ತುಮಕೂರು
ಕೊರೊನಾ ಲಾಕ್‍ಡೌನ್ ಸಮಯದಲ್ಲೂ ತುಮಕೂರು ಮಹಾನಗರ ಪಾಲಿಕೆಗೆ ನಗರದ ಆಸ್ತಿದಾರರು 2020-21 ನೇ ಸಾಲಿನ ಆರ್ಥಿಕ ವರ್ಷದ ಮೊದಲನೇ ತಿಂಗಳಾದ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 5,05,09,871 ರೂ. ತೆರಿಗೆಯನ್ನು ಪಾವತಿ ಮಾಡಿದ್ದಾರೆ.
ಕಳೆದ ವರ್ಷದ ಏಪ್ರಿಲ್ ಮಾಹೆಯಲ್ಲಿ ಪಾವತಿಯಾಗಿದ್ದ ತೆರಿಗೆ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಅದಕ್ಕಿಂತ ಅರ್ಧದಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ.
ಕಳೆದ ವರ್ಷದ ಏಪ್ರಿಲ್ ಮಾಹೆಯಲ್ಲಿ 11 ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಆದರೆ ಈ ಬಾರಿ ಕೊರೊನಾ ಸಂಕಷ್ಟ ಇದ್ದರೂ, ಇದೇ ಏಪ್ರಿಲ್ ಮಾಹೆಯಲ್ಲಿ ಆ ಮೊತ್ತದ ಅರ್ಧದಷ್ಟು (ಶೇ.50) ತೆರಿಗೆ ಸಂಗ್ರಹವಾಗಿದೆಯೆಂಬುದು ವಿಶೇಷವಾಗಿದೆ.
ಪಾಲಿಕೆಗೆ 2020 ರ ಏಪ್ರಿಲ್ ಮಾಹೆಯಲ್ಲಿ ಸಾಮಾನ್ಯ ತೆರಿಗೆ- 5,33,603 ರೂ., ಆಸ್ತಿ ತೆರಿಗೆ- 3,95,85,483 ರೂ., ನೀರಿನ ತೆರಿಗೆ- 84,93,010 ರೂ., ಒಳಚರಂಡಿ ಶುಲ್ಕ- 8,80,040 ರೂ., ಟ್ರೇಡ್ ಲೈಸೆನ್ಸ್ ಶುಲ್ಕ- 10,11,420 ರೂ. ಸಂಗ್ರಹವಾಗಿರುವುದು ಗಮನ ಸೆಳೆಯುತ್ತಿದೆ.
ಶೇ.50 ರಷ್ಟು ಆನ್‍ಲೈನ್‍ನಲ್ಲಿ
ಏಪ್ರಿಲ್ ಒಂದರಲ್ಲೇ ಪಾವತಿ ಆಗಿರುವ ಈ ಪ್ರಮಾಣದ ತೆರಿಗೆ ಮೊತ್ತದಲ್ಲಿ ಶೇ.50 ರಷ್ಟು ಆನ್ ಲೈನ್ ಮೂಲಕವೇ ಎಂಬುದು ಉಲ್ಲೇಖನೀಯವಾಗಿದೆ. ಶೇ.30 ರಷ್ಟು ತೆರಿಗೆಯು ಚೆಕ್ ರೂಪದಲ್ಲಿ ಸಂದಾಯವಾಗಿದ್ದರೆ, ಶೆ.20 ರಷ್ಟು ತೆರಿಗೆಯು ನಗದು ರೂಪದಲ್ಲಿ ಪಾವತಿಯಾಗಿದೆ. ಸಾರ್ವಜನಿಕರು ಯಾವುದೇ ಒತ್ತಡವಿಲ್ಲದೆ ಸ್ವಯಂಪ್ರೇರಣೆಯಿಂದ ತೆರಿಗೆ ಪಾವತಿ ಮಾಡಿದ್ದಾರೆಂಬುದೂ ವಿಶೇಷವಾಗಿದೆ.
ಶೇ.5 ರಷ್ಟು ವಿನಾಯಿತಿ
ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಆಸ್ತಿತೆರಿಗೆ ಪಾವತಿ ಮಾಡುವುದನ್ನು ಉತ್ತೇಜಿಸುವ ಸಲುವಾಗಿ ಪ್ರತಿ ವರ್ಷವೂ ಏಪ್ರಿಲ್ ಮಾಹೆಯಲ್ಲಿ ಆಸ್ತಿತೆರಿಗೆ ಪಾವತಿಸಿದರೆ ಶೇ.5 ರಷ್ಟು ರಿಯಾಯಿತಿ ನೀಡುವ ಪದ್ಧತಿ ಪಾಲಿಕೆಯಲ್ಲಿ ಮೊದಲಿನಿಂದಲೂ ಜಾರಿಯಲ್ಲಿದೆ. ಆದರೆ ಈ ಬಾರಿ ಕೊರೊನಾದಿಂದಾಗಿ ಜನತಾ ಕಫ್ರ್ಯೂ ಜಾರಿಯಲ್ಲಿರುವ ಕಾರಣ, ಆನ್ ಲೈನ್ ಪಾವತಿಗೆ ಉತ್ತೇಜಿಸಲಾಗಿತ್ತು. ಜೊತೆಗೆ ರಿಯಾಯಿತಿ ನೀಡುವ ಕಾಲಾವಧಿಯನ್ನು ಮೇ 31 ರವರೆಗೂ ವಿಸ್ತರಿಸಲಾಗಿದೆ. ಸಾರ್ವಜನಿಕರು ಇವೆರಡೂ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ