ಬೆಂಗಳೂರು:
ರಾಜ್ಯದಲ್ಲಿ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಕಾರ್ಯ ಶೇ 99 ರಷ್ಟು ಪೂರ್ಣಗೊಂಡಿದ್ದು, ಈ ಕ್ರಮದಿಂದ 4.5 ಲಕ್ಷ ಬೋಗಸ್ ಕಾರ್ಡ್‍ಗಳು ರದ್ದಾಗಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಪಡಿತರ ಚೀಟಿಗಾಗಿ ಒಟ್ಟು 8 ಲಕ್ಷ ಅರ್ಜಿಗಳು ಬಂದಿದ್ದು ಪರಿಷ್ಕರಣೆ ನಂತರ 6.26 ಲಕ್ಷ ಅರ್ಜಿ ಸ್ವೀಕಾರವಾಗಿದೆ. ಮುಂದಿನ ತಿಂಗಳ ಅಂತ್ಯದೊಳಗಾಗಿ ಬಾಕಿಯಿರುವ 6.26 ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ್ ವಿತರಣೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಅನಿಲಭಾಗ್ಯ ಯೋಜನೆಯಡಿ 30 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಲ್ಲಿ 1 ಲಕ್ಷ ಮಂದಿಗೆ ಅನಿಲ ಸಂಪರ್ಕ ನೀಡಿದ್ದು, ಕೇಂದ್ರದಿಂದ ಸೌಲಭ್ಯ ಪಡೆದಿರುವ 31 ಸಾವಿರ ಫಲಾನುಭವಿಗಳ ಪಟ್ಟಿಯನ್ನು ಕೈ ಬಿಡಲಾಗಿದೆ ಎಂದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲು ಈ ಹಿಂದೆಯೇ ಕ್ರಮ ತೆಗೆದುಕೊಳ್ಳಲಾಗಿತ್ತು. ಆದರೆ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಗುಡ್ಡಗಾಡು ಪ್ರದೇಶ ಹೆಚ್ಚಾಗಿರುವುದರಿಂದ ಇದರ ಸಂಪೂರ್ಣ ಅಳವಡಿಕೆ ಸಾಧ್ಯವಾಗಿಲ್ಲ. ಈ ಹಿಂದೆ ನ್ಯಾಯಬೆಲೆ ಅಂಗಡಿಯವರೇ ಇದನ್ನು ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಹೊರಗುತ್ತಿಗೆ ನೀಡಲು ಪರಿಶೀಲಿಸಲಾಗಿದೆ ಎಂದು ಹೇಳಿದರು.