ಪ್ರವಾಸೋದ್ಯಮ ಅಭಿವೃದ್ಧಿಗೆ 39.41 ಕೋಟಿ ರೂ. ಮಂಜೂರು : ಸಿ.ಟಿ. ರವಿ.

ತುಮಕೂರು

    ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 39.41 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ. ರವಿ ತಿಳಿಸಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವ ಸಬಲೀಕರಣ ಕ್ರೀಡಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ಹಾಗೂ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು 2017-18ನೇ ಸಾಲಿನಿಂದ ಈವರೆಗೂ ಜಿಲ್ಲೆಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 39.41 ಕೋಟಿ ರೂ.ಗಳ ಅನುದಾನವನ್ನು ಮಂಜೂರು ಮಾಡಲಾಗಿದೆ.

    ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ 85 ಕಾಮಗಾರಿಗಳಿಗಾಗಿ ಈ ಅನುದಾನವನ್ನು ಮಂಜೂರು ಮಾಡಲಾಗಿದೆ. ಈ ಪೈಕಿ 42 ಕಾಮಗಾರಿಗಳು ಪ್ರಗತಿಯಲ್ಲಿವೆ. ಉಳಿದಂತೆ 9 ಕಾಮಗಾರಿಗಳು ಪೂರ್ಣಗೊಂಡಿದ್ದು, 36 ಕಾಮಗಾರಿಗಳನ್ನು ತಾಂತ್ರಿಕ ಕಾರಣಗಳಿಂದ ಈವರೆಗೂ ಪ್ರಾರಂಭಿಸಿರುವುದಿಲ್ಲ. ಪ್ರಾರಂಭವಾಗದ ಕಾಮಗಾರಿಗಳಲ್ಲಿ ನಿವೇಶನ ಸಮಸ್ಯೆಯಿರುವ ಕಾಮಗಾರಿಗಳನ್ನು ಕೂಡಲೇ ರದ್ದುಪಡಿಸಲು ಸೂಚನೆ ನೀಡಲಾಗಿದೆ. ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪ್ರಾರಂಭಿಸಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

    ಸಂಭ್ರಮದ ಕಾಲವಿದ್ದಾಗ ಮಾತ್ರ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಯುವ ಸಬಲೀಕರಣ ಇಲಾಖೆಗಳು ಚಟುವಟಿಕೆಯಿಂದ ಕೂಡಿರಲು ಸಾಧ್ಯ. ಕಳೆದ 6 ತಿಂಗಳಿನಿಂದ ಕೋವಿಡ್-19 ಸಾಂಕ್ರಾಮಿಕ ರೋಗವು ನಮ್ಮೆಲ್ಲರ ಸಂಭ್ರಮವನ್ನು ಕಸಿದುಕೊಂಡಿದೆ. ಹಾಗಾಗಿ ಸಾರ್ವಜನಿಕ ರೂಪದಲ್ಲಿ ಇಲಾಖೆಗಳಿಂದ ಹೆಚ್ಚಿನ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವಂತಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

    ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಸುಮಾರು 17,000 ಕಲಾವಿದರ ಬ್ಯಾಂಕ್ ಖಾತೆಗೆ ತಲಾ 2ಸಾವಿರ ರೂ.ನಂತೆ ಆರ್ಥಿಕ ನೆರವನ್ನು ಒದಗಿಸಲಾಗಿದೆ. ಅಲ್ಲದೆ ನಿವೃತ್ತ ಕಲಾವಿದರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು 1500 ರೂ.ಗಳಿಂದ 2 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ರಾಜ್ಯದ 14000 ಹಾಗೂ ಜಿಲ್ಲೆಯ 716 ನಿವೃತ್ತ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಕಲಾವಿದರ ಮಾಸಾಶನಕ್ಕೆ ಸಂಬಂಧಿಸಿದಂತೆ 700 ಅರ್ಜಿಗಳು ಬಾಕಿ ಉಳಿದಿದ್ದು, ಶೀಘ್ರ ವಿಲೇವಾರಿಗೆ ಸಮಿತಿಯನ್ನು ರಚಿಸಲಾಗಿದೆ.

   ಸಮಿತಿ ನಿರ್ಣಯದ ನಂತರ ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಳ್ಳಲಾಗುವುದು. ಜಿಲ್ಲಾ ಹಂತದಲ್ಲಿ ಕಲಾವಿದರ ಮಾಸಾಶನಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸಬೇಕೆಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರಿಗೆ ಸಚಿವರು ಸೂಚನೆ ನೀಡಿದರು. ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಹಲವಾರು ಕಲಾವಿದರು ಆರ್ಥಿಕ ನೆರವು ಕೋರಿ ಸಾಮಾಜಿಕ ಮಾಧ್ಯಮದ ಮೂಲಕ ಬೇಡಿಕೆ ಸಲ್ಲಿಸಿದ್ದು, ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಸಂಕಷ್ಟದಲ್ಲಿರುವ ಕಲಾವಿದರಿಗೆ ಆರ್ಥಿಕ ನೆರವು ಒದಗಿಸಲು ಸರ್ಕಾರ ಬದ್ಧವಾಗಿದ್ದು, ನೆರವು ಒದಗಿಸುವಲ್ಲಿ ಸರ್ಕಾರದೊಂದಿಗೆ ಕೈಜೋಡಿಸಲು ಮುಂದಾಗಿರುವ ಸಹೃದಯ ಸಂಘ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು.

    ಇತ್ತೀಚೆಗಷ್ಟೇ ಕೇಂದ್ರದ ಪ್ರವಾಸೋದ್ಯಮ ಹಾಗೂ ಕ್ರೀಡಾ ಖಾತೆ ಸಚಿವರನ್ನು ಭೇಟಿ ಮಾಡಿ ಪ್ರವಾಸೋದ್ಯಮದ ಹೊಸ ಯೋಜನೆಗಳಿಗೆ ಅನುಮೋದನೆ ನೀಡಬೇಕೆಂದು ಮನವಿ ಮಾಡಿದ್ದೇನೆ. ರಾಜ್ಯದಲ್ಲಿ ಜೈನ್ ಸಕ್ರ್ಯೂಟ್, ಕೋಸ್ಟಲ್(ಕರಾವಳಿ)ಸಕ್ರ್ಯೂಟ್, ಡೆಕ್ಕನ್ ಸೆಕ್ರ್ಯೂಟ್, ಜೋಗ್ ಮತ್ತು ಚಿತ್ರದುರ್ಗ ಸಕ್ರ್ಯೂಟ್ ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ದೊರೆಯುವ ಬಗ್ಗೆ ಸಕಾರಾತ್ಮಕ ವಿಶ್ವಾಸವಿದ್ದು, ಕೇಂದ್ರವು ಹೆಚ್ಚಿನ ಅನುದಾನ ಒದಗಿಸಲಿದೆ ಎನ್ನುವ ಭರವಸೆ ಇದೆ ಎಂದು ಹೇಳಿದರು.

     ತಮ್ಮ ಖಾತೆಯ ಮೂರು ಇಲಾಖೆಗಳ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿರುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಚಿವರು ಮೂರು ಇಲಾಖೆಗಳಲ್ಲಿ ಶೇಕಡಾ 62 ರಿಂದ 65ರಷ್ಟು ಹುದ್ದೆಗಳು ಖಾಲಿಯಿರುವುದರಿಂದ ಕೆಲಸ ಕಾರ್ಯಗಳನ್ನು ಚುರುಕುಗೊಳಿಸಲು ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ, ಯುವ ಸಬಲೀಕರಣ, ಕನ್ನಡ ಮತ್ತು ಸಂಸ್ಕøತಿ ಹಾಗೂ ವಾರ್ತಾ ಇಲಾಖೆಗಳನ್ನು ವಿಲೀನಗೊಳಿಸಿ ಒಂದೇ ಸಚಿವಾಲಯದಡಿ ತರುವ ಬಗ್ಗೆ ಕಂದಾಯ ಸಚಿವರ ಗಮನಕ್ಕೆ ತರಲಾಗಿದೆ. ಇಲಾಖೆಗಳ ವಿಲೀನಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆಯಾಗಿ ಅನುಮೋದನೆ ದೊರೆತರೆ ಆಡಳಿತ ಸುಧಾರಣೆಯಾಗಲು ಸಾಧ್ಯವಾಗುತ್ತದೆ.

     ಇಲಾಖೆಗಳನ್ನು ವಿಲೀನಗೊಳಿಸುವುದರಿಂದ ಸಮರ್ಪಕ ಕಾರ್ಯ ಹಾಗೂ ಆರ್ಥಿಕ ಉಳಿತಾಯವಾಗುತ್ತದೆ. ಹಲವಾರು ಇಲಾಖೆಗಳಲ್ಲಿ ವಾರ್ಷಿಕ ವೆಚ್ಚದ ಶೇ. 90ರಷ್ಟು ಭಾಗ ವೇತನ ಪಾವತಿಗಾಗಿ ಹಾಗೂ ಉಳಿದ ಶೇ. 10ರಷ್ಟು ಮಾತ್ರ ಕ್ರಿಯಾ ಯೋಜನೆಗೆ ಖರ್ಚಾಗುತ್ತಿದೆ. ವಾರ್ಷಿಕ ವೆಚ್ಚದ ಶೇ. 25 ಭಾಗ ಮಾತ್ರ ವೇತನ ಪಾವತಿ ಹಾಗೂ ಶೇ. 75ರಷ್ಟು ಕ್ರಿಯಾ ಯೋಜನೆಗಳಿಗೆ ವೆಚ್ಚ ಮಾಡಿದಾಗ ಮಾತ್ರ ಆರ್ಥಿಕ ಉಳಿತಾಯ ಸಾಧ್ಯ ಎಂದು ತಿಳಿಸಿದರು.

    ಯಾವುದೇ ಕಾಮಗಾರಿ ಅನುಷ್ಠಾನಕ್ಕೆ ಮಂಜೂರಾದ ಹಣವನ್ನು ಆಯಾ ಆರ್ಥಿಕ ವರ್ಷದಲ್ಲಿ ಖರ್ಚು ಮಾಡಬೇಕು. ಇಲ್ಲದಿದ್ದಲ್ಲಿ ಹೆಚ್ಚಿನ ಅನುದಾನವನ್ನು ತರಲು ಅಡ್ಡಿಯಾಗುತ್ತದೆ. ಈ ನಿಟ್ಟಿನಲ್ಲಿ ನಿಗಧಿತ ಅವಧಿಯಲ್ಲಿಯೇ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸ ಬೇಕೆಂದರಲ್ಲದೆ, ಸೆಪ್ಟೆಂಬರ್ ಅಂತ್ಯಕ್ಕೆ ಹೊಸ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುವುದು. ಈ ನೀತಿಯಲ್ಲಿ ಕಾಮಗಾರಿಗೆ ಸಂಬಂಧಿಸಿದ ಅನುದಾನ ಬಿಡುಗಡೆ ಹಾಗೂ ಅನುಷ್ಠಾನ ಅವಧಿಯನ್ನು ನಿಗಧಿಗೊಳಿಸುವ ಬಗ್ಗೆ ಸ್ಪಷ್ಟ ನಿರ್ಣಯವನ್ನು ತಿಳಿಸಲಾಗುವುದು ಎಂದರು.

    ವಿವಿಧ ಮಹನೀಯರು/ ದಾರ್ಶನಿಕರ ಜಯಂತಿ ಆಚರಣೆ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಜಯಂತಿ ಆಚರಣೆ ಸ್ವರೂಪದ ಬಗ್ಗೆ ಈಗಾಗಲೇ ಹಲವಾರು ಚರ್ಚೆಗಳಾಗಿವೆ. ಈ ಕುರಿತು ಸರ್ವಪಕ್ಷಗಳ ಸಭೆಯನ್ನು ನಡೆಸಬೇಕಿತ್ತು. ಆದರೆ ಕೋವಿಡ್-19 ಸಂಕಷ್ಟ ಪರಿಸ್ಥಿತಿ ಎದುರಾದ ಕಾರಣ ಸರ್ವಪಕ್ಷಗಳ ಸಭೆ ನಡೆಸಲು ಸಾಧ್ಯವಾಗಿಲ್ಲ. ಕೆಲವು ಜಯಂತಿಗಳು ಸಾಂಕೇತಿಕ ರೂಪದಲ್ಲಿರಬೇಕು. ಆದರೆ ಇತ್ತೀಚೆಗೆ ರಾಜಕೀಯ ಮತ್ತು ಜಾತಿ ಸ್ವರೂಪವನ್ನು ಪಡೆಯುತ್ತಿವೆ. ಕೋವಿಡ್-19 ಪರಿಸ್ಥಿತಿ ಸುಧಾರಿಸಿದ ನಂತರ ಜಯಂತಿ ಆಚರಣೆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಹೊಸ ಸ್ವರೂಪ ಕೊಡುವ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

     ತಿಪಟೂರಿನಲ್ಲಿ ಹಾಸ್ಯನಟ ದಿ|| ನರಸಿಂಹರಾಜು ರಂಗಮಂದಿರ ನಿರ್ಮಾಣ ಕಾರ್ಯ ನೆನೆಗುದಿಗೆ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದ ಸಚಿವರು ರಂಗಮಂದಿರ ಪೂರ್ಣಗೊಳಿಸಲು ಕಳೆದ ವರ್ಷ 2 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸುಮಾರು 5.5 ಕೋಟಿ ರೂ. ವೆಚ್ಚದ ಈ ರಂಗಮಂದಿರ ಕಾಮಗಾರಿಯ ಪ್ರಗತಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದೇನೆ ಎಂದು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಿಂದ ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆಯಡಿ ಪ್ರವಾಸಿ ಟ್ಯಾಕ್ಸಿ ವಿತರಣೆಗಾಗಿ ಫಲಾನುಭವಿಗಳ ಆಯ್ಕೆ ಮಾಡುವಾಗ ವಯಸ್ಸು ಹಾಗೂ ಮೆರಿಟ್ ಅನ್ನು ಮಾನದಂಡವನ್ನಾಗಿ ಪರಿಗಣಿಸಲಾಗುವುದು. ಫಲಾನುಭವಿಗಳು ಯೋಜನೆಯಡಿ ಪಡೆದ ಟ್ಯಾಕ್ಸಿಯನ್ನು ಪರಭಾರೆ ಅಥವಾ ಹಸ್ತಾಂತರ ಮಾಡುವಂತಿಲ್ಲ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಟ್ಯಾಕ್ಸಿ ಒದಗಿಸಲು ಅವಕಾಶವಿಲ್ಲ ಎಂದು ತಿಳಿಸಿದರು.

     ಮೈಸೂರು ದಸರಾ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿಯನ್ನು ರಚಿಸಲಾಗುವುದು. ಈ ವಾರ ಮೈಸೂರಿನಲ್ಲಿ ಮುಖ್ಯಮಂತ್ರಿಗಳ ಸಭೆ ನಡೆಸಿ ನಿರ್ಣಯ ಕೈಗೊಳ್ಳಲಾಗುವುದು. ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ನಡೆದ ಚರ್ಚೆಯಂತೆ ಸಾಂಪ್ರದಾಯಿಕ ಹಾಗೂ ಸರಳ ದಸರಾ ಆಚರಣೆ ಮಾಡಲಾಗುವುದು. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವೈಭವದ ಹಾಗೂ ಜನ ಸೇರುವಂತಹ ದಸರಾ ಆಚರಣೆ ಮಾಡುವುದಿಲ್ಲ ಎಂದು ತಿಳಿಸಿದರು.

     ನಗರದಲ್ಲಿ ಸಾರ್ವಜನಿಕರ ಈಜುಕೊಳ ನಿರ್ಮಾಣಕ್ಕೆ ಪತ್ರಕರ್ತರೊಬ್ಬರು ಮನವಿ ಮಾಡಿದಾಗ ಸ್ಥಳೀಯ ಶಾಸಕರಿಂದ ಪ್ರಸ್ತಾವನೆ ಬಂದರೆ ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕ ಈಜು ಕೊಳ ನಿರ್ಮಾಣಕ್ಕೆ ಇಲಾಖೆಯಿಂದ ನೆರವು ನೀಡಲಾಗುವುದು ಎಂದರಲ್ಲದೆ ನಗರದಲ್ಲಿ ಸುಮಾರು 53 ಕೋಟಿ ರೂ. ವೆಚ್ಚದಲ್ಲಿ ಸುವ್ಯವಸ್ಥಿತ ಒಳಾಂಗಣ ಕ್ರೀಡಾಂಗಣವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಕ್ರೀಡಾಂಗಣ ಕಾಮಗಾರಿ ಕೈಗೊಂಡಿರುವ ಸ್ಮಾರ್ಟ್ ಸಿಟಿ ಸಂಸ್ಥೆಗೆ ಕಾಮಗಾರಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಕ್ರೀಡಾಂಗಣದಲ್ಲಿ ಸಿಂತೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಮಾತ್ರ ಕ್ರೀಡಾ ಇಲಾಖೆಯಿಂದ ಅನುದಾನ ಒದಗಿಸಲಾಗಿದೆ. “ಖೇಲೋ ಇಂಡಿಯಾ ಕ್ರೀಡಾ ಗ್ರಾಮ” ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಸೂಚನೆ ನೀಡಿದ್ದೇನೆ. ಸ್ಥಳವನ್ನು ಗುರುತಿಸಿದ ನಂತರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

     ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿಯ ಸಂತ್ರಸ್ತರ ಪರಿಹಾರಕ್ಕಾಗಿ 273ಕೋಟಿ ರೂ. ಮಂಜೂರು ಮಾಡಲಾಗಿದೆ. ಇದರಲ್ಲಿ ಬೆಳೆ ಹಾನಿಗಾಗಿ 61 ಕೋಟಿ ರೂ. ಸೇರಿದಂತೆ ರಸ್ತೆ ಕಾಮಗಾರಿ, ಮನೆ ನಿರ್ಮಾಣಕ್ಕಾಗಿ 273 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಸಂಪೂರ್ಣವಾಗಿ ಮನೆ ನಷ್ಟ ಹೊಂದಿದವರಿಗೆ 5ಲಕ್ಷ ರೂ. ಭಾಗಶಃ ಮನೆ ಕಳೆದುಕೊಂಡವರಿಗೆ 3 ಲಕ್ಷ ರೂ.ಗಳನ್ನು ಒದಗಿಸಲಾಗುತ್ತಿದೆಯಲ್ಲದೆ, ಹಾನಿಗೊಳಗಾದ ಮನೆಯ ದುರಸ್ತಿಗಾಗಿ 50,000 ರೂ.ಗಳನ್ನು ಏಕಗಂಟಿನಲ್ಲಿ ನೇರವಾಗಿ ಸಂತ್ರಸ್ತರ ಖಾತೆಗೆ ಜಮಾ ಮಾಡಲಾಗಿದೆ ಎಂದು ತಿಳಿಸಿದರು.

     ರಾಷ್ಟ್ರಕವಿ ಆಯ್ಕೆಗಾಗಿ ರಚಿಸಿದ್ದ ಕೋ. ಚೆನ್ನಬಸಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ರಾಜ್ಯದಲ್ಲಿ ರಾಷ್ಟ್ರಕವಿಯನ್ನಾಗಿ ಆಯ್ಕೆ ಮಾಡಲು ಸೂಕ್ತವಾದವರು ಯಾರೂ ಇಲ್ಲವೆಂದು ವರದಿ ನೀಡಿದ್ದಾರೆ. ರಾಜ್ಯದ ನಾಡಧ್ವಜವನ್ನು ಅಧಿಕೃತಗೊಳಿಸುವ ಬಗ್ಗೆ ಮಾತನಾಡಿದ ಅವರು, ನಮ್ಮ ಭಾರತ ಸಂವಿಧಾನದಲ್ಲಿ ರಾಷ್ಟ್ರಧ್ವಜದ ಪ್ರಸ್ತಾಪವಾಗಿದೆಯೇ ಹೊರತು ನಾಡಧ್ವಜದ ಪ್ರಸ್ತಾಪವಾಗಿಲ್ಲ. ಸಾಂಪ್ರದಾಯಿಕವಾಗಿ ಸ್ವೀಕರಿಸಿರುವ ಹಳದಿ-ಕುಂಕುಮ ಬಣ್ಣದ ನಾಡಧ್ವಜವನ್ನು ಹಾರಿಸಿ ಸಂಭ್ರಮ ಪಡುವುದಕ್ಕೆ ಯಾವುದೇ ಭಂಗವಿಲ್ಲವೆಂದು ಸ್ಪಷ್ಟಪಡಿಸಿದರು.

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹಿಂದಿ ಭಾಷೆ ಹಾಗೂ ಯಾವುದೇ ಭಾಷೆಯನ್ನು ಹೇರಿಕೆ ಮಾಡಿಲ್ಲ. ಭಾಷೆಯ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿ ಅಧಿಕೃತ ಮಾನ್ಯತೆ ಹೊಂದಿರುವ 22 ಭಾಷೆಗಳಲ್ಲಿ ಯಾವ ಭಾಷೆಯಲ್ಲಿ ಬೇಕಾದರೂ ಶಿಕ್ಷಣ ಪಡೆಯಬಹುದು. ಮಾತೃ ಭಾಷೆಯನ್ನು ಆದ್ಯತೆಯನ್ನಾಗಿಸಿಕೊಂಡು ಆಂಗ್ಲ ಭಾಷೆಯನ್ನು ಕಲಿಯುವುದು ತಪ್ಪಲ್ಲ. ಹೊಸ ಶಿಕ್ಷಣ ನೀತಿಯನ್ನು ತಾವು ಅಧ್ಯಯನ ಮಾಡಿದ್ದು, ಈ ನೀತಿಯು ಮಾಕ್ರ್ಸ್ ಮತ್ತು ಮೆಕಾಲೆ ಪ್ರೇರಿತ ಶಿಕ್ಷಣ ನೀತಿಯಿಂದ ಹೊರಬಂದ ಭಾರತೀಯ ಶಿಕ್ಷಣ ನೀತಿ ಇದಾಗಿದೆ. ಈ ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆ, ಕಲೆ, ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆಯಲ್ಲದೆ ಆಸಕ್ತ ವಿಷಯಗಳನ್ನು ಕಲಿಯಲು ಹಾಗೂ ಸಂಪೂರ್ಣ ವ್ಯಕ್ತಿಯಾಗಿ ಬೆಳೆಯುವ ಯೋಜನೆಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

 

Recent Articles

spot_img

Related Stories

Share via
Copy link
Powered by Social Snap