ಬೃಹತ್ ಗಣಮೇಳಕ್ಕೆ 30 ಸಾವಿರ ದಲಿತರು ಆಗಮಿಸುವ ನಿರೀಕ್ಷೆ

ಚಿತ್ರದುರ್ಗ:

    ಜಾತಿ ರಹಿತ, ವರ್ಗರಹಿತ ಸಮಾಜಕ್ಕೆ ಕ್ರಾಂತಿಕಾರಿ ಹೋರಾಟ ನಡೆಸುತ್ತಿರುವ ಮುರುಘಾಮಠದ ಡಾ.ಶಿವಮೂರ್ತಿ ಶರಣರು ಇದೆ ತಿಂಗಳ 16 ರಂದು ಬೆಂಗಳೂರಿನ ನಂದಿ ಮೈದಾನದಲ್ಲಿ ನಡೆಸಲಿರುವ ಅಸಂಖ್ಯೆ ಪ್ರಮಥ ಬೃಹತ್ ಗಣಮೇಳದಲ್ಲಿ ಮೂವತ್ತು ಸಾವಿರ ದಲಿತರು ಭಾಗವಹಿಸಲು ನಿರ್ಧರಿಸಿದ್ದೇವೆಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಹೇಳಿದರು.

    ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ಬಸವಾದಿ ಶರಣರು ಪ್ರಮಥ ಗಣಮೇಳವೊಂದನ್ನು ನಡೆಸಿ ಸಮಾನತೆಯ ಸಂದೇಶ ಸಾರಿದ್ದರು. 12 ನೇ ಶತಮಾನದ ಬಸವಣ್ಣನವರ ನಂತರ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿರುವ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಶರಣರು ಆಯೋಜಿಸಿರುವ ಪ್ರಮಥ ಗಣಮೇಳದಲ್ಲಿ ಬುದ್ದ, ಬಸವ, ಅಂಬೇಡ್ಕರ್‍ರವರ ಆಶಯಗಳನ್ನು ಎತ್ತಿಹಿಡಿಯಲು ಹೊರಟಿರುವುದನ್ನು ಬೆಂಬಲಿಸುವುದಕ್ಕಾಗಿ ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರಿನಲ್ಲಿ ಪ್ರವಾಸ ಮಾಡಿದ್ದು, ಸೋಮವಾರ ರಾಮನಗರ, ಮಂಡ್ಯ, ಮೈಸೂರಿನಲ್ಲಿ ಸಭೆ ನಡೆಸಿ ರಾಜ್ಯದ ಎಲ್ಲಾ ಜಿಲ್ಲೆಗಳ ಒಕ್ಕೂಟದ ಮುಖಂಡರು ಹಾಗೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುವುದಾಗಿ ತಿಳಿಸಿದರು.

   ರಾಜ್ಯದಲ್ಲಿ ಜಾರಿಯಲ್ಲಿರುವ ಭೂಪರಭಾರ ನಿಷೇಧ ಕಾಯ್ದೆಯಲ್ಲಿನ ಲೋಪಗಳಿಂದ ದಲಿತ ಜನಾಂಗ ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಿದೆ. ಪಿ.ಟಿ.ಸಿ.ಎಲ್.ಕಾಯಿದೆಗೆ ಸಮಗ್ರ ತಿದ್ದುಪಡಿ ತರಬೇಕೆಂದು ನಮ್ಮ ಒಕ್ಕೂಟವು ಈ ಹಿಂದೆ ಹೋರಾಟ ನಡೆಸಿ ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ತಿದ್ದುಪಡಿಯ ಮಸೂದೆ ಮಂಡಿಸುವಂತೆ ಆಗ್ರಹಿಸಿದ್ದು, ತಿದ್ದುಪಡಿ ಮಸೂದೆ ಕರಡನ್ನು ಸಿದ್ದಗೊಳಿಸಿ ಫೆ.10 ರ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಮತ್ತು ಸಮಾಜ ಕಲ್ಯಾಣ ಸಚಿವರಿಗೆ ಸಲ್ಲಿಸುತ್ತೇವೆಂದರು.

     ಬಹುಜನ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಎಂ.ಎನ್.ರಮೇಶ್ ಮಾತನಾಡಿ ಡಾ.ಶಿವಮೂರ್ತಿ ಮುರುಘಾ ಶರಣರ ಸಾನಿಧ್ಯದಲ್ಲಿ ಬೆಂಗಳೂರಿನಲ್ಲಿ ನಡೆಯುವ ಐತಿಹಾಸಿಕ ಅಸಂಖ್ಯ ಪ್ರಮಥ ಗಣಮೇಳವನ್ನು ಬೆಂಬಲಿಸುವುದಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹುರಿದುಂಬಿಸಿ ಜಾಗೃತಿಗೊಳಿಸುತ್ತಿದ್ದೇವೆ. ಶತ ಶತಮಾನಗಳಿಂದಲೂ ಶೋಷಣೆಯನ್ನು ಅನುಭವಿಸಿಕೊಂಡು ಬರುತ್ತಿರುವ ದಲಿತರು ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಎಲ್ಲಾ ಜಾತಿಯ ಸ್ವಾಮಿಗಳನ್ನು ಒಗ್ಗೂಡಿಸಿರುವುದು ಇಡಿ ದೇಶದಲ್ಲಿ ಚಿತ್ರದುರ್ಗ ಪ್ರಥಮ. ಇದಕ್ಕೆ ಡಾ.ಶಿವಮೂರ್ತಿ ಮುರುಘಾಶರಣರಲ್ಲಿರುವ ಸಮಾನತೆಯ ಚಿಂತನೆಯೇ ಕಾರಣ ಎಂದು ಗುಣಗಾನ ಮಾಡಿದರು.

     ಮಾನವ ಧರ್ಮಕ್ಕೆ ಹತ್ತಿರವಾಗಿರುವುದು ಬುದ್ದ ಧರ್ಮ. ನಾವು ಯಾವುದೇ ಧರ್ಮದ ವಿರೋಧಿಗಳಲ್ಲ. ಸರ್ಕಾರ ನೆಪ ಮಾತ್ರಕ್ಕೆ ಭೂಪರಿವರ್ತನಾ ಕಾಯಿದೆ ಜಾರಿಗೆ ತಂದು ದಲಿತರ ಭೂಮಿಗಳನ್ನು ಕಿತ್ತುಕೊಳ್ಳುತ್ತಿದೆ. ಇದು ನಿಲ್ಲಬೇಕಾದರೆ ಭೂಪರಭಾರ ನಿಷೇಧ ಕಾಯ್ದೆಗೆ ತಿದ್ದುಪಡಿಯಾಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಸಮತಾ ಸೈನಿಕದಳದ ಜಿಲ್ಲಾಧ್ಯಕ್ಷ ಸಿ.ಹೆಚ್.ಮಂಜುನಾಥ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಶ್ರೀರಾಮ್, ದಲಿತ ಮುಖಂಡರುಗಳಾದ ಎಂ.ವೆಂಕಟೇಶ್, ಪಿಳ್ಳೆರಾಜು, ಹೆಚ್.ಚನ್ನಿಗರಾಮಯ್ಯ, ಜಿಗಣಿ ನಾಗರಾಜ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap