ರಾಜ್ಯ ಸಭಾ ಚುನಾವಣೆ: 4ಜನರ ಅವಿರೋಧ ಆಯ್ಕೆ ಬಹುತೇಕ ಖಚಿತ

ಬೆಂಗಳೂರು

    ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸಭೆಯಿಂದ ನಡೆಯುವ ಚುನಾವಣೆಗೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದು ಆ ಮೂಲಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಕಾಂಗ್ರೆಸ್‍ನ ಮಲ್ಲಿಕಾರ್ಜುನ ಖರ್ಗೆ ಬಿಜೆಪಿಯ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.

      ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಜೆಡಿಎಸ್ ವತಿಯಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಬಿಜೆಪಿ ವತಿಯಿಂದ ಅಶೋಕ್ ಗಸ್ತಿ,ಈರಣ್ಣ ಕಡಾಡಿ ಹಾಗೂ ಪಕ್ಷೇತರ ಅಭ್ಯರ್ಥಿ ಸಂಗಮೇಶ್ ಚಿಕ್ಕ ನರಗುಂದ್ ಅವರು ಚುನಾವಣಾಧಿಕಾರಿ ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

      ನಾಮಪತ್ರ ಪರಿಶೀಲನೆ ಕಾರ್ಯ ಬುಧವಾರ ನಡೆಯಲಿದ್ದು ನಾಮಪತ್ರ ವಾಪಸ್ ಪಡೆಯಲು ಜೂನ್ ಹನ್ನೆರಡು ಕೊನೆಯ ದಿನವಾಗಿದೆ.ನಾಮಪತ್ರ ಪರಿಶೀಲನೆ ಕಾರ್ಯ ಬುಧವಾರ ನಡೆಯಲಿದ್ದು ಪಕ್ಷೇತರ ಅಭ್ಯರ್ಥಿಗೆ ಶಾಸಕರ ಸೂಚನೆ ಇಲ್ಲದೆ ಇರುವುದರಿಂದ ರಾಜಕೀಯ ಪಕ್ಷಗಳ ವತಿಯಿಂದ ನಾಮಪತ್ರ ಸಲ್ಲಿಕೆ ಮಾಡಿರುವ ನಾಲ್ಕು ಮಂದಿ ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ.ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಕಾರ್ಯ ಆರಂಭವಾದ ಹಿನ್ನೆಲೆಯಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಮಲ್ಲಿಕಾರ್ಜುನ ಖಗೆ ಅವರು ನಾಮಪತ್ರ ಸಲ್ಲಿಸಿದ್ದರು.

    ಈ ಮಧ್ಯೆ ಸೋಮವಾರ ಮಧ್ಯಾಹ್ನ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ದೆಹಲಿಯ ಬಿಜೆಪಿ ವರಿಷ್ಟರಿಂದ ಪ್ರಕಟವಾದ ನಂತರ ರಾಜ್ಯ ಬಿಜೆಪಿಯಲ್ಲಿ ಮೋಡ ಮುಸುಕಿದ ವಾತಾವರಣ ಇತ್ತಾದರೂ ಇಂದು ಬೆಳಿಗ್ಗೆಯ ವೇಳೆಗೆ ಎಲ್ಲವೂ ತಿಳಿಯಾಗ ತೊಡಗಿತು.ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾದ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿ ಮಾಡಿದರೆ,ಮತ್ತೊಂದು ಕಡೆಯಿಂದ ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂಬ ಮಾತು ಮುಖ್ಯಮಂತ್ರಿಗಳಾದಿಯಾಗಿ ಎಲ್ಲರಿಂದ ಕೇಳಿ ಬರತೊಡಗಿತು.

    ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಕೂಡಾ:ವರಿಷ್ಟರ ತೀರ್ಮಾನಕ್ಕೆ ನಾವು ಬದ್ಧ.ಟಿಕೆಟ್ ಕೇಳಿದ್ದು ನಿಜ.ಆದರೆ ಕಾರ್ಯಕರ್ತರಿಗೆ ಟಿಕೆಟ್ ಕೊಡಲು ಅದು ತೆಗೆದುಕೊಂಡ ನಿರ್ಧಾರ ಏನಿದೆ?ಅದು ಸ್ವಾಗತಾರ್ಹ ಎಂದು ರಮೇಶ್ ಕತ್ತಿ ಹೇಳಿದರೆ ಸಿಎಂ ಯಡಿಯೂರಪ್ಪ ಕೂಡಾ:ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸಾಗಿ ಹೋದ ಹೆಸರುಗಳಲ್ಲಿ ಈ ಇಬ್ಬರ ಹೆಸರೂ ಸೇರಿತ್ತು ಎಂದು ನುಡಿದರು.

    ಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ಸಿ.ಟಿ.ರವಿ,ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಲವರು ರಾಜ್ಯಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾದವರನ್ನು ಬೆಂಬಲಿಸಿ ಮಾತನಾಡಿದರು.ಹೀಗೆ ಎಲ್ಲ ಕಡೆಯಿಂದ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆಯೇ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಅಶೋಕ್ ಗಸ್ತಿ ಹಾಗೂ ಈರಣ್ಣ ಕಡಾಡಿ ಅವರು ವಿಧಾನಸೌಧದ ಮೊದಲ ಅಂತಸ್ತಿನಲ್ಲಿರುವ ಚುನಾವಣಾಧಿಕಾರಿ ವಿಶಾಲಾಕ್ಷಿ ಅವರನ್ನು ಭೇಟಿ ಮಾಡಿ ನಾಮಪತ್ರ ಸಲ್ಲಿಸಿದರು.

    ಇದಕ್ಕೂ ಮುನ್ನ ತಮ್ಮ ಪುತ್ರ ಹೆಚ್.ಡಿ.ರೇವಣ್ಣ,ಶಾಸಕ ಬಂಡೆಪ್ಪ ಕಾಶೆಂಪೂರ,ಬಿ.ಎಂ.ಫಾರೂಕ್ ಸೇರಿದಂತೆ ಹಲ ಪ್ರಮುಖರ ಜತೆ ಬಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಕೂಡಾ ತಮ್ಮ ನಾಮಪತ್ರ ಸಲ್ಲಿಸಿದರೆ,ತದ ನಂತರ ಪಕ್ಷೇತರ ಅಭ್ಯರ್ಥಿಯಾಗಿ ಸಂಗಮೇಶ್ ಚಿಕ್ಕನರಗುಂದ ಅವರು ನಾಮಪತ್ರ ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap