ಪಿ.ಎಂ.ಎ.ವೈ.: ಪಾಲಿಕೆಯಲ್ಲಿ 407 ಅರ್ಜಿ ಸಲ್ಲಿಕೆ

ತುಮಕೂರು
   `ಪ್ರಧಾನ ಮಂತ್ರಿ ಆವಾಸ್ ಯೋಜನೆ’ (ಪಿ.ಎಂ.ಎ.ವೈ.) ಯಡಿ ಮನೆ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಗೆ 1 ಲಕ್ಷ 50 ಸಾವಿರ ರೂ. ಸಹಾಯ ಧನ ಲಭಿಸಲಿದ್ದು, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದಕ್ಕೆ ಒಟ್ಟು  407 ಜನರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ನ.21 ಕೊನೆಯ ದಿನವಾಗಿತ್ತು. ಕೊನೆಯ ದಿನವೇ ಸುಮಾರು 100 ಅರ್ಜಿಗಳು ಸಲ್ಲಿಕೆಯಾಗಿವೆ. 
     ಪರಿಶಿಷ್ಟ ಜಾತಿಯವರು -69, ಪರಿಶಿಷ್ಟ ಪಂಗಡದವರು-9, ಇತರೆ ಹಿಂದುಳಿದ ವರ್ಗದವರು-104, ಸಾಮಾನ್ಯ ವರ್ಗದವರು-94, ಅಲ್ಪಸಂಖ್ಯಾತರು-130 ಹಾಗೂ ವಿಕಲಚೇತನರು-1 ಹೀಗೆ ಒಟ್ಟು 407 ಜನರು ಪಾಲಿಕೆ ಕಚೇರಿಯಲ್ಲಿರುವ ವಸತಿ/ನಲ್ಮ್ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. 
     ಈ ಯೋಜನೆಯಲ್ಲಿ 3 ಲಕ್ಷ ರೂ.ವರೆಗೆ ವಾರ್ಷಿಕ ಆದಾಯ ಇರುವ ಯಾವುದೇ ಸಮುದಾಯದವರು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಸ್ವಂತ ನಿವೇಶನ ಇರುವ ಅರ್ಜಿದಾರರು, ಖಾತಾ ನಕಲು, ಭಾವಚಿತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ವಿವರ, ಪಕ್ಕಾ ಮನೆ ಹೊಂದಿಲ್ಲದಿರುವ ಬಗ್ಗೆ ಸ್ವಯಂ ದೃಢೀಕರಣ ಪತ್ರವನ್ನು ಅರ್ಜಿಯೊಡನೆ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ವಸತಿ/ನಲ್ಮ್ ಶಾಖೆಗೆ ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ವಿಂಗಡಣೆ ಮಾಡಿ, ಬೆಂಗಳೂರಿನ ರಾಜೀವ್‍ಗಾಂಧಿ ವಸತಿ ನಿಗಮಕ್ಕೆ ರವಾನಿಸುವ ಪ್ರಕ್ರಿಯೆಯನ್ನು ಪಾಲಿಕೆ ಸಿಬ್ಬಂದಿ ಆರಂಭಿಸಿದ್ದಾರೆ. 
      ಅರ್ಜಿದಾರರು ತಮ್ಮ ನಿವೇಶನದಲ್ಲಿ 3 ರಿಂದ 4 ಚದರದ ಮನೆ ನಿರ್ಮಿಸಿಕೊಳ್ಳಬಹುದು. ಮನೆ ನಿರ್ಮಾಣದ ಪ್ರಕ್ರಿಯೆ ಪೂರ್ಣಗೊಳ್ಳುವ ಹೊತ್ತಿಗೆ ಅಂದರೆ ಸುಮಾರು 100 ದಿನಗಳ ಕಾಲಾವಧಿಯಲ್ಲಿ ಈ ಬಗ್ಗೆ ಮಹಾನಗರ ಪಾಲಿಕೆಯ ವಸತಿ ಶಾಖೆ ಸಿಬ್ಬಂದಿ ಇದನ್ನು ದೃಢೀಕರಿಸಿ, ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಿದ್ದಾರೆ. ಕೇಂದ್ರ ಸರ್ಕಾರ ನೀಡುವ 1.5 ಲಕ್ಷ ರೂ. ಸಹಾಯಧನ ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಆಗುತ್ತದೆ ಎಂದು ಮೂಲಗಳು ಹೇಳಿವೆ. 
 
    ಪ್ರಸ್ತುತ ಸಾಲಿನ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮುಗಿದಿದೆಯಾದರೂ, ಆಸಕ್ತರು ಇದ್ದರೆ ಈಗಲೂ ಸಹ ಅರ್ಜಿ ಸಲ್ಲಿಸಬಹುದು. ಇಂತಹ ಅರ್ಜಿಗಳನ್ನು ಹಿರಿತನ ಮತ್ತು ಆದ್ಯತೆ ಮೇಲೆ ಮುಂದಿನ ದಿನಗಳಲ್ಲಿ ನೀಡುವ ಗುರಿಗೆ ಅನುಗುಣವಾಗಿ ಪರಿಗಣಿಸಲಾಗುವುದು ಎಂದು ಮೂಲಗಳು ತಿಳಿಸಿವೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link