ದಾವಣಗೆರೆ:
ಜಿಲ್ಲೆಯಲ್ಲಿ 2018ರ ಜನವರಿಯಿಂದ ಅಕ್ಟೋಬರ್ ಮಾಹೆಯ ವರೆಗೆ 375 ಏಡ್ಸ್ ಸೋಂಕಿತರು ಪತ್ತೆಯಾಗಿದ್ದಾರೆಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ರಾಘವನ್ ತಿಳಿಸಿದರು.
ಇಲ್ಲಿನ ಎಸ್.ಎಂ.ಕೃಷ್ಣ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘ, ಸಂಜೀವಿನಿ ಪಾಸಿಟಿವ್ ನೆಟ್‍ವರ್ಕ್, ಶ್ರೀದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಮತ್ತು ಅಭಯ ಸ್ಪಂದನ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2009ರಲ್ಲಿ 1574, 2010ರಲ್ಲಿ 1253, 2011ರಲ್ಲಿ 1089, 2012ರಲ್ಲಿ 1073, 2013ರಲ್ಲಿ 1068, 2014ರಲ್ಲಿ 789, 2015ರಲ್ಲಿ 634, 2016ರಲ್ಲಿ 576, 2017ರಲ್ಲಿ 424 ಏಡ್ಸ್ ಸೋಂಕಿತರು ಪತ್ತೆಯಾಗಿದ್ದರು. ಸತತ ಪರಿಶ್ರಮದಿಂದ ವರ್ಷದಿಂದ ವರ್ಷಕ್ಕೆ ಏಡ್ಸ್ ಸೋಂಕಿತರ ಸಂಖ್ಯೆ ನಿಯಂತ್ರಣಗೊಳ್ಳುತ್ತಾ ಬರುತ್ತಿದ್ದು, ಈ ವರ್ಷದಲ್ಲಿ ಅಂದರೆ, 2018ರ ಜನವರಿಯಿಂದ ಅಕ್ಟೋಬರ್ ವರೆಗೆ 375 ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆಂದು ಮಾಹಿತಿ ನೀಡಿದರು.
1981ರಲ್ಲಿ ಪ್ರಪ್ರಥಮ ಬಾರಿಗೆ ಅಮೆರಿಕಾದಲ್ಲಿ ಹೆಚ್‍ಐವಿ ಸೋಂಕು ಪತ್ತೆಯಾಯಿತು. ವಿಶ್ವದಲ್ಲಿ ಇದುವರೆಗೆ 35 ಮಿಲಿಯನ್ ಜನರು ಹೆಚ್‍ಐವಿಯಿಂದ ಸಾವನ್ನಪ್ಪಿದ್ದಾರೆ. 1986ರಲ್ಲಿ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಚೆನ್ನೈನಲ್ಲಿ ಈ ಸೋಂಕು ಪತ್ತೆಯಾಯಿತು. ಹೆಚ್‍ಐವಿ ಸೆಂಟಿನಲ್ ಸರ್ವೇ ಪ್ರಕಾರ ಪ್ರಸ್ತುತ ವಿಶ್ವದಲ್ಲಿ ಭಾರತ ಹೆಚ್‍ಐವಿ ಸೋಂಕಿನಲ್ಲಿ ಮೂರನೇ ಸ್ಥಾನದಲ್ಲಿದೆ. 2017-18 ನೇ ಸಾಲಿನಲ್ಲಿ ಹೆಚ್‍ಐವಿ ಸೋಂಕಿನ ಹರಡುವಿಕೆ ಪ್ರಮಾಣ 0.2 ಇದ್ದು ಕರ್ನಾಟಕದ ಪ್ರಮಾಣ 0.38 ಮತ್ತು 9ನೇ ಸ್ಥಾನದಲ್ಲಿದೆ. ದಾವಣಗೆರೆ ಜಿಲ್ಲೆಯು ಸಾಮಾನ್ಯರಲ್ಲಿ 15 ನೇ ಸ್ಥಾನ ಹಾಗೂ ಗರ್ಭಿಣಿಯರಲ್ಲಿ 10 ನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿದ್ದ ಜಿಲ್ಲೆಯನ್ನು ಸತತ ಪರಿಶ್ರಮದಿಂದ 15 ನೇ ಸ್ಥಾನಕ್ಕೆ ತರಲಾಗಿದೆ ಎಂದು ಅವರು ವಿವರಿಸಿದರು.
ಅಸುರಕ್ಷಿತ ಲೈಂಗಿಕ ಸಂಪರ್ಕ, ಸಂಸ್ಕರಣಗೊಳ್ಳದ ಸಿರಿಂಜ್ ಇತ್ಯಾದಿ ಬಳಕೆ, ಸೋಂಕಿತ ರಕ್ತವನ್ನು ನೀಡುವುದು ಮತ್ತು ತಾಯಿಯಿಂದ ಮಗುವಿಗೆ ಹೆಚ್‍ಐವಿ ಸೋಂಕು ಹರಡಲಿದೆ. ಏಡ್ಸ್‍ನಿಂದ ಸಾವು ಸಂಭವಿಸುವುದಿಲ್ಲ. ಇದಕ್ಕೆ ಚಿಕಿತ್ಸೆ ಇದ್ದು, ಜೀವಿತಾವಧಿಯನ್ನು ಹೆಚ್ಚಿಸಲು ಮತ್ತು ಜೀವನ ಮಟ್ಟ ಸುಧಾರಿಸಲು ಸಾಧ್ಯವಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕುಲಕರ್ಣಿ ಅಂಬಾದಾಸ್ ಜಿ. ಮಾತನಾಡಿ, ಕಾಲೇಜು ಮಕ್ಕಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಹದಿಹರೆಯದ ವಿದ್ಯಾರ್ಥಿಗಳಿಗೆ ಹೆಚ್‍ಐವಿ ಸೋಂಕಿನ ಬಗ್ಗೆ ಅರಿವು ಮೂಡಿಸಬೇಕು. ಏಡ್ಸ್ ನಿಯಂತ್ರಣವಲ್ಲ ಬದಲಾಗಿ ಸಂಪೂರ್ಣ ನಿರ್ಮೂಲನೆ ಆಗಬೇಕು ಎಂದು ಆಶಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಏಡ್ಸ್ ಮಾರಣಾಂತಿಕ ಕಾಯಿಲೆಯಲ್ಲ. ಅವಕಶವಾದಿ ಕಾಯಿಲೆಯಾಗಿದ್ದು, ಇದಕ್ಕೆ ತುತ್ತಾಗಿರುವವರಲ್ಲಿ ಇದು ರೋಗ ನಿರೋಧಕ ಶಕ್ತಿಗಳನ್ನು ಕ್ಷೀಣಿಸುವಂತೆ ಮಾಡಿ, ಉಲ್ಬಣಗೊಂಡು, ರೋಗಿಯು ಸಾಯುವಂತೆ ಮಾಡುತ್ತದೆ ಎಂದರು.
ಹೆಚ್‍ಐವಿ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಸಾಂತ್ವಾನ ಹೇಳುವ ಬದಲು ವೈದ್ಯರು ರಕ್ತ ಪಡೆಯುವಾಗ ಹಾಗೂ ಕೊಡುವಾಗ, ನರ್ಸ್‍ಗಳು ಚುಚ್ಚು ಮದ್ದು ನೀಡುವಾಗ ತಮ್ಮ ಜವಾಬ್ದಾರಿಯನ್ನು ಕೆಲಸ ಮಾಡಿದರೆ ಹಾಗೂ ಲೈಂಗಿಕತೆಗೆ ಜೀವನ ಮುಡಿಪಿಟ್ಟು, ಅದರಿಂದಲೇ ಜೀವನ ನಡೆಸುವ ಲೈಂಗಿಕ ಕಾರ್ಯಕರ್ತೆಯರಿಗೆ ಹಾಗೂ ಪುರುಷರಿಗೆ ಸುರಕ್ಷಿತ ಲೈಂಗಿಕ ಕ್ರಿಯೆಯ ಅರಿವು ಹೊಂದಿದ್ದರೆ, ಹೆಚ್‍ಐವಿ ಸೋಂಕು ನಿಯಂತ್ರಿಸಬಹುದಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿ, ಲೈಂಗಿಕ ಅಸುರಕ್ಷತೆಯನ್ನು ತಡೆಗಟ್ಟಲೆಂದೇ ನಮ್ಮ ಹಿರಿಯರು ‘ಮದುವೆ’ ಎಂಬ ಚೌಕಟ್ಟನ್ನು ಹಾಕಿಕೊಟ್ಟಿದ್ದಾರೆ. ಅದಕ್ಕೆ ನಾವು ಕೃತಜ್ಞರಾಗಿರಬೇಕು. ಹಾಗೂ ಕಾನೂನು ಬಹುಪತ್ನಿತ್ವಕ್ಕೆ ಕಡಿವಾಣ ಹಾಕಿದೆ. ಹೀಗೆ ಅಸುರಕ್ಷಿತ ಲೈಂಗಿಕತೆಯನ್ನು ಹಂತ, ಹಂತವಾಗಿ ನಿಯಂತ್ರಿಸಿಕೊಂಡು ಬರಲಾಗಿದೆ ಎಂದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಹಾಗೂ ವಕೀಲರಾದ ಎಲ್.ಹೆಚ್.ಅರುಣ್ ಕುಮಾರ್ ಮಾತನಾಡಿ, ಏಡ್ಸ್ ದಿನಾಚರಣೆಯನ್ನು ಆದಷ್ಟು ಬೇಗ ಮುಕ್ತಾಯಗೊಳಿಸಬೇಕು. ಅಂದರೆ ರಾಷ್ಟ್ರವನ್ನು ಏಡ್ಸ್‍ಮುಕ್ತ ಗೊಳಿಸುವಲ್ಲಿ ಎಲ್ಲರೂ ಸಹಕರಿಸಬೇಕು. ಸೋಂಕಿತರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕು. ಈ ಕಾಯಿಲೆಗೆ ತುತ್ತಾಗಿರುವವರನ್ನು ವೈದ್ಯರು ನಿರ್ಲಕ್ಷಿಸದೇ ಆಪ್ತವಾಗಿ ಸಮಾಲೋಚನೆ ಮಾಡಬೇಕು.
ಆಗ ಇವರಲ್ಲಿಯೂ ಜೀವನದ ಭರವಸೆ ಬಂದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.ಏಡ್ಸ್ ಸೋಂಕಿತೆ ಕೊಟ್ರಮ್ಮ, ಮಂಗಳಮುಖಿ ಉಮಾದೇವಿ, ಐಸಿಟಿಸಿ ಕೇಂದ್ರದ ಜಗದೀಶ್ ಮತ್ತಿತರರು ಮಾತನಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತ್ರಿಪುಲಾಂಬ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಎಆರ್‍ಟಿ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಕೃತಿ, ಆಪ್ತಸಮಾಲೋಚಕ ರವಿಕುಮಾರ್, ಲ್ಯಾಬ್ ಟೆಕ್ನೀಷಿಯನ್ ಹಬೀಬ್ ಹುಸೇನ್, ರೂಪ ಮತ್ತು ದುರ್ಗೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್, ಕುಷ್ಟರೋಗ ನಿವಾರಣಾಧಿಕಾರಿ ಡಾ.ಸರೋಜಾಬಾಯಿ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ಬಿ.ಕೆ.ಪ್ರಕಾಶ್, ಎಸ್‍ಎಂಕೆ ನಗರದ ವೈದ್ಯಾಧಿಕಾರಿ ಡಾ.ದೇವರಾಜ ಪಟ್ಟಿಗಿ, ಡ್ಯಾಪ್ಕೋ ಸಿಬ್ಬಂದಿ ವರ್ಗ, ದುರ್ಗಶಕ್ತಿ ಏಡ್ಸ್‍ತಡೆಗಟ್ಟುವ ಮಹಿಳಾ ಸಂಘದ ಮಂಜುಳ, ಅಭಯ ಸ್ಪಂದನ ಸಂಸ್ಥೆಯ ದಾದಾಪೀರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ