ಐವರು ಕಳ್ಳರ ಸೆರೆ: 24 ಲಕ್ಷ ಮೌಲ್ಯದ ವಸ್ತು ವಶ

ತುಮಕೂರು
    ಜನರ ಗಮನವನ್ನು ಬೇರೆಡೆ ಸೆಳೆದು ಅವರ ಬಳಿ ಇರುವ ಚಿನ್ನಾಭರಣಗಳನ್ನು ದೋಚುತ್ತಿದ್ದ ಅಪರಾಧವನ್ನು ಭೇದಿಸಿರುವ ತುಮಕೂರು ನಗರದ ಪೊಲೀಸರು, ಈ ಕೃತ್ಯಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸಿದ್ದು, ಅವರುಗಳಿಂದ ಒಟ್ಟು 24,68,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. 
   ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೋನ ವಂಶಿಕೃಷ್ಣ ಅವರು ಬುಧವಾರ ಬೆಳಗ್ಗೆ ತುಮಕೂರು ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. 
   ಇದೇ ಮಾರ್ಚ್ 2 ರಂದು ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಗಮನ ಬೇರೆಡೆ ಸೆಳೆದು ಅವರ ಬಳಿಯಿದ್ದ ಅಸಲಿ ಸರವನ್ನು ಕಸಿದುಕೊಂಡು, ನಕಲಿ ಸರ ನೀಡಿ ಪರಾರಿಯಾಗಿದ್ದ ಘಟನೆ ನಡೆದಿತ್ತು. ಈ ಪ್ರಕರಣದ ಪತ್ತೆಗಾಗಿ ಪೊಲೀಸರ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡವು ಮಾರ್ಚ್ 6 ರಂದು 1)ಮಂಜಪ್ಪ (48 ವರ್ಷ, ಚಿಕ್ಕಬೆನ್ನೂರು, ದಾವಣಗೆರೆ ಜಿಲ್ಲೆ), 2)ಮಾರುತಿ (32 ವರ್ಷ, ಚಿಕ್ಕಬೆನ್ನೂರು, ದಾವಣಗೆರೆ ಜಿಲ್ಲೆ), 3)ಹನುಮಂತ (40 ವರ್ಷ, ಚಿಕ್ಕಬೆನ್ನೂರು, ದಾವಣಗೆರೆ ಜಿಲ್ಲೆ), 4)ಜಯರಾಮ (50 ವರ್ಷ, ಚಿಕ್ಕಬೆನ್ನೂರು, ದಾವಣಗೆರೆ ಜಿಲ್ಲೆ) ಮತ್ತು 5)ಲಕ್ಷ್ಮಮ್ಮ (48 ವರ್ಷ, ಚಿಕ್ಕಬೆನ್ನೂರು, ದಾವಣಗೆರೆ ಜಿಲ್ಲೆ) ಎಂಬುವವರನ್ನು ಬಂಧಿಸಿದರು. ಇವರನ್ನು ವಿಚಾರಣೆ ನಡೆಸಿದಾಗ ತುಮಕೂರು ನಗರ ಠಾಣೆಗೆ ಸಂಬಂಧಿಸಿದ 4 ಪ್ರಕರಣಗಳು, ಮಧುಗಿರಿ ಠಾಣೆಯ 5 ಪ್ರಕರಣಗಳು, ಕ್ಯಾತಸಂದ್ರ ಠಾಣೆಯ 1 ಪ್ರಕರಣ, ತಿಪಟೂರು ಠಾಣೆಯ 1 ಪ್ರಕರಣ, ಕೊರಟಗೆರೆಯ 1 ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದುದು ಬೆಳಕಿಗೆ ಬಂದಿತು. ಇವರುಗಳು ಅಮಾಯಕರನ್ನು ವಂಚಿಸಿ ದೋಚಿದ್ದ ಒಟ್ಟು 592 ಗ್ರಾಂ ಚಿನ್ನಾಭರಣಗಳನ್ನು, ಇವರು ಕೃತ್ಯಕ್ಕೆ ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 24,68,000 ರೂ. ಆಗಲಿದೆ ಎಂದು ಅವರು ಮಾಹಿತಿ ನೀಡಿದರು. 
     ಈ ಅಂತರಜಿಲ್ಲಾ ತಂಡ ಎಸಗುತ್ತಿದ್ದ ಕೃತ್ಯವು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇದೀಗ ಅದು ಬಗೆಹರಿದಂತಾಗಿದೆ. ಇದೊಂದು ಒಳ್ಳೆಯ ಹಾಗೂ ಬಹುದೊಡ್ಡ ಪತ್ತೆ ಕಾರ್ಯವಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ತುಮಕೂರು ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ ಮಾರ್ಗದರ್ಶನದಲ್ಲಿ ನಗರ ಸರ್ಕಲ್ ಇನ್ಸ್‍ಪೆಕ್ಟರ್ ಬಿ.ನವೀನ್,  ನಗರ ಠಾಣೆ ಸಬ್‍ಇನ್ಸ್‍ಪೆಕ್ಟರ್ ವಿಜಯಲಕ್ಷ್ಮೀ, ಹೆಬ್ಬೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಸುಂದರ್, ನಗರ ಠಾಣೆ ಸಿಬ್ಬಂದಿಗಳಾದ ರಮೇಶ್, ನಾಗರಾಜ್, ಜಗದೀಶ್, ಈರಣ್ಣ, ಸೈಯದ್ ಮುಕ್ತಿಯಾರ್, ಮಂಜುನಾಥ, ರಾಮಚಂದ್ರಯ್ಯ, ಪ್ರಸನ್ನಕುಮಾರ್, ನವೀನ್ ಕುಮಾರ್, ಜೈಪ್ರಕಾಶ್, ರಂಗಸ್ವಾಮಿ, ಸಿದ್ದೇಶ್ವರ, ಮಹಮದ್ ರಫಿ, ಹೆಬ್ಬೂರು ಠಾಣೆಯ ಸಿಬ್ಬಂದಿ ರಂಗನಾಥ್, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಶಾಖೆಯ ರಮೇಶ್, ನರಸಿಂಹರಾಜು ಅವರು ಈ ಪ್ರಕರಣದ ಪತ್ತೆಗೆ ಶ್ರಮಿಸಿದ್ದು, ಅಭಿನಂದನೀಯ ಕಾರ್ಯ ಸಲ್ಲಿಸಿದ್ದಾರೆಂದು ಎಸ್ಪಿ ಡಾ.ವಂಶಿಕೃಷ್ಣ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಷಿಷನಲ್ ಎಸ್ಪಿ ಟಿ.ಜೆ.ಉದೇಶ್, ನಗರ ಡಿ.ವೈ.ಎಸ್ಪಿ. ಎಚ್.ಜೆ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap