ಹೊನ್ನಾಳಿ:
ರಸ್ತೆ ಬದಿಯಲ್ಲಿ ಬಸ್ಗೆ ಕಾಯುತ್ತಾ ನಿಂತಿದ್ದವರಿಗೆ ಕಾರೊಂದು ಡಿಕ್ಕಿ ಹೊಡೆದು ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೆ ಈಡಾಗಿರುವ ಘಟನೆ ತಾಲೂಕಿನ ಹರಳಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ ಸಂಭವಿಸಿದೆ.
ತಾಲೂಕಿನ ಅರಬಗಟ್ಟೆ ಗ್ರಾಮದ ರಮೇಶ್(38), ಉಷಾ(28), ಚಂದ್ರು(6) ಮತ್ತು ಕಾರ್ ಚಾಲಕ ದಾವಣಗೆರೆಯ ಎಸ್ಸೆಸ್ ಲೇ ಔಟ್ ನಿವಾಸಿ, ಗುತ್ತಿಗೆದಾರ ಹಿರೇಮಠ್ (45) ಸಾವಿಗೀಡಾಗಿರುವ ದುರ್ದೈವಿ ಗಳಾಗಿದ್ದಾರೆ . ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯಲ್ಲಿ ನಿಂತಿದ್ದವರಿಗೆ ಡಿಕ್ಕಿ ಹೊಡೆದು, ಬಳಿಕ ಮರಕ್ಕೆ ತಾಗಿಕೊಂಡು ನಿಂತಿದೆ. ಒಂದು ವೇಳೆ ರಸ್ತೆಯ ಬದಿಯಲ್ಲಿನ ಮರ ಇಲ್ಲದಿದ್ದರೆ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಾಲೂಕಿನ ಅರಬಗಟ್ಟೆ ಗ್ರಾಮದ ಚೀಲೋಡಿ ಮನೆತನದ ಒಂದೇ ಕುಟುಂಬಕ್ಕೆ ಸೇರಿದ ರಮೇಶ್, ಉಷಾ, ಚಂದ್ರು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮಕ್ಕೆ ತೆರಳಲು ಬಸ್ಗೆ ಕಾಯುತ್ತ ನಿಂತಿದ್ದರು. ಕಾರ್(ನಂ. ಕೆಎ17 ಪಿ5003) ಶಿವಮೊಗ್ಗದಿಂದ ದಾವಣಗೆರೆಗೆ ತೆರಳುತ್ತಿತ್ತು.
ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ