ಹುಳಿಯಾರು:
ಸುತ್ತಮುತ್ತ ಮಳೆಯಾದರೂ ಹುಳಿಯಾರು ಹೋಬಳಿಯಲ್ಲಿ ಈ ವರ್ಷದ ಪೂರ್ವ ಮುಂಗಾರು ಮಳೆ ಸಂಪೂರ್ಣ ಇಲ್ಲದಾಗಿತ್ತು. ಹುಳಿಯಾರಿನ ಮೇಲೆ ವರುಣ ಅದೇಕೆ ಮುನಿಕೊಂಡಿದ್ದಾನೋ ತಿಳಿಯದೆಂದು ಜನ ಮಾತಾಡಿಕೊಳ್ಳುತ್ತಿದ್ದರು. ವರುಣನ ಮುನಿಸು ಹೀಗೆ ಮುಮದುವರಿದೆ ಕುಡಿಯುವ ನೀರಿಗೆ ಹಾಹಾಕಾರ ನಿಶ್ಚಿತ ಎಂಬ ಆತಂಕ ಕಾಡುತ್ತಿತ್ತು.
ಆದರೆ ತಡವಾಗಿಯಾದರೂ ಭಾನುವಾರ ಸಂಜೆ ವರುಣ ಕೃಪೆ ತೋರಿದ್ದು ಒಂದೇ ದಿನ 43.4 ಮಿಲಿ ಮೀಟರ್ ಮಳೆ ಸುರಿಯುವ ಮೂಲಕ ಇಳೆ ತಂಪು ಮಾಡಿದ್ದಾನೆ. ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ಅನೇಕ ಊರುಗಳಲ್ಲಿ ಸುಮಾರು 45 ನಿಮಿಷಗಳ ಕಾಲ ಗುಡುಗು, ಸಿಡಿಲು, ಆಲಿಕಲ್ಲು ಸಮೇತ ಮಳೆ ಸುರಿಯಿತು.
ಮಧ್ಯಾಹ್ನದಿಂದಲೇ ವಿಪರೀತ ಸೆಕೆಯಿಂದ ಬೇಯುತ್ತಿದ್ದ ಜನತೆಗೆ ಸಂಜೆಯ ಮಳೆ ತಂಪೆರೆಯಿತು. ಮಳೆಯಿಲ್ಲದೆ ಮುಗಿಲತ್ತ ಮುಖ ಮಾಡಿದ್ದ ರೈತನ ಮೊಗದಲ್ಲಿ ರೋಹಿಣಿ ಮಳೆ ಮಂದಹಾಸ ಮೂಡುವಂತೆ ಮಾಡಿದೆ. ಪೂರ್ವ ಮುಂಗಾರು ಕೈಕೊಟ್ಟರೂ ಮುಂಗಾರು ಕೈ ಹಿಡಿದೆ ಹಿಡಿಯುತ್ತದೆಂದು ಭೂಮಿಯಲ್ಲಿ ಇರುವ ಕಸ, ಕಡ್ಡಿ, ಕಳೆಯನ್ನು ಹರಗಿ ಸಿದ್ಧಪಡಿಸಿಕೊಂಡಿದ್ದ ರೈತರಿಗೆ ಬಿತ್ತನೆ ಮಾಡಲು ಸಹಕಾರಿಯಾಗಿದೆ.
ಮಳೆಯನ್ನೇ ನೆಚ್ಚಿ ತೆಂಗು, ಅಡಿಕೆ ಬೆಳೆದಿದ್ದ ರೈತರು ತೋಟ ಒಣಗುವ ಆತಂಕದಲ್ಲಿದ್ದ ಈ ಸಂದರ್ಭದಲ್ಲಿ ಹದ ಮಳೆಯಾಗಿ ತೋಟದಲ್ಲಿ ನೀರು ನಿಂತಿರುವುದು ನೆಮ್ಮದಿಯ ನಿಟ್ಟುಸಿರು ಮೂಡುವಂತೆ ಮಾಡಿದೆ. ಅಲ್ಲದೆ ಸಣ್ಣಪುಟ್ಟ ಕಟ್ಟೆಗಳಲ್ಲಿ ನೀರು ನಿಂತಿರುವುದು ಪ್ರಾಣಿ, ಪಕ್ಷಿಗಳಿಗೆ ಕುರಿಯುವ ನೀರಿನ ಪರದಾಟ ತಪ್ಪಿಸಿದಂತ್ತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
