ಉಪಚುನಾವಣೆ : ಭದ್ರತೆಗಾಗಿ 3000 ಸಿಬ್ಬಂದಿ ನೇಮಕ : ಪೊಲೀಸ್ ಆಯುಕ್ತ

ಬೆಂಗಳೂರು

    ನಗರದ ಕೆಆರ್‌ಪುರ, ಯಶವಂತಪುರ, ಮಹಾಲಕ್ಷ್ಮೀಲೇಔಟ್, ಶಿವಾಜಿನಗರ ಕ್ಷೇತ್ರಗಳಲ್ಲಿ ಗುರುವಾರ ನಡೆಯಲಿರುವ ನಡೆಯಲಿರುವ ಉಪಚುನಾವಣೆಗೆ ಸುಮಾರು 3 ಸಾವಿರ ಸಿಬ್ಬಂದಿಯನ್ನು ನಿಯೋಜಿಸಿ ಅಭೂತಪೂರ್ವ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ತಿಳಿಸಿದರು.

     ನಗರದ 28 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಉಪಚುನಾವಣೆ ನಡೆಯಲಿದ್ದು ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಸಂಜೆ 6 ರಿಂದ ಡಿ. 5ರ ಸಂಜೆ 6 ರವರೆಗೆ ಚುನಾವಣೆ ನಡೆಯುವ ಪ್ರದೇಶಗಳಲ್ಲಿ ನಿಷೇಧಾಜ್ಞೆ ವಿಧಿಸಿ ಕಟ್ಟೆಚ್ಚರ ವಹಿಸಲಾಗಿದೆ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು 7 ಮಂದಿ ಡಿಸಿಪಿಗಳು 14 ಮಂದಿ ಎಸಿಪಿಗಳು 30 ಪೊಲೀಸ್ ಇನ್ಸ್‌ಪೆಕ್ಟರ್ ಗಳು 68 ಪಿಎಸ್‌ಐಗಳು 160 ಎಎಸ್‌ಐ ಗಳು 1666 ಮುಖ್ಯ ಪೇದೆ, ಪೇದೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇವರ ಜೊತೆಗೆ 951 ಮಂದಿ ಗೃಹ ರಕ್ಷಕ ದಳದ ಸಿಬ್ಬಂದಿ ಭದ್ರತೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

   ಚುನಾವಣೆಯ ಸೆಕ್ಟರ್ ಮೊಬೈಲ್ ನಲ್ಲಿ 14 ಎಸಿಪಿಗಳು 30 ಇನ್ಸ್‌ಪೆಕ್ಟರ್ ಗಳು ಸೇರಿದಂತೆ 102 ಸಿಬ್ಬಂದಿಗಳು ಇರಲಿದ್ದು ಇವರ ಜೊತೆಗೆ ಕೇಂದ್ರ ಪಡೆಯ 10 ರಾಜ್ಯ ಮೀಸಲು ಪಡೆಯ 38 ಸಿಆರ್ 40 ಆರ್‌ಐವಿ 4, ಕ್ಯೂಆರ್‌ಟಿಯ 3 ತುಕಡಿಗಳು ಭದ್ರತೆ ಕೈಗೊಳ್ಳಲಿವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

    ಉಪ ಚುನಾವಣೆ ನಡೆಯುವ 1064 ಮತಗಟ್ಟೆಗಳಲ್ಲಿ 238 ಸೂಕ್ಷ್ಮ 826 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದ್ದು ಸೂಕ್ಷ್ಮ ಮತಗಟ್ಟೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿದೆ.ಚುನಾವಣೆ ಹಿನ್ನಲೆಯಲ್ಲಿ ರೌಡಿಗಳು ಸೇರಿದಂತೆ ಅಪರಾಧ ಹಿನ್ನಲೆಯ 620 ಮಂದಿಯನ್ನು ಠಾಣೆಗೆ ಕರೆಯಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದರು.

     ಉಪಚುನಾವಣೆ ನಡೆಯುವ ವ್ಯಾಪ್ತಿಯ ಶಸ್ತ್ರಾಸ್ತ್ರಗಳನ್ನು ಜಮಾ ಮಾಡಿಕೊಳ್ಳಲಾಗಿದೆ. ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಬೇರೆಕಡೆಯಿಂದ ಹೋಗುವ ರೌಡಿಗಳು, ಪುಡಿ ರೌಡಿಗಳ ಮೇಲೆ ನಿಗಾವಹಿಸಿ ವಾಹನಗಳ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ ಎಂದು ತಿಳಿಸಿದರು.

      ಉಪ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ 27 ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಖಲಾತಿಗಳಿಲ್ಲದೇ ಸಾಗಿಸುತ್ತಿದ್ದ 15 ಲಕ್ಷ 92 ಸಾವಿರದ 857 ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.ಮತ ಎಣಿಕೆ ನಡೆಯುವ ಮೌಂಟ್ ಕಾರ್ಮೆಲ್ ಕಾಲೇಜು, ಸೇಂಟ್ ಜೋಸೆಫ್ ಹೈಸ್ಕೂಲ್, ಆರ್.ವಿ. ಕಾಲೇಜು, ದೇವನಹಳ್ಳಿಯ ಆಕಾಶ್ ಇಂಟರ್ ನ್ಯಾಷನಲ್ ಸ್ಕೂಲ್ ಗೆ ಭದ್ರತೆ ಕೈಗೊಳ್ಳಲಿದ್ದು ಮತ ಯಂತ್ರಗಳನ್ನು ಶೇಖರಿಸಿದ ನಂತರ ಈ ನಾಲ್ಕು ಸ್ಥಳಗಳಲ್ಲಿ ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಿ ಸುತ್ತಮುತ್ತ ನಿಷೇಧಾಜ್ಞೆ ವಿಧಿಸಲಾಗಿದೆ ಎಂದು ಹೇಳಿದರು.

ಮದ್ಯಮಾರಾಟ ನಿಷೇದ

      ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಮದ್ಯಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ತಾಲ್ಲೂಕಿಗೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮತ್ತು ಬೆಂಗಳೂರು ಪೂರ್ವ ತಾಲ್ಲೂಕು ಗಡಿ ಭಾಗಕ್ಕೆ ಹೊಂದಿ ಕೊಂಡಂತೆ (ಪೊಲೀಸ್ ಕಮಿಷನರೇಟ್ ಹೊರತುಪಡಿಸಿ) ಉಪಚುನಾವಣೆ ನಡೆಯಲಿರುವುದರಿಂದ ಮದ್ಯ ಮಾರಾಟ ಮತ್ತು ಸಾಗಾಣಿಕೆ ನಿಷೇಧಿಸಲಾಗಿದೆ.

      ಮಂಗಳವಾರ ಸಂಜೆ 6 ಗಂಟೆಯಿಂದ ಡಿಸೆಂಬರ್ 6 ರಂದು ಸಂಜೆ 6 ಗಂಟೆವರೆಗೆ ಮತ್ತು ಮತ ಎಣಿಕೆ ದಿನಗಳಂದು ಚುನಾವಣಾ ನಡೆಯುವ ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ರವರು ಆದೇಶ ಹೊರಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap