ರಸ್ತೆ ರೆಸ್ಟೋರೇಷನ್ ಮಾಡಲು ನಿರ್ಲಕ್ಷ್ಯ: 4 ಏಜೆನ್ಸಿಗಳಿಗೆ ಒಟ್ಟು 1 ಕೋಟಿ ದಂಡ

ತುಮಕೂರು

    ತುಮಕೂರು ನಗರದಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ರಸ್ತೆಯನ್ನು ಅಗೆದ ಬಳಿಕ ನಿಯಮಾನುಸಾರ ಅದನ್ನು ರೆಸ್ಟೋರೇಷನ್ (ಮೊದಲಿದ್ದ ಸ್ಥಿತಿಗೆ) ಮಾಡದ ನಾಲ್ಕು ಏಜೆನ್ಸಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿರುವ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಅವರು ಒಟ್ಟು ಒಂದು ಕೋಟಿ ರೂ. ದಂಡ ವಿಧಿಸಿರುವ ಮಹತ್ತರ ಬೆಳವಣಿಗೆ ಮಾರ್ಚ್ 4 ರಂದು ನಡೆದಿದೆ.

    ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಗೆ 60 ಲಕ್ಷ ರೂ.; ಬೆಸ್ಕಾಂಗೆ 10 ಲಕ್ಷ ರೂ.; ಮೆಘಾ ಗ್ಯಾಸ್ ಕಂಪನಿಗೆ 20 ಲಕ್ಷ ರೂ.; ರಿಲೆಯನ್ಸ್ ಜಿಯೋ ಕಂಪನಿಗೆ 10 ಲಕ್ಷ ರೂ.- ಹೀಗೆ ಒಟ್ಟು ಒಂದು ಕೋಟಿ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ.

   ಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಈಗಾಗಲೇ ಕೈಗೊಂಡಿರುವ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಕುರಿತು ಹಲವು ಬಾರಿ ಸಮನ್ವಯ ಸಮಿತಿಯ ಸಭೆ ನಡೆಸಿ ವಿವಿಧ ಇಲಾಖೆಗಳ ಮುಖ್ಯಸ್ಥರು ಮತ್ತು ಅನುಷ್ಠಾನಗೊಳಿಸುವ ಏಜೆನ್ಸಿಗಳೊಂದಿಗೆ ಚರ್ಚಿಸಲಾಗಿದೆ. ಕಾಮಗಾರಿಗಳಿಗಾಗಿ ಅಗೆದಿರುವ ರಸ್ತೆಗಳನ್ನು ಸಮರ್ಪಕವಾಗಿ ರೆಸ್ಟೊರೇಷನ್ ಮಾಡದೆ ಇರುವುದರಿಂದ ನಗರದಲ್ಲಿ ಧೂಳು ಹೆಚ್ಚಾಗಿದೆ.

      ಇದರಿಂದ ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಹೆಚ್ಚುತ್ತಿದೆಯೆಂದು ಸದರಿ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕಾರಣದಿಂದ ತುರ್ತಾಗಿ ರೆಸ್ಟೊರೇಷನ್ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರೂ, ಸದರಿ ಇಲಾಖೆಗಳು ಮತ್ತು ಏಜೆನ್ಸಿಗಳು ಸಮರ್ಪಕವಾಗಿ ರೆಸ್ಟೊರೇಷನ್ ಕಾಮಗಾರಿ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಟಿ.ಭೂಬಾಲನ್ ಮಾಹಿತಿ ನೀಡಿದ್ದಾರೆ.

     ಅಗೆದಿರುವ ರಸ್ತೆಗಳನ್ನು ಕನಿಷ್ಟ ಅವಧಿಯಲ್ಲಿ ರೆಸ್ಟೊರೇಷನ್ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಕಾನೂನಿನ ರೀತಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಭೂಬಾಲನ್ ತಮ್ಮ ಆದೇಶದಲ್ಲಿ ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap