ತುಮಕೂರು
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಬರುವವರ ಬಗ್ಗೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ನಿಗಾವಹಿಸಿದೆ. ಅಂತಹವರ ಆರೋಗ್ಯ ತಪಾಸಣೆ ಮಾಡುವ ಜೊತೆಗೆ ಕಡ್ಡಾಯ ಕ್ವಾರಂಟೈನ್ ಮಾಡಲಾಗುತ್ತಿದೆ.
ನಿಜಾಮುದ್ದೀನ್ ಎಕ್ಸ್‍ಪ್ರೆಸ್ ರೈಲಿನಲ್ಲಿ ಭಾನುವಾರ ಬೆಳಗಿನಜಾವ ನಗರದ ರೈಲ್ವೇ ನಿಲ್ದಾಣದಲ್ಲಿ ಬಂದಿಳಿದ ಹೊರ ರಾಜ್ಯಗಳಿಂದ 35 ಜನರನ್ನು ವಿವಿಧೆಡೆ ಕ್ವಾರಂಟೈನ್ ಮಾಡಲಾಯಿತು.
ಇವರಲ್ಲಿ ತುಮಕೂರು ನಗರದ 12 ಜನ, ಚಿಕ್ಕನಾಯಕನಹಳ್ಳಿಗೆ 7 ಮಂದಿ, ಗುಬ್ಬಿಗೆ 4, ತುರುವೇಕೆರೆಗೆ 4 ಹಾಗೂ ಶಿರಾಗೆ 4 ಮಂದಿ ತೆರಳಲು ಬಂದು ರೈಲು ಇಳಿದರು. ಇವರನ್ನು ಆಯಾ ತಾಲ್ಲೂಕಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತುಮಕೂರು ತಹಶೀಲ್ದಾರ್ ಮೋಹನ್‍ಕುಮಾರ್ ಹೇಳಿದರು. ಇವರು ಪ್ರತ್ಯೇಕವಾಗಿ ತೆರಳುವ ವ್ಯವಸ್ಥೆ ಮಾಡುವ ಜತೆಗೆ ಆಯಾ ತಹಶೀಲ್ದಾರರಿಗೆ ಮಾಹಿತಿ ನೀಡಿ ಕ್ವಾರಂಟೈನ್ ಮಾಡುವಂತೆ ತಿಳಿಸಲಾಗಿದೆ ಎಂದರು.
ತುಮಕೂರು ನಗರಕ್ಕೆ ಬಂದ 12 ಜನರನ್ನು ನಗರದ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಹಶೀಲ್ದಾರ್ ಮೋಹನ್‍ಕುಮಾರ್ ತಿಳಿಸಿದರು.
ಇದೇ ರೈಲಿನಲ್ಲಿ ಮಂಡ್ಯಕ್ಕೆ ತೆರಳಲು 4 ಮಂದಿ ನಗರದಲ್ಲಿ ಇಳಿದಿದ್ದು, ಇವರುಗಳನ್ನು ಸಹ ಪ್ರತ್ಯೇಕವಾಗಿ ಮಂಡ್ಯಕ್ಕೆ ತೆರಳುವ ವ್ಯವಸ್ಥೆ ಮಾಡಿ, ಅಲ್ಲಿನ ತಹಶೀಲ್ದಾರ್‍ಗೂ ಮಾಹಿತಿ ನೀಡಿ ಕ್ವಾರಂಟೈನ್‍ಗೆ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.
ಹೊರ ರಾಜ್ಯದಿಂದ ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಿ, ಅವರ ಆರೋಗ್ಯ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.ಹೊರ ರಾಜ್ಯದಿಂದ ಬಂದವರನ್ನು ಪೆÇಲೀಸರ ಸಹಕಾರದೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್ ಕೇಂದ್ರಗಳತ್ತ ಕರೆದೊಯ್ದರು.