ಬೆಂಗಳೂರು
ತಮಿಳುನಾಡಿನ ಮಧುರೈ ಮೂಲಕ ಆಸ್ಟ್ರೇಲಿಯಾಕ್ಕೆ ವಿವಾಹ ಆಮಂತ್ರಣ ಪತ್ರಿಕೆಯ ಕಟ್ಟಿನ ಜೊತೆ ಸಾಗಿಸುತ್ತಿದ್ದ 5 ಕೋಟಿಗೂ ಹೆಚ್ಚು ಮೌಲ್ಯದ 5 ಕೆ.ಜಿ. 0.49 ಗ್ರಾಂ ತೂಕದ ಎಫ್ರೀಡಿನ್ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೋರಿಯರ್ ಮೂಲಕ ವಿಮಾನ ನಿಲ್ದಾಣಕ್ಕೆ ಬಂದ 43 ಆಮಂತ್ರಣ ಪತ್ರಿಕೆಯ ಕಟ್ಟನ್ನು ಅನುಮಾನದ ಮೇಲೆ ತಪಾಸಣೆ ನಡೆಸಿದಾಗ ಅದರಲ್ಲಿ ಬಿಳಿ ಪೌಡರ್ ಕಂಡು ಬಂದಿದ್ದು ಹೆಚ್ಚಿನ ಪರಿಶೀಲನೆ ನಡೆಸಿದಾಗ ಅದು ಎಫ್ರೀಡಿನ್ ಮಾದಕ ವಸ್ತು ಎಂದು ಪತ್ತೆಯಾಗಿದ್ದು ಅದರ ಮೌಲ್ಯ 5 ಕೋಟಿಗೂ ಹೆಚ್ಚು ಎಂದು ಕಸ್ಟಂ ವಿಭಾಗದ ಜಂಟಿ ಆಯುಕ್ತ ಎಂ.ಜೆ.ಚೇತನ್ ತಿಳಿಸಿದ್ದಾರೆ.
ಮದುವೆ ಆಮಂತ್ರಣ ಪತ್ರದ ಒಳ ಭಾಗದಲ್ಲಿ ಮಾದಕ ವಸ್ತುಗಳನ್ನು ತುಂಬಿ ಸಾಗಾಟ ಮಾಡಲಾಗುತ್ತಿದ್ದು, ಇದು ಯಾರಿಗೆ ಸೇರಿದ್ದು ಎನ್ನುವುದರ ಬಗ್ಗೆ ತನಿಖೆ ಕೈಗೊಳ್ಳಬೇಕಾಗಿದೆ.ಪ್ರಾಥಮಿಕ ಮೂಲಗಳ ಪ್ರಕಾರ ಚೆನ್ನೈ ಮೂಲದ ರಫ್ತುದಾರರು ಮಧುರೈ ಮೂಲಕ ಆಸ್ಟ್ರೇಲಿಯಾಕ್ಕೆ ಕಳ್ಳ ಸಾಗಾಣೆ ಮೂಲಕ ಮಾದಕ ವಸ್ತುವನ್ನು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ
ವಿಮಾನ ನಿಲ್ದಾಣದ ಏರ್ ಕಾಗ್ರೋ ಕೋರಿಯರ್ ಟರ್ಮಿನಲ್‌ನಲ್ಲಿ ಕೇಂದ್ರೀಯ ವಿಚಕ್ಷಣ ದಳದ ಅಧಿಕಾರಿಗಳು ಅನುಮಾನಗೊಂಡು ನಿನ್ನೆ ತಪಾಸಣೆ ನಡೆಸಿದ ಸಂದರ್ಭದಲ್ಲಿ ಪಾಕೇಟ್‌ಗಳಲ್ಲಿ ತುಂಬಿದ ಮಾದಕ ವಸ್ತು ಪತ್ತೆಯಾಗಿದೆ.43 ವಿವಾಹ ಆಮಂತ್ರಣ ಪತ್ರಿಕೆ ಮತ್ತು ಬಟ್ಟೆಗಳಲ್ಲಿ ಮಾದಕ ವಸ್ತುವನ್ನು ತುಂಬಿ ಕಳ್ಳ ಸಾಗಾಣೆ ಮಾಡಲಾಗುತ್ತಿದ್ದು ಆಹ್ವಾನ ಪತ್ರಿಕೆಯನ್ನು ಹರಿದು ನೋಡಿದಾಗ ಅದರೊಳಗೆ ಮಾದಕ ವಸ್ತುವಿನ ಪಾಕೇಟ್‌ಗಳು ಲಭ್ಯವಾಗಿವೆ ಎಂದೂ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








