ದಾವಣಗೆರೆ:
ಕೇಕ್ ತಯಾರಿಕಾ ಬೇಕರಿಯಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಐವರಿಗೆ ತೀವ್ರ ಸುಟ್ಟ ಗಾಯಗಳಾಗಿರುವ ಘಟನೆ ಇಲ್ಲಿನ ಪಿ.ಜೆ. ಬಡಾವಣೆಯ ಎವಿಕೆ ರಸ್ತೆಯ ಆಹಾರ್ ಕೋಲ್ಡ್ ಕೇಕ್ನಲ್ಲಿ ಶನಿವಾರ ಸಂಭವಿಸಿದೆ.
ನಗರದ ಎವಿಕೆ ರಸ್ತೆಯ ಆಹಾರ್ ಕೇಕ್ ಆಫ್ ದಿ ಡೇ ಬೇಕರಿಯಲ್ಲಿ ಮಧ್ಯಾಹ್ನ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಇಡೀ ಬೇಕರಿಯನ್ನು ಬೆಂಕಿ ಆವರಿಸಿಕೊಂಡ ಪರಿಣಾಮ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ, ಅಫ್ರೋೀಜ್ ಖಾನ್, ಜಯಮ್ಮ, ರೇಖಾ ಹಾಗೂ ನರಸಮ್ಮ ಎಂಬುವರಿಗೆ ಸುಟ್ಟ ಗಾಯಗಳಾಗಿದ್ದು, ಈ ಪೈಕಿ ಓರ್ವ ಮಹಿಳೆ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಬೆಂಕಿ ಅವಘಡದ ಸುದ್ದಿ ತಿಳಿದ ತಕ್ಷಣವೇ ಅಗ್ನಿ ಶಾಮಕ ದಳದ 2 ವಾಹನಗಳ ಸಮೇತ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಬೇಕರಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಒಳಗೆ ಹೋಗಲು, ಬೆಂಕಿ ನಿಯಂತ್ರಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಸಾಕಷ್ಟು ಪರಿಶ್ರಮಪಡಬೇಕಾಯಿತು. ವ್ಯಾಪಕವಾಗಿ ಹೆಚ್ಚುತ್ತಿದ್ದ ಬೆಂಕಿಯ ಕೆನ್ನಾಲಿಗೆಯ ಮಧ್ಯೆ ಒಳಗಿದ್ದ ಐವರನ್ನೂ ರಕ್ಷಿಸಿ, ಹೊರ ತಂದು ಸುಟ್ಟ ಗಾಯಗಳಾಗಿದ್ದ ಐವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.
ಬೆಂಕಿ ಅನಾಹುತಕ್ಕೆ ಏನು ಕಾರಣವೆಂಬುದು ಗೊತ್ತಾಗಿಲ್ಲ. ಬೇಕರಿಯ ಮೊದಲನೇ ಮಹಡಿಯಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದು ವಿದ್ಯುತ್ ಅವಘಡದಿಂದ ಆಗಿದ್ದೋ ಅಥವಾ ಗ್ಯಾಸ್ ಸಿಲಿಂಡರ್ನಿಂದ ವ್ಯಾಪಿಸಿದ ಬೆಂಕಿಯೋ ಎಂಬುದು ತಿಳಿದು ಬಂದಿಲ್ಲ. ಈ ಕುರಿತು ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ