ಪ್ರತಿ ವರ್ಷ ದೇಶದಲ್ಲಿ 4.35 ಲಕ್ಷ ಜನ ಕ್ಷಯಕ್ಕೆ ಬಲಿ

ದಾವಣಗೆರೆ :

       ಭಾರತದಲ್ಲಿ ಪ್ರತಿ ವರ್ಷ 2.79 ದಶಲಕ್ಷ ರೋಗಿಗಳು ಕ್ಷಯರೋಗಕ್ಕೆ ತುತ್ತಾಗುತ್ತಿದ್ದು, ಅದರಲ್ಲಿ ವರ್ಷಕ್ಕೆ 4.35 ಲಕ್ಷ ರೋಗಿಗಳು ಅಸುನೀಗುತ್ತಿದ್ದಾರೆಂದು ಜಿಲ್ಲಾ ಕ್ಷಯ ರೋಗ, ಹೆಚ್.ಐ.ವಿ/ಏಡ್ಸ್ ನಿಯಂತ್ರಣಾಧಿಕಾರಿ ಡಾ.ಜಿ.ಡಿ.ರಾಘವನ್ ಆತಂಕ ವ್ಯಕ್ತಪಡಿಸಿದರು.
ನಗರದ ಡಿಹೆಚ್‍ಒ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

5 ನಿಮಷಕ್ಕೆ ಇಬ್ಬರು ಮರಣ:

      ಜಾಗತಿಕವಾಗಿ ಪ್ರತಿವರ್ಷ 10.04 ದಶಲಕ್ಷ ಕ್ಷಯರೋಗಿಗಳು ದಾಖಲಾಗುತ್ತಿದ್ದು, ಈ ಪೈಕಿ 1.6 ದಶಲಕ್ಷದಷ್ಟು ರೋಗಿಗಳು ಸಾವಿಗೀಡಾಗುತ್ತಿದ್ದಾರೆ. ಭಾರತದಲ್ಲಿ ಶೇ.40 ರಷ್ಟು ಜನರು ಕ್ಷಯರೋಗ ಸೋಂಕಿಗೆ ತುತ್ತಾಗುತ್ತಿದ್ದಾರೆ. ಆದರೆ, ರೋಗನಿರೋಧಕ ಶಕ್ತಿಯಿಂದಾಗಿ ಕ್ಷಯರೋಗದಿಂದ ಬಳಲುವುದಿಲ್ಲ.

      ಭಾರತದಲ್ಲಿ ಪ್ರತಿ ವರ್ಷ 2.79 ದಶಲಕ್ಷ ರೋಗಿಗಳು ಕ್ಷಯರೋಗಕ್ಕೆ ತುತ್ತಾಗುತ್ತಿದ್ದು, ಅದರಲ್ಲಿ ವರ್ಷಕ್ಕೆ 4.35 ಲಕ್ಷ ರೋಗಿಗಳು ಸಾವನಪ್ಪುತ್ತಿದ್ದಾರೆ. ಪ್ರತಿದಿನ ಭಾರತದಲ್ಲಿ 6 ಸಾವಿರಕ್ಕಿಂತಲೂ ಹೆಚ್ಚಿನ ಜನರು ಕ್ಷಯರೋಗದ ಸೋಂಕಿಗೆ ಒಳಗಾಗುತ್ತಿದ್ದಾರೆ. ಇದರಲ್ಲಿ ದಿನಕ್ಕೆ 600ಕ್ಕಿಂತ ಹೆಚ್ಚು ಅಂದರೆ ಪ್ರತಿ 5 ನಿಮಿಷಕ್ಕೆ ಇಬ್ಬರಂತೆ ಮರಣ ಹೊಂದುತ್ತಿದ್ದಾರೆಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಇಳಿಮುಖ:

      ದಾವಣಗೆರೆ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 1994 ಕ್ಷಯರೋಗಿಗಳು ಪತ್ತೆಯಾಗಿದ್ದಾರೆ. 1616 ರೋಗಿಗಳು ಗುಣಮುಖರಾಗಿದ್ದು, 152 ರೋಗಿಗಳು ಸಾವನ್ನಪ್ಪಿದ್ದಾರೆ. 59 ರೋಗಿಗಳು ಅರ್ಧದಲ್ಲೆ ಚಿಕಿತ್ಸೆ ನಿಲ್ಲಿಸಿದ್ದಾರೆ. ಇಂತಹ ರೋಗಿಗಳನ್ನು ಪುನಃ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಗುವುದು. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕ್ಷಯರೋಗಕ್ಕೆ ತುತ್ತಾಗುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು.

      ಜರ್ಮನ್‍ನ ವಿಜ್ಞಾನಿ ಡಾ.ರಾಬರ್ಟ್ ಕಾಖ್ 1882 ರ ಮಾ.24 ರಂದು ಕ್ಷಯರೋಗವನ್ನು ಉಂಟುಮಾಡುವ ಮೈಕೊ ಬ್ಯಾಕ್ಟೀರಿಯಂ ಟ್ಯೂಬರ್‍ಕುಲೋಸಿಸ್ ಎಂಬ ಸ್ಮೂಕ್ಷಾಣು ಕಂಡುಹಿಡಿದ ದಿನವನ್ನು ವಿಶ್ವ ಕ್ಷಯರೋಗ ದಿನವನ್ನಾಗಿ ಪ್ರತಿ ವರ್ಷ ಮಾ.24 ರಂದು ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಮಂತ್ರಾಲಯದ ಹಿರಿಯ ಪ್ರಾದೇಶಿಕ ನಿರ್ದೇಶಕ ಡಾ.ಕೆ.ರವಿಕುಮಾರ್, ವಿಶ್ವ ಕ್ಷಯ ರೋಗ ದಿನ ಆಚರಣೆಯ ಮೂಲ ಉದ್ದೇಶ ಸಮಾಜದಲ್ಲಿ ಇರುವ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಿ ಅವರಿಗೆ ತಿಳುವಳಿಕೆ ಮತ್ತು ಚಿಕಿತ್ಸೆಯನ್ನು ನೀಡುವ ಮೂಲಕ ಅವರನ್ನು ಆರೋಗ್ಯಕರ ಜೀವನ ನಡೆಸುವಂತೆ ಮಾಡುವುದಾಗಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕ್ಷಯರೋಗದಿಂದ ಬಳಲುವ ರೋಗಿಗಳು ಇಳಿಮುಖವಾಗುತ್ತಿರುವುದಕ್ಕೆ ಇಲ್ಲಿನ ಅಧಿಕಾರಿಗಳು, ವೈದ್ಯರು, ಮತ್ತು ಸಿಬ್ಬಂದಿವರ್ಗಗಳ ಶ್ರಮ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉಚಿತ ಚಿಕಿತ್ಸೆ:

      ಸರ್ಕಾರವು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ. ಇಲ್ಲಿ ಬಡವ, ಶ್ರೀಮಂತ ಎಂದು ಲೆಕ್ಕಿಸದೇ ಕ್ಷಯ ಹೊಂದಿದ ರೋಗಿಯ ಬಗ್ಗೆ ಖಾಸಗಿ ಆಸ್ಪತ್ರೆಯಲ್ಲೂ ಮಾಹಿತಿ ಪಡೆದು ಉಚಿತ ಚಿಕಿತ್ಸೆಗೆ ಸಹಕರಿಸಲಾಗುವುದು. ಭಾರತದಲ್ಲಿ ಸಾವನ್ನಪ್ಪುವ 5 ಜನರಲ್ಲಿ ಒಬ್ಬರು ಕ್ಷಯ ರೋಗದಿಂದ ಸಾವನ್ನಪ್ಪಿರುತ್ತಾರೆ.

       ಇದಕ್ಕಾಗಿ ಜಿಲ್ಲೆಯಲ್ಲಿ ಕ್ಷಯ ರೋಗ ಹೊಂದಿದ ವ್ಯಕ್ತಿಗಳಿಗೆ ನಿಕ್ಷಯ್ ಯೋಜನೆಯಡಿ ಮಾಸಿಕ ಭತ್ಯೆ 500 ರೂ.ಗಳನ್ನು ನೀಡಲಾಗುತ್ತಿದೆ. ಕ್ಷಯ ರೋಗದ ನಿರ್ಮೂಲನೆಗೆ ಎಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು ಸೇರಿದಂತೆ ಸ್ವಯಂ ಸೇವಾ ಸಂಸ್ಥೆಗಳು, ಸಾರ್ವಜನಿಕರು ಕೈ ಜೋಡಿಸುವ ಮೂಲಕ ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿವಹಿಸಬೇಕೆಂದು ಕರೆ ನೀಡಿದರು.

       ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತ್ರಿಪುಲಾಂಭ ಮಾತನಾಡಿ, ಪ್ರತಿದಿನ ಜಗತ್ತಿನಾದ್ಯಂತ ಕ್ಷಯರೋಗಕ್ಕೆ ಒಳಗಾಗಿ 4,500 ಜನರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆ ಕಾರಣ ಅವರಲ್ಲಿ ಕ್ಷಯರೋಗದ ಬಗ್ಗೆ ಅರಿವಿನ ಕೊರತೆ ಇರುವುದು. ಹಿಂದೆ ಕ್ಷಯರೋಗ ಇದೆ ಎಂದಾದರೆ ಅವರನ್ನು ಸಾಮಾಜಿಕವಾಗಿ ಅಸಮಾನತೆಯಿಂದ ಕಾಣುತ್ತಿದ್ದರು. 2005ರಲ್ಲಿ ಎನ್‍ಹೆಚ್‍ಎಂ ಯೋಜನೆ ಬಂದಾಗಿನಿಂದ ಇದು ಬದಲಾಯಿತು ಎಂದರು.

       ಕಾರ್ಯಕ್ರಮದಲ್ಲಿ ಐ.ಇ.ಸಿ ಸಾಮಗ್ರಿ ಮತ್ತು ಇಲಾಖೆ ಡಿ.ವಿ.ಡಿ ಬಿಡುಗೊಡೆಗೊಳಿಸಲಾಯಿತು. ಹಾಗೂ ಜಿಲ್ಲೆಯಾದ್ಯಂತ ಪರಿಷ್ಕತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳು, ವೈದ್ಯರು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಪ್ರಶಸ್ತಿ ಹಾಗೂ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು.

       ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಅಧೀಕ್ಷಕರಾದ ಡಾ.ಹೆಚ್.ಡಿ.ನೀಲಾಂಬಿಕೆ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು.ಸಿದ್ದೇಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರ್‍ಸಿಎಚ್‍ಒ ಡಾ.ಇ.ಶಿವಕುಮಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಸರೋಜ ಬಾಯಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಂಗಾಧರ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಡಾ.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap