ಚಿಕ್ಕನಾಯಕನಹಳ್ಳಿ

ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ತಾಲ್ಲೂಕಿನ ಬರಶಿಡ್ಲಹಳ್ಳಿ ಗ್ರಾಮದ ಭೂತರಾಜು ಎಂಬ ಆರೋಪಿಗೆ ತಿಪಟೂರಿನ ಘನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ 3 ವರ್ಷ ಸಾದಾ ಸಜೆ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತಾಲ್ಲೂಕಿನ ಬರಶಿಡ್ಲಹಳ್ಳಿ ಗ್ರಾಮದ ಭೂತರಾಜು ತನ್ನ ಹೆಂಡತಿ ಚಂದ್ರಮ್ಮಳಿಗೆ ಪ್ರತಿ ದಿನ ಕುಡಿಯಲು ಹಣ ಕೊಡಬೇಕೆಂದು ಹೊಡೆದು ಮಾನಸಿಕ ಹಿಂಸೆ ನೀಡಿ ಕಿರುಕುಳ ನೀಡುತ್ತಿದ್ದ, 2016 ರ ಆಗಸ್ಟ್ 26 ರ ಮಧ್ಯಾಹ್ನ 1 ರ ಸಮಯದಲ್ಲಿ ಮದ್ಯಪಾನ ಮಾಡಲು ಹಣ ನೀಡುವಂತೆ ಒತ್ತಾಯಿಸಿದ್ದ.
ಚಂದ್ರಮ್ಮ ಹಣ ನೀಡದಿದ್ದಾಗ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಚಂದ್ರಮ್ಮನ ಮೈ ಮೇಲೆ ಎರಚಿ ಬೆಂಕಿ ಹಚ್ಚಿದ್ದ, ಈ ಘಟನೆಯನ್ನು ತಪ್ಪಿಸಲು ಹೋಗಿದ್ದ ಚಂದ್ರಮ್ಮಳ ಅತ್ತೆ ತಿಮ್ಮಕ್ಕನ್ನು ಚಂದ್ರಮ್ಮನನ್ನು ತಂಬಿಕೊಂಡಿದ್ದಕ್ಕೆ ಚಂದ್ರಮ್ಮ ಮತ್ತು ತಿಮ್ಮಕ್ಕ ಇಬ್ಬರಿಗೂ ಬೆಂಕಿ ಹತ್ತಿಕೊಂಡಿತ್ತು. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದರು. ಈ ಬಗ್ಗೆ ಚಿ.ನಾ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಕಲಂ 498(ಎ), 302 ಐಪಿಸಿ ಅಡಿಯಲ್ಲಿ ದೋಷಾರೋಪಣೆ ಮಾಡಲಾಗಿತ್ತು.
ವಿಚಾರಣೆ ನಡೆಸಿದ ತಿಪಟೂರಿನ ಘನ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಶಿವಕುಮಾರ್ ಆರೋಪಿತನು ಮಾಡಿರುವ ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ 2019ರ ನವೆಂಬರ್ 7ರಂದು ಕಲಂ 498-ಎ ಐಪಿಸಿ ಅಪರಾಧಕ್ಕಾಗಿ 3ವರ್ಷ ಸಾದಾ ಸಜೆ ಮತ್ತು 5ಸಾವಿರ ದಂಡ ಹಾಗೂ ಕಲಂ 302 ಐಪಿಸಿ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 20ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಸ್.ರಾಜಣ್ಣ ವಾದ ಮಂಡಿಸಿದ್ದರು. ಚಿಕ್ಕನಾಯಕನಹಳ್ಳಿ ವೃತ್ತ ನಿರೀಕ್ಷಕರಾಗಿದ್ದ ಕೆ.ಕೆ.ರಘು ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
