ನಗರದ 4 ಕಡೆ ‘ಫೀವರ್ ಕ್ಲೀನಿಕ್’ ತೆರೆಯಲು ಸಿದ್ಧತೆ

ತುಮಕೂರು

    ತುಮಕೂರು ನಗರದ ನಾಲ್ಕು ಪ್ರತ್ಯೇಕ ಸ್ಥಳಗಳಲ್ಲಿ ಕೊಳಚೆ ಪ್ರದೇಶಗಳನ್ನು ಗುರಿಯಾಗಿಸಿಕೊಂಡು “ಫೀವರ್ ಕ್ಲೀನಿಕ್” ತೆರೆಯಲು ತುಮಕೂರು ಮಹಾನಗರ ಪಾಲಿಕೆ ಮತ್ತು ಆರೋಗ್ಯ ಇಲಾಖೆಯು ಭರದ ಸಿದ್ಧತೆಗಳನ್ನು ನಡೆಸಿದ್ದು, ಸೋಮವಾರ ಅಥವಾ ಅದಕ್ಕೂ ಮೊದಲೇ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

    ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್ ಅವರ ಸೂಚನೆ ಮೇರೆಗೆ ಶುಕ್ರವಾರ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ನಾಗೇಶ್ ಕುಮಾರ್ ಮತ್ತು ತುಮಕೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶರತ್ ಚಂದ್ರ ಅವರು ಸ್ಥಳಪರಿಶೀಲನೆ ನಡೆಸಿ “ಫೀವರ್ ಕ್ಲೀನಿಕ್” ಗಾಗಿ ಸ್ಥಳಗಳನ್ನು ಗುರುತಿಸಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

     ಮರಳೂರು ಜನತಾ ಕಾಲೋನಿಯ ಅಂಗನವಾಡಿ ಕೇಂದ್ರ, ಪೂರ್‍ಹೌಸ್ ಕಾಲೋನಿ ಮತ್ತು ಹೆಗಡೆ ಕಾಲೋನಿಗೆ ಮಧ್ಯದಲ್ಲಿರುವ ಸಿದ್ಧಾರ್ಥ ಪ್ರೌಢಶಾಲೆಯ ಕಟ್ಟಡ, ದಿಬ್ಬೂರಿನ 1200 ಮನೆಗಳ ಸಂಕೀರ್ಣದಲ್ಲಿರುವ ಸಮುದಾಯ ಭವನ ಮತ್ತು ದೇವರಾಯಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಕ್ಷಣವೇ “ಫೀವರ್ ಕ್ಲೀನಿಕ್” ಆರಂಭಿಸಲು ಯೋಜಿಸಲಾಗಿದೆ.

ಅಗತ್ಯಬಿದ್ದರೆ ಇನ್ನೊಂದು

     ಒಂದು ವೇಳೆ ಪೂರ್ ಹೌಸ್ ಕಾಲೋನಿ ಮತ್ತು ಹೆಗಡೆ ಕಾಲೋನಿಯ “ಫೀವರ್ ಕ್ಲೀನಿಕ್”ನಲ್ಲಿ ಜನದಟ್ಟಣಿ ಅಧಿಕವಾದರೆ, ಆಗ ಅದೇ ಕಟ್ಟಡದಲ್ಲಿ ತಕ್ಷಣವೇ ಇನ್ನೊಂದು “ಫೀವರ್ ಕ್ಲೀನಿಕ್” ತೆರೆಯಲು ಉದ್ದೇಶಿಸಲಾಗಿದೆ. ಸೂಕ್ತ ಸ್ಥಳ, ಅಲ್ಲಿ ಸಿಬ್ಬಂದಿಗೆ ಮೂಲ ಸೌಕರ್ಯ ಮತ್ತು ಸಿಬ್ಬಂದಿಗೆ ಊಟೋಪಹಾರದ ವ್ಯವಸ್ಥೆಯನ್ನು ಮಹಾನಗರ ಪಾಲಿಕೆಯು ಮಾಡಲಿದ್ದು, ವೈದ್ಯಕೀಯ ಹಾಗೂ ಇತರೆ ಸಿಬ್ಬಂದಿ ಮತ್ತು ಔಷಧಿಗಳ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯು ನಿರ್ವಹಿಸಲಿದೆ. ಈ ಕ್ಲೀನಿಕ್‍ಗಳು ಬೆಳಗಿನಿಂದ ಸಂಜೆಯವರೆಗೆ ಕಾರ್ಯನಿರ್ವಹಿಸಲಿವೆ.

     ವಿಶೇಷವಾಗಿ ಕೊಳಚೆ ಪ್ರದೇಶದ ಜನರು ಜ್ವರ, ನೆಗಡಿ, ಕೆಮ್ಮು ಇತ್ಯಾದಿ ಸಾಮಾನ್ಯ ಕಾಯಿಲೆಗಳು ಬಂದರೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ಥಳೀಯ ಮೆಡಿಕಲ್ ಶಾಪ್‍ಗಳಿಂದ ಯಾವುದಾದರೂ ಮಾತ್ರೆ ಸೇವಿಸಿ ಹಾಗೆಯೇ ಉಳಿದು ಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಸೂಕ್ತ ಔಷಧೋಪಚಾರ ದೊರಕಲೆಂದು ಈ ತಾತ್ಕಾಲಿಕ ಕ್ಲೀನಿಕ್‍ಗಳನ್ನು ತೆರೆಯಲಾಗುತ್ತಿದೆ. ಇಲ್ಲಿ ಔಷಧೋಪಚಾರದೊಂದಿಗೆ ಅಗತ್ಯವಿದ್ದರೆ ಸೂಕ್ತ ಪರೀಕ್ಷೆ ಮಾಡಿ ಕಾಯಿಲೆಗಳಿಗೆ ಆರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ ಎಂದು ಡಾ.ನಾಗೇಶ್ ಕುಮಾರ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap