳುಹಿಸಲಾಗದೆ, ತಾವು ಕಚೇರಿಗೂ ಹೋಗಲಾಗದೆ ತೊಳಲಾಡಿದ್ದಾರೆ.

     ಮೇಯರ್ ಗಂಗಾಂಬಿಕೆ, ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ಬಿಬಿಎಂಪಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ಕಟ್ಟಡದ ಅವಶೇಷಗಳನ್ನು ತೋರಿಸಿ, ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.ಈ ವೇಳೆ ಮಾತನಾಡಿದ ಮೇಯರ್ ಗಂಗಾಂಬಿಕೆ ಬಿಬಿಎಂಪಿಯಿಂದ ಕಟ್ಟಡ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ಮಾಲೀಕರು ತಲೆತಪ್ಪಿಸಿಕೊಂಡಿದ್ದಾರೆ. ಕಾನೂನು ಪ್ರಕಾರ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕಟ್ಟಡ ಮಾಲೀಕರಿಂದ ಅವಶೇಷಗಳನ್ನು ತೆರವುಗೊಳಿಸುವ ಖರ್ಚು ಹಾಗೂ ಬಾಡಿಗೆದಾರರು ಕಳೆದುಕೊಂಡಿರುವ ವಸ್ತುಗಳಿಗೆ ತಗಲುವ ಹಣವನ್ನೂ ಕೂಡ ಆತನಿಂದಲೇ ವಸೂಲಿ ಮಾಡಲಾಗುವುದು ಎಂದರು.

     9 ಮನೆಗಳ ಪೈಕಿ 5 ಮನೆಗಳವರು ಮೊದಲೇ ಜಾಗ ಖಾಲಿಮಾಡಿದ್ದರು. ಉಳಿದ ಬಾಡಿಗೆದಾರರು, ಮಾಲೀಕರು ಮುಂಗಡ ಹಣ ನೀಡಿಲ್ಲವೆಂದು ಆ ಮನೆಯಲ್ಲೇ ಮುಂದುವರೆದಿದ್ದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಬಿಎಂಪಿಯಿಂದಲೂ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap