ಮಕ್ಕಳ ಆಕರ್ಷಣೆಗೆ ಡಿಸ್ನಿಲ್ಯಾಂಡ್ ಸಿದ್ಧ
ತುಮಕೂರು :
ವಿಶೇಷ ವರದಿ :ರಾಕೇಶ್.ವಿ.
ಒಂದೇ ಸೂರಿನಡಿ ವಿವಿಧ ಸೌಲಭ್ಯಗಳು ಲಭ್ಯ ಎಂಬಂತೆ ಒಂದೇ ಜಾಗದಲ್ಲಿ ವಿವಿಧ ವರ್ಣಮಯ ಆಕರ್ಷಕ ಹೂಗಳು ಮೈನವಿರೇಳಿಸುತ್ತಿವೆ. ಇದರ ನಡುವೆ ಹೆಚ್ಚಾಗಿ ಮಕ್ಕಳನ್ನು ಕೈಬೀಸಿ ಕರೆಯುವ ಡಿಸ್ನಿ ಲ್ಯಾಂಡ್ ಥೀಮ್‍ನ ಕೋಟೆ, ಹೂವಿನ ಬೊಂಬೆಗಳನ್ನು ಕಾಣಬಹುದಾಗಿದೆ.
ನಗರದ ತೋಟಗಾರಿಕಾ ಇಲಾಖಾ ಆವರಣದಲ್ಲಿ ಮೂರುದಿನಗಳ ಫಲ ಪುಷ್ಪ ಪ್ರದರ್ಶನ ಆರಂಭವಾಗಿದ್ದು, ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೆ ಪ್ರದರ್ಶನ ಏರ್ಪಡಿಸಲಾಗಿದ್ದು, ಹೂವಿನಲ್ಲಿ ಮೂಡಿ ಬಂದ ವಿವಿಧÀ ಪ್ರಾಣಿ, ಪಕ್ಷಿಗಳ ಕಲಾಕೃತಿಗಳು ಮನಸ್ಸಿಗೆ ಆಹ್ಲಾದ ನೀಡುತ್ತವೆ. ಆ.31ರಂದು ಪ್ರಾರಂಭವಾದ ಈ ಫಲಪುಷ್ಪ ಪ್ರದರ್ಶನವು ಇನ್ನೂ ಎರಡು ದಿನಗಳ ಕಾಲ ನಡೆಯಲಿದೆ.
ಬೆಂಗಳೂರು ಮೂಲದ ಕಲಾಕಾರರು
ಬೆಂಗಳೂರು ಮೂಲದ ಕಲಾಕಾರರು ಸುಮಾರು 1.80 ಲಕ್ಷ ಹೂಗಳನ್ನು ಬಳಸಿ 30ಅಡಿ ಅಗಲ ಮತ್ತು 20ಅಡಿ ಎತ್ತರದ ಡಿಸ್ನಿ ಲ್ಯಾಂಡ್‍ಅನ್ನು ನಿರ್ಮಾಣ ಮಾಡಿದ್ದಾರೆ. ಬಣ್ಣ ಬಣ್ಣದ ಹೂವುಗಳಲ್ಲಿ ಹೂಗಳ ರಾಜ ಗುಲಾಬಿಯು ಕಂಗೊಳಿಸುತ್ತಿವೆ. ಅದರ ಸುತ್ತಮುತ್ತಲೂ ಡಿಸ್ನಿಯ ಮಿಕ್ಕಿಮೌಸ್‍ನ ಬೊಂಬೆಗಳನ್ನು ಹೂಗಳಿಂದಲೇ ಮಾಡಲಾಗಿದೆ. ಇಲಾಖೆಯ ಪ್ರವೇಶದಲ್ಲಿಯೇ ಹೂಗಳ ಜೊತೆ ಸೆಲ್ಫಿ ಪಾಯಿಂಟ್ ಅನ್ನು ಮಾಡಲಾಗಿದೆ. ಎತ್ತ ನೋಡಿದರೂ ಬರೀ ವರ್ಣಮಯ ಹೂವುಗಳೇ ದರ್ಶನ ನೀಡುತ್ತವೆ.
ವಿವೇಕಾನಂದರ ಕಲಾಕೃತಿ
ಫಲಪುಷ್ಪ ಪ್ರದರ್ಶನದಲ್ಲಿ ಮೈಸೂರಿನ ಕಲಾವಿದೆ ಗೌರಿ ಅವರು ಸ್ವಾಮಿ ವಿವೇಕಾನಂದರ 15 ಅಡಿ ಅಳತೆಯ ಮರಳಿನ ಕಲಾಕೃತಿ ತಯಾರಿಸಿದ್ದಾರೆ. ಇದರ ಜೊತೆಯಲ್ಲಿ ಮಧುಗಿರಿಯ ಸಿರಿಧಾನ್ಯಗಳ ಕಲಾವಿದ ಎಂದೇ ಪ್ರಸಿದ್ಧಿ ಪಡೆದ ಶಿವಣ್ಣನವರು ತಯಾರಿಸಿದ ವಿವೇಕಾನಂದರ ಕಲಾಕೃತಿಯು ನೋಡುಗರನ್ನು ಆಕರ್ಷಿಸುತ್ತಿದೆ. ಜೊತೆಗೆ ಚಾಮರಾಜೇಂದ್ರ ಒಡೆಯರ್‍ರವರ ಭಾವಚಿತ್ರವನ್ನೂ ಕೂಡ ಪ್ರದರ್ಶನಕ್ಕೆ ಇಡಲಾಗಿದೆ.
18 ಸಾವಿರ ಹೂವಿನ ಗಿಡಗಳು
ದೇಶೀಯ ಹೂಗಳಾದ ಗುಲಾಬಿ, ಚೆಂಡು ಹೂ, ಸುಗಂಧರಾಜ ಸೇರಿದಂತೆ ವಿದೇಶಿ ಹೂಗಳಾದ ಮಾರಿಗೋಲ್ಡ್, ಕೋಲಿಯಸ್, ಜೀನಿಯಾ, ಕ್ರೈಸಾನ್, ತಮಮ್, ಪೆಟೂನಿಯ, ಆರ್ಕಿಡ್ ಸೆಲೋಷಿಯಾ, ಸಾಲ್ವಿಯ, ಡೆಲಿಯೋ, , ಗೋಲ್ಡನ್‍ಶೆಪ್ಸ್, ಬಟನ್ ಹೂ ಸೇರಿದಂತೆ 25ಕ್ಕೂ ಹೆಚ್ಚು ಬಗೆಯ 18 ಸಾವಿರ ಹೂವಿನ ಗಿಡಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಇವುಗಳನ್ನು ನೋಡುವ ಮಹಿಳೆಯರು, ವಿದ್ಯಾರ್ಥಿನಿಯರು ಮನಸೋಲುತ್ತಿದ್ದಾರೆ.
ಹೂವಿನ ಪಕ್ಷಿಗಳು
ಪ್ಯಾರಿಸ್‍ನಲ್ಲಿರುವ ಡಿಸ್ನಿ ಲ್ಯಾಂಡ್‍ನ ಮಾದರಿಯನ್ನು ತುಮಕೂರಿನಲ್ಲಿ ನಿರ್ಮಾಣ ಮಾಡಿದ್ದು, ಇದರಲ್ಲಿ ಪ್ರವೇಶಿಸುವ ಮುನ್ನವೆ ನಮ್ಮ ರಾಷ್ಟ್ರ ಪಕ್ಷಿ ನವಿಲು ದರ್ಶನ ನೀಡುತ್ತದೆ. ಅದೇ ರೀತಿ ಮುಂದಕ್ಕೆ ಹೋದರೆ ಅಲ್ಲಿ ನಿಶಿಸುತ್ತಿರುವ ಚಿಟ್ಟೆಯ ಸಂತತಿಯನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಚಿಟ್ಟೆಯನ್ನು ನಿರ್ಮಿಸಲಾಗಿದೆ.
ವಿವಿಧ ಮಳಿಗೆಗಳು
ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸುವ ರೈತರು ಸೇರಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ದೃಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯಿಂದ 30 ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಸರ್ಕಾರದ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು. ರೈತರಿಗೆ ತೋಟಗಾರಿಕೆ ಮಾಡುವ ಕುರಿತು ವಿವಿಧ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.
ವಿವಿಧ ಗಿಡಗಳ ಪ್ರದರ್ಶನ
ಛಾವಣಿ ತೋಟ, ಮನೆ ಮುಂದಿನ ಅಲಂಕಾರಿಕ ತೋಟ, ಸಾವಯುವ ಕೃಷಿ, ಕುಂಡದಲ್ಲಿ ಬೆಳೆಯುವ ಗಿಡಗಳು ಸೇರಿದಂತೆ ಇನ್ನಿತರ ವಿವಿಧ ಮಾದರಿಯ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ರೈತರಿಗೆ ತರಬೇತಿ
ಕಾರ್ಯಕ್ರಮಕ್ಕೆ ಬರುವ ರೈತರಿಗೆ ಸಿಪಿಸಿಆರ್‍ಐ, ಕೆವಿಕೆ ವಿಜ್ಞಾನಿಗಳಿಂದ ರೈತರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ತೋಟಗಾರಿಕೆ ಬಗ್ಗೆ, ಇತ್ತೀಚೆಗೆ ಕಾಣಿಸಿಕೊಂಡ ಕೀಟಾಣುಗಳ ಬಗ್ಗೆ ಅದನ್ನು ಹೇಗೆ ನಿರ್ಮೂಲನೆ ಮಾಡಬೇಕು ಎಂಬುದರ ಬಗ್ಗೆ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಜೇನು ಸಾಕಾಣಿಕೆ ಬಗ್ಗೆ ತರಬೇತಿ
ಫಲಪುಷ್ಪ ಪ್ರದರ್ಶನದಲ್ಲಿ ಮಧುವನ ಕೂಟ ಆಯೋಜಿಸಲಾಗಿದೆ. ಇದರಲ್ಲಿ ಜೇನು ಕೃಷಿಯ ಬಗ್ಗೆ ರೈತರಿಗೆ ಮಾಹಿತಿ ಹಾಗೂ ತರಬೇತಿ ನೀಡಲಾಗುವುದು. ಶುದ್ಧ ಜೇನಿಗೆ ಹೆಚ್ಚಿನ ಬೇಡಿಕೆಯಿದ್ದು, ಜೇನು ಉತ್ಪನ್ನಗಳನ್ನು ಸಹ ಇಲ್ಲಿ ಮಾರಾಟ ಮಾಡಲಾಗುತ್ತಿದೆ.
ಗಮನ ಸೆಳೆಯುವ ರಂಗೋಲಿ ಕಲೆ
ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳು ತೋಟಗಾರಿಕೆ ಇಲಾಖೆಯಿಂದ ನೀಡಲಾದ ನಿರ್ದಿಷ್ಠ ಪ್ರದೇಶದಲ್ಲಿ ಮರದ ಆಕಾರದಲ್ಲಿ ಬಳೆಗಳಿಂದ ಚಿತ್ರರೂಪಿಸಿದ್ದು, ಮರದಲ್ಲಿ ತೆರೆದ ಪುಸ್ತಕದಂತೆ ಎರಡು ಪುಟಗಳನ್ನು ರಂಗೋಲಿ ಕಲೆಯಲ್ಲಿ ಮೂಡಿಸಿದ್ದಾರೆ. ಒಂದು ಪುಟದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಚಿತ್ರ ಮೂಡಿಬಂದರೆ ಇನ್ನೊಂದು ಪುಟದಲ್ಲಿ ತೋಟಗಾರಿಕೆ ಪಿತಾಮಹ ಮರಿಗೌಡರ ಚಿತ್ರವನ್ನು ರೂಪಿಸಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ಲಾಲ್‍ಬಾಗ್, ಮಂಡ್ಯ, ಮೈಸೂರಿನಲ್ಲಿ ಫಲಪುಷ್ಪ ಪ್ರದರ್ಶನಗಳು ನಡೆದಿವೆ. ಪ್ರತಿ ವರ್ಷ ತುಮಕೂರಿನಲ್ಲಿ ಮಾಡಲಾಗುತ್ತಿದೆ. ಈ ಬಾರಿ ವಿಶೇಷವಾಗಿ ಕರ್ನಾಟಕದಲ್ಲಿ ಎಲ್ಲೂ ಮಾಡದ ಡಿಸ್ನಿಲ್ಯಾಂಡ್ ಥೀಮ್‍ನ ಫಲಪುಷ್ಪ ಪ್ರದರ್ಶನವನ್ನು ಸುಮಾರು 15 ಲಕ್ಷ ಹೆಚ್ಚು ವೆಚ್ಚದಲ್ಲಿ ಏರ್ಪಡಿಸಿದ್ದೇವೆ. ವಿವಿಧ ಶಾಲೆಗಳಿಂದ ಶಾಲಾ ಶಿಕ್ಷಕರೇ ತಮ್ಮ ಮಕ್ಕಳನ್ನು ಕರೆತರುತ್ತಿದ್ದಾರೆ.
ಬಿ.ರಘು, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ
ಪ್ರಥಮ ಬಾರಿ ತುಮಕೂರಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಮಕ್ಕಳಿಗೆ ಇಷ್ಟವಾದ ಡಿಸ್ನಿಲ್ಯಾಂಡ್ ಮಾದರಿಯನ್ನು ರೂಪಿಸಿ ಪ್ರದರ್ಶನ ಮಾಡುತ್ತಿದ್ದಾರೆ. ಇದರಲ್ಲಿ ವಿವಿಧ ರೀತಿಯ ಹೂಗಳನ್ನು ಪ್ರದರ್ಶನ ಮಾಡುತ್ತಿರುವುದು ಸಂತಸವಾಗಿದೆ.
ರೇಖಾ, ಶಾಲಾ ಶಿಕ್ಷಕಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ