ವಾಣಿ ವಿಲಾಸ ಆಸ್ಪತ್ರೆ: ಗೊಪುರದಲ್ಲಿನ ಕಲಶಗಳನ್ನು ಕದ್ದ ಖದೀಮರು…!

ಬೆಂಗಳೂರು

     ನಗರದ ಸಿಟಿ ಮಾರುಕಟ್ಟೆ ಬಳಿಯ ಐತಿಹಾಸಿಕ ವಾಣಿವಿಲಾಸ ಆಸ್ಪತ್ರೆ ಕಟ್ಟಡದ ಮೇಲಿನ ಗೋಪುರಗಳ ಪಂಚಲೋಹದ ಕಲಶಗಳು ಕಾಣೆಯಾಗಿದ್ದು, ರೈಸ್‌ಪುಲ್ಲಿಂಗ್ ದಂಧೆಗೆ ಕಳ್ಳತನದಲ್ಲಿ ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದೆ.

    ಸುಮಾರು 85 ವರ್ಷಗಳಷ್ಟು ಹಳೆಯ ಆಸ್ಪತ್ರೆ ಕಟ್ಟಡದ ಮೇಲೆ ಒಂದು ದೊಡ್ಡ ಗೋಪುರ ಹಾಗೂ ಐದು ಚಿಕ್ಕಗೋಪುರಗಳಿದ್ದು ,ಹಿಂದಿನ ಕಾಲದಲ್ಲಿ ಕಟ್ಟಡ ನಿರ್ಮಾಣ ಸಾಂಪ್ರದಾಯದಂತೆ ಎಲ್ಲ ಗೋಪುರಗಳ ಮೇಲೆ ಪಂಚಲೋಹದ ಕಳಶಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಆ ಎಲ್ಲ 6 ಗೋಪುರಗಳ ಕಲಶಗಳು ರಾತ್ರೊರಾತ್ರಿ ಕಾಣೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದ್ದು, ಆಸ್ಪತ್ರೆ ಸಿಬ್ಬಂದಿ ಶಾಮೀಲಗಿದ್ದಾರೆ ಎನ್ನುವ ಅನುಮಾನವಿದೆ.

    ದೊಡ್ಡ ಗೋಪುರದ ಮೇಲಿನ ಕಲಶ ಸುಮಾರು 200 ಕೆಜಿಗೂ ಅಧಿಕ ತೂಕವಿತ್ತು ಎಂಬ ಮಾಹಿತಿಯಿದೆ. ಜೊತೆಗೆ ಉಳಿದ 5 ಕಲಶಗಳು ತಲಾ 60 ಕೆಜಿಗೂ ಅಧಿಕ ಭಾರವಿದ್ದವು ಎಂಬ ಮಾಹಿತಿಯಿದೆ. ಕಳೆದ 9 ದಶಕಗಳ ಕಾಲ ಬಿಸಿಲು, ಮಳೆ, ಗಾಳಿ, ಸಿಡಿಲಿಗೆ ಮೈಯೊಡ್ಡಿ ನಿಂತಿದ್ದ ಕಲಶಗಳು ಇದ್ದಕ್ಕಿಂದ್ದಂತೆಯೆ ಕಾಣೆಯಾಗಿವೆ.

     1935ರಲ್ಲಿ ಮಹಿಳೆಯರಿಗಾಗಿಯೆ ಮೈಸೂರಿನ ಮಹಾರಾಜರಾದ ಕೃಷ್ಣರಾಜೇಂದ್ರ ಒಡೆಯರ್ ಅವರು ವಾಣಿವಿಲಾಸ ಹೆರಿಗೆ ಆಸ್ಪತ್ರೆಯನ್ನು ನಿರ್ಮಾಣ ಮಾಡಿಸಿದ್ದರು. ಅಂದಿನಿಂದ ಇವತ್ತಿಗೂ ಹೆರಿಗಾಗಿಯೆ ವಾಣಿವಿಲಾಸ ಆಸ್ಪತ್ರೆ ಹೆಸರುವಾಸಿಯಾಗಿದೆ. ಆದರೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ವಾಣಿವಿಲಾಸ ಆಸ್ಪತ್ರೆಯ ಪಂಚಲೋಹದ ಕಲಶಗಳು ಕಳ್ಳತನ ವಾಗಿರುವುದು ಸ್ಥಳೀಯರಿಂದಲೇ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಸೂಕ್ತತನಿಖೆ ನಡೆದಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.

ಗೋಪುರಗಳಿಂದ ಮಾಯ!

    ಕಟ್ಟಡದ ಗೋಪುರಗಳ ಮೇಲಿನ ಆರು ಕಲಶಗಳು ಪಂಚಲೋಹದ ಕಲಶಗಳು. ಗಾಳಿ, ಮಳೆ, ಬಿಸಿಲು ಹಾಗೂ ಸಿಡಿಲು ಎದುರಿಸಿ ದಶಕಗಟ್ಟಲೆ ಬಯಲಿನಲ್ಲಿ ಇರುವ ಪಂಚಲೋಹಕ್ಕೆ ರೈಸ್‌ಪುಲ್ಲಿಂಗ್ ಎಂಬ ವಿಲಕ್ಷಣ ದಂಧೆಯಲ್ಲಿ ಬೆಲೆ ಕಟ್ಟಲಾಗದ ಬೆಲೆಯಿದೆ. ಹೀಗಾಗಿ ರೈಸ್‌ಪುಲ್ಲಿಂಗ್ ದಂಧೆಯವರಿಗೆ ಆಸ್ಪತ್ರೆ ಸಿಬ್ಬಂದಿ ಶಾಮೀಲಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜೊತೆಗೆ ರೈಸ್‌ಪುಲ್ಲಿಂಗ್ ದಂಧೆಯಲ್ಲಿ ಕಲಶಗಳು ಬಳಕೆಯಾಗಿವೆ ಎಂಬ ಮಾಹಿತಿ ಕೂಡ ಸಿಕ್ಕಿದೆ.

   ಸ್ಥಳೀಯರ ಆರೋಪಕ್ಕೆ ಸ್ಪಂಧಿಸಿರುವ ಪ್ಯೂಚರ್ ಇಂಡಿಯಾ ಆರ್ಗನೇಸೇಷನ್ ತಕ್ಷಣ ಸ್ಥಳೀಯ ವಿ.ವಿ. ಪುರಂ ಪೊಲೀಸರ ಗಮನಕ್ಕೆ ತಂದಿದೆ. ಆದರೆ ಪೊಲೀಸರು ಈ ಬಗ್ಗೆ ಗಮನ ಕೊಟ್ಟಿಲ್ಲ. ಹೀಗಾಗಿ ಎಫ್‌ಐಒ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದೆ.ಇತ್ತೀಚೆಗೆ ನಾವು ವಾಣಿವಿಲಾಸ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಆಸ್ಪತ್ರೆಯ ಮುಖ್ಯ ಗೋಪುರದ ಮೇಲೆ ಅಳವಡಿಸಲಾಗಿದ್ದ ಕಳಶ ತುಂಡಾಗಿರುವುದನ್ನು ಗಮನಿಸಿದೆವು. ಈ ಸಂಬಂಧ ಸದರಿ ಆಸ್ಪತ್ರೇಯ ಸಿಬ್ಬಂದಿಯನ್ನು ವಿಚಾರಿಸಲಾಗಿ, ಕೇವಲ ಮುಖ್ಯ ಗೋಪುರದ ಮೇಲೆ ಮಾತ್ರವಲ್ಲ ಇನ್ನಿತರೆ ಐದು ಗೋಪುರಗಳ ಮೇಲಿದ್ದ ಎಲ್ಲಾ ಕಲಶಗಳನ್ನು ಕೊಂಡೊಯ್ಯಲಾಗಿದೆ ಎಂಬ ಸಂಗತಿ ನಮ್ಮ ಗಮನಕ್ಕೆ ಬಂದಿರುತ್ತದೆ.

ಐವರು ಶಾಮೀಲು

   ಮುಖ್ಯ ಗೋಪುರದ ಮೇಲಿದ್ದ ಕಳಶವು ತುಂಬಾ ಭಾರವಿದ್ದ ಕಾರಣ ರಾತ್ರಿಯಲ್ಲಿ ಅದನ್ನು ಬಿಚ್ಚಲು ಸಾಧ್ಯವಾಗದೆ, ಗ್ಯಾಸ್ ಕಟರ್‌ನಿಂದ ಅದರ ಶಿರವನ್ನು ಕತ್ತರಿಸಿ ಕೊಂಡೊಯ್ಯಲಾಗಿದ್ದು, ಇವೆಲ್ಲಾ ಕಳಶಗಳನ್ನು ರೈಸ್ ಪುಲ್ಲಿಂಗ್ ದಂಧೆಗೆ ಬಳಸಿಕೊಳ್ಳಲಾಗಿದೆ ಎಂಬುದಾಗಿ ನಮಗೆ ತಿಳಿದು ಬಂದಿರುತ್ತದೆ. ತದನಂತರ ಇದರ ಹಿಂದಿರುವವರು ಯಾರು ಎಂದು ಹುಡುಕುತ್ತಾ ಹೋದಾಗ ಆಸ್ಪತ್ರೆಯ 3 ವೈದ್ಯರು ಸೇರಿದಂತೆ ಐವರು ಸಿಬ್ಬಂದಿ ಶಾಮೀಲಾಗಿ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ.

   ಇವರೆಲ್ಲರೂ ಸೇರಿ 2018ರಲ್ಲಿ ರಾತ್ರಿ ಸಮಯದಲ್ಲಿ ಎರಡು ತಿಂಗಳಿಗೆ ಒಂದರಂತೆ, ಕಳಶಗಳನ್ನು ಒಂದೊಂದಾಗಿ ಬಿಚ್ಚಿ, ಯಾರ ಗಮನಕ್ಕೂ ಬಾರದಂತೆ ಅಕ್ರಮವಾಗಿ ರೈಸ್ ಪುಲ್ಲಿಂಗ್ ದಂಧೆಕೋರರಿಗೆ ಸಾಗಿಸಿರುತ್ತಾರೆ. ಬಳಿಕ ಕೆಲ ಸಿಬ್ಬಂದಿಗಳ ಗಮನಕ್ಕೆ ಇದು ಬಂದಾಗ ಅದನ್ನು ಸುರಕ್ಷಿತವಾಗಿ ಕಳಚಿಟ್ಟಿರುವುದಾಗಿ ಆಸ್ಪತ್ರೆಯ  ಹೇಳಿದ ಕಾರಣ ಎಲ್ಲರು ಇರಬಹುದೆಂದು ನಂಬಿ ಸುಮ್ಮನಾಗಿರುತ್ತಾರೆ.

   ಈ ಸಂಬಂಧ ನಮಗೆ ಮಾಹಿತಿ ಸಿಕ್ಕ ಕೂಡಲೆ ಕಳೆದ ಫೆ.24 ರಂದು ಸ್ಥಳೀಯ ವಿ.ವಿ.ಪುರಂ ಪೊಲೀಸ್ ಠಾಣೆಗೆ ಸಿ.ಆರ್.ಪಿ.ಸಿ 154 ಹಾಗು 39ರ ಅಡಿ ಮಾಹಿತಿ ನೀಡಿದ್ದು, ಐ.ಪಿ.ಸಿ ಕಲಂ 409, 120ಬಿ ಹಾಗು 34ರಡಿ ಅಪರಾಧ ನಡೆದಿಯುವುದಾಗಿ ಸ್ಪಷ್ಟ ದೂರನ್ನು ನೀಡಿ, ಶೀಘ್ರವಾಗಿ ವಿಚಾರಣೆ ಆರಂಭಿಸಿ, ಪುರಾತನ ಕಳಶಗಳನ್ನು ಪತ್ತೆಹಚ್ಚುವಂತೆ ಕೋರಿಕೊಂಡಿರುತ್ತೇವೆ.

   ಆದರೆ ನಮ್ಮ ದೂರನ್ನು ಸ್ವೀಕರಿಸಿದ ಪೊಲೀಸರು ಎಫ್.ಐ. ಆರ್ ಧಾಕಲಿಸಲು ಮೀನಾಮೇಶ ಎಣಿಸುತ್ತಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಹೇಳಿ ದಿನಗಳನ್ನು ಮುಂದೂಡುತ್ತಿದ್ದಾರೆ. ಈ ವಿಷಯವನ್ನು ನಾವು ಧಕ್ಷಿಣ ವಿಭಾಗದ ಡಿಸಿಪಿ ನಗರ ನಗರ ಪೊಲೀಸ್ ಆಯುಕ್ತರು, ಮುಖ್ಯ ಕಾರ್ಯದರ್ಶಿಗಳು, ಗೃಹನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಾಗು ಪ್ರಾದೇಶಿಕ ಆಯುಕ್ತರ ಗಮನಕ್ಕೆ ತಂದಿರುತ್ತೇವೆ ಎಂದು ಪ್ಯೂಚರ್ ಇಂಡಿಯಾ ಆರ್ಗನೇಸೇಷನ್ ಹೇಳಿದೆ. ಆದರೂ ಕೂಡ ಸೂಕ್ತ ತನಿಖೆ ಈ ವರೆಗೆ ನಡೆದಿಲ್ಲ ಎಂದು ಸಂಘಟನೆ ಆರೋಪಿಸಿದೆ.

ಏನಿದು ರೈಸ್‌ಪುಲ್ಲಿಂಗ್

   ತಾಮ್ರ, ಹಿತ್ತಾಳೆ, ಪಂಚಲೋಹದ ತಟ್ಟೆಯಲ್ಲಿ ಅಕ್ಕಿಕಾಳುಗಳನ್ನು ಹಾಕಿ, ಅದೇ ಲೋಹದ ಚೊಂಬಿನಿಂದ ಅಕ್ಕಿಕಾಳುಗಳನ್ನು ಆಕರ್ಷಿಸಿ ನಂತರ ತಟ್ಟೆ ಮತ್ತು ಚೊಂಬನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುವ ತಂತ್ರ. ಈ ತಟ್ಟೆ ಮತ್ತು ಚೊಂಬನ್ನು ತಯಾರಿಸುವ ಲೋಹ ನೂರಾರು ವರ್ಷಗಟ್ಟಲೆ ಬಿಸಿಲು, ಗಾಳಿ, ಮಳೆ, ಸಿಡಿಲು ಬಡಿದಿರಬೇಕು. ಅಂತಹ ಲೋಹದಿಂದ ಮಾಡಿದ ಈ ತಟ್ಟೆ ಮತ್ತು ಚೊಂಬು ಮನೆಯಲ್ಲಿದ್ದರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಬರುತ್ತದೆ ಎಂದು ನಂಬಿಸಿ ವಂಚಿಸಲಾಗುತ್ತದೆ.

   ಚಾಮರಾಜನಗರ, ಕೋಲಾರ, ಮಂಡ್ಯ ಸೇರಿದಂತೆ ಹಳೆಮೈಸೂರು ಭಾಗದಲ್ಲಿ ಈ ವಿಲಕ್ಷಣ ದಂಧೆ ರೂಢಿಯಲ್ಲಿದೆ. ಇದೀಗ ವಾಣಿವಿಲಾಸ ಆಸ್ಪತ್ರಯೆ ಪ್ರಜ್ಞಾವಂತ ವೈದ್ಯರೂ ಈ ವಿಲಕ್ಷಣ ದಂಧೆಯ ಬೆಲೆಗೆ ಬಿದ್ದಿದ್ದಾರೊ ಇಲ್ಲವೊ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap