ಬೆಂಗಳೂರು
ರಾಜ್ಯದ ಯಾವುದೇ ಭಾಗಗಳಲ್ಲಿ ಸಂಭವಿಸುವ ವಿಪತ್ತುಗಳನ್ನು ನಿಭಾಯಿಸಲು, ನಿಯಂತ್ರಿಸಲು ಮತ್ತು ನಾಗರೀಕರನ್ನು ತರಬೇತುಗೊಳಿಸಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕ ಕಾರ್ಯಕ್ರಮ ರೂಪಿಸಿದೆ.
ಈ ವರ್ಷ ರಾಜ್ಯಾದ್ಯಂತ 30 ಸಾವಿರ ಸ್ವಯಂಸೇವಕರನ್ನು ವಿಪತ್ತು ನಿರ್ವಹಣೆಗಾಗಿ ತರಬೇತುಗೊಳಿಸುವ ಗುರಿ ಹಾಕಿಕೊಂಡಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಸಾವಿರ ಸ್ವಯಂಸೇವಕರಿಗೆ ತರಬೇತಿ ನೀಡಿ ಜನ ಸಮುದಾಯಗಳನ್ನು ವಿಪತ್ತು ಮತ್ತಿತರ ತುರ್ತು ಸಂದರ್ಭಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸುವಂತೆ ಸಜ್ಜುಗೊಳಿಸಲು ನಿರ್ಧರಿಸಿದೆ.
ರಾಜ್ಯಪಾಲರಿಂದ ನಾಮನಿರ್ದೇಶನಗೊಂಡ ಭಾರತೀಯ ರೆಡ್ ಕ್ರಾಸ್ ನ ರಾಜ್ಯ ಘಟಕದ ಡಾ. ಎಂ.ಕೆ. ಶ್ರೀಧರ್ ಹಾಗೂ ರೆಡ್ ಕ್ರಾಸ್ ಸಭಾಪತಿ ಎಸ್. ನಾಗಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭಾಪತಿ ಎಸ್. ನಾಗಣ್ಣ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಿಬ್ಬಂದಿ ಮತ್ತು ರಾಜ್ಯದಾದ್ಯಂತ ಹರಡಿರುವ ಸಂಸ್ಥೆಯ ಸ್ವಯಂಸೇವಕರು ಪ್ರತಿನಿತ್ಯ ಹೇಗೆ ತಮ್ಮ ಸ್ವಯಂ ಸೇವೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆ ಮಾಡಬಹುದು ಎಂಬ ಚಿಂತನೆಗೆ ಬದ್ಧವಾಗಿದ್ದೇವೆ. ರೆಡ್ ಕ್ರಾಸ್ ಮಾನವೀಯ ಸೇವೆಗೆ ಸದಾ ಸಿದ್ಧರಾಗಿರುತ್ತದೆ. ವಿಪತ್ತುಗಳನ್ನು ನಿಯಂತ್ರಿಸಿ, ಅವುಗಳನ್ನು ಎದುರಿಸುವ ಬಗ್ಗೆ ಸೂಕ್ತ ರೀತಿಯ ತರಬೇತಿಗೆ ಈ ವರ್ಷ ಆದ್ಯತೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಪ್ರಮುಖವಾಗಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಹೆಚ್ಚಿಸುವುದು, ಪ್ರಸ್ತುತ ಜಾರಿಯಲ್ಲಿರುವ ಪ್ರಥಮ ಚಿಕಿತ್ಸೆ, ವಿಪತ್ತು ನಿರ್ವಹಣೆ ಮತ್ತು ಸನ್ನದ್ಧತೆ ಕುರಿತ ತರಬೇತಿ ಚಟುವಟಿಕೆಗಳು, ಜೂನಿಯರ್ ರೆಡ್ ಕ್ರಾಸ್, ಯುವ ರೆಡ್ ಕ್ರಾಸ್, ರೆಡ್ ಕ್ರಾಸ್ ಜನೌಷಧಿ ಮಳಿಗೆಗಳು, ರೆಡ್ ಕ್ರಾಸ್ ಕನ್ನಡಕ ಮಳಿಗೆ, ರೆಡ್ ಕ್ರಾಸ್ ರಕ್ತನಿಧಿ ಇನ್ನೂ ಹತ್ತು ಹಲವು ಮಾನವೀಯ ಸೇವಾ ಕಾರ್ಯಕ್ರಮಗಳ ಜಾರಿ ಮತ್ತು ವಿಸ್ತರಣೆ ಕುರಿತು ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.