ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ.5ರಷ್ಟು ಹೆಚ್ಚಳ

ಚಿತ್ರದುರ್ಗ :

     ಮತದಾರರಲ್ಲಿ ಜಾಗೃತಿ ಮೂಡಿಸಿ, ಅವರನ್ನು ಮತಗಟ್ಟೆಯತ್ತ ಹೆಜ್ಜೆ ಹಾಕುವಂತೆ ಮಾಡುವಲ್ಲಿ ಸ್ವೀಪ್ ಕಾರ್ಯಕ್ರಮ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಉತ್ತಮ 70. 73 ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಸರಿ ಸುಮಾರು ಶೇ. 05 ರಷ್ಟು ಏರಿಕೆ ದಾಖಲಾಗಿದೆ. 2014 ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ. 66 ರಷ್ಟು ಮತದಾನವಾಗಿತ್ತು.

       ಮತದಾರರನ್ನು ಜಾಗೃತಗೊಳಿಸಿ, ಮತದಾನಕ್ಕೆ ಅವರನ್ನು ಪ್ರೇರೇಪಿಸುವಂತೆ ಮಾಡಲು ಚುನಾವಣಾ ಆಯೋಗ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ (ಸ್ವೀಪ್) ಕಾರ್ಯಕ್ರಮವನ್ನು ರೂಪಿಸಿ, ಎಲ್ಲ ಜಿಲ್ಲೆಗಳಲ್ಲಿ ಜಾರಿಗೊಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರವಾರು ಮತದಾನ ಪ್ರಮಾಣ ಗಮನಿಸಿದಾಗ, ಉತ್ತಮ ಮತದಾನ ದಾಖಲಾಗಿರುವುದು ಕಂಡುಬಂದಿದೆ.

        ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತದಾನ ಪ್ರಮಾಣ ದಾಖಲಾದ ಪ್ರದೇಶಗಳಲ್ಲಿ ಸ್ವೀಪ್ ಕಾರ್ಯಕ್ರಮವನ್ನು ವ್ಯಾಪಕವಾಗಿ ಏರ್ಪಡಿಸಲು ಒತ್ತು ನೀಡಲಾಗಿತ್ತು. ಈ ಆದ್ಯತೆ ಉತ್ತಮ ಪರಿಣಾಮ ಬೀರಿದ್ದು, ಕಳೆದ ಬಾರಿಯ ಪ್ರಮಾಣಕ್ಕೆ ಹೋಲಿಸಿದಲ್ಲಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನದ ಪ್ರಮಾಣದಲ್ಲಿ ಏರಿಕೆಯಾಗಿದೆ.

        ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚಿನ ಮತದಾನ ಶೇ. 74. 17 ರಷ್ಟು ಸಿರಾ ಕ್ಷೇತ್ರದಲ್ಲಿ ದಾಖಲಾಗಿದ್ದರೆ, ಅತಿ ಕಡಿಮೆ ಪಾವಗಡ ಕ್ಷೇತ್ರದಲ್ಲಿ ಶೇ. 64.66 ರಷ್ಟು ಮತದಾನ ದಾಖಲಾಗಿದೆ. ಕಳೆದ ಚುನಾವಣೆಗೆ ಹೋಲಿಸಿದಾಗ, ಈ ಬಾರಿ ಹಿರಿಯೂರು ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ. 8 ರಷ್ಟು ಮತದಾನ ಏರಿಕೆಯಾಗಿದ್ದರೆ, ಪಾವಗಡ ಕ್ಷೇತ್ರದಲ್ಲಿ ಕೇವಲ ಶೇ. 1 ರಷ್ಟು ಮಾತ್ರ ಮತದಾನ ಪ್ರಮಾಣ ಹೆಚ್ಚಳವಾಗಿದೆ.

       ಮೊಳಕಾಲ್ಮೂರು ಕ್ಷೇತ್ರದಲ್ಲಿ ಈ ಬಾರಿ ಶೇ. 72.88 ರಷ್ಟು ಮತದಾನವಾಗಿದ್ದು ಕಳೆದ ಬಾರಿ ಶೇ. 65.45 ರಷ್ಟು ಮತದಾನವಾಗಿತ್ತು. ಇಲ್ಲಿ ಸುಮಾರು ಶೇ. 7 ರಷ್ಟು ಏರಿಕೆಯಾಗಿದೆ. ಚಳ್ಳಕೆರೆ ಕ್ಷೇತ್ರದಲ್ಲಿ ಶೇ. 72.22 ರಷ್ಟು ಮತದಾನವಾಗಿದ್ದು, 2014 ರಲ್ಲಿ ಶೇ. 67.94 ಮತದಾನವಾಗಿತ್ತು. ಇಲ್ಲಿ ಸುಮಾರು ಶೇ. 5 ರಷ್ಟು ಏರಿಕೆಯಾಗಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಈ ಬಾರಿ ಶೇ. 68.18 ಮತದಾನವಾಗಿದ್ದು, ಕಳೆದ ಚುನಾವಣೆಯಲ್ಲಿ ಶೇ. 64.31 ಮತದಾನವಾಗಿತ್ತು. ಇದರಿಂದಾಗಿ ಇಲ್ಲಿ ಶೇ. 04 ರಷ್ಟು ಮತದಾನ ಹೆಚ್ಚಳವಾಗಿದೆ.

       ಹಿರಿಯೂರು ಕ್ಷೇತ್ರದಲ್ಲಿ ಶೇ. 68.32ರಷ್ಟು ಮತದಾನವಾಗಿದ್ದು, ಈ ಹಿಂದೆ 60. 62 ರಷ್ಟಾಗಿತ್ತು. ಇಲ್ಲಿ ಶೇ. 8 ರಷ್ಟು ಏರಿಕೆಯಾಗಿದ್ದರೂ, ಕ್ಷೇತ್ರದ ಸರಾಸರಿ ಪ್ರಮಾಣಕ್ಕೆ ಹೋಲಿಸಿದಾಗ ಇನ್ನೂ ಹೆಚ್ಚಾಗಬೇಕಿತ್ತು. ಹೊಸದುರ್ಗ ಕ್ಷೇತ್ರದಲ್ಲಿ ಈ ಬಾರಿ ಶೇ. 72.94 ರಷ್ಟು ಮತದಾನವಾಗಿದ್ದು, ಕಳೆದ ಬಾರಿ ಶೇ. 69.37 ಮತದಾನವಾಗಿತ್ತು. ಇದರಿಂದಾಗಿ ಇಲ್ಲಿ ಶೇ. 3 ರಷ್ಟು ಹೆಚ್ಚಳವಾಗಿದೆ.
ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಬಾರಿ 72.71 ರಷ್ಟು ಮತದಾನವಾಗಿದ್ದು, ಈ ಹಿಂದೆ ಶೇ. 69.88 ಮತದಾನ ನಡೆದಿತ್ತು. ಇಲ್ಲಿ ಶೇ. 3 ರಷ್ಟು ಏರಿಕೆಯಾಗಿದೆ.

        ತುಮಕೂರು ಜಿಲ್ಲೆ ಸಿರಾ ಕ್ಷೇತ್ರದಲ್ಲಿ ಈ ಬಾರಿ ಶೇ. 74.17 ರಷ್ಟು ಮತದಾನ ನಡೆದಿದ್ದು, ಕಳೆದ ಬಾರಿ 68.79 ರಷ್ಟು ಮತದಾನವಾಗಿತ್ತು. ಇಲ್ಲಿ ಶೇ. 6 ರಷ್ಟು ಮತದಾನ ಹೆಚ್ಚಳವಾಗಿದೆ. ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಶೇ. 64.66 ರಷ್ಟು ಮತದಾನವಾಗಿದ್ದು, 2014 ರಲ್ಲಿ ಶೇ. 63.22 ಮತದಾನ ದಾಖಲಾಗಿತ್ತು. ಇಲ್ಲಿ ಕೇವಲ ಶೇ. 01 ರಷ್ಟು ಪ್ರಮಾಣದ ಮತದಾನ ಹೆಚ್ಚಳವಾಗಿದೆ.

         ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು, ಚುನಾವಣಾ ಆಯೋಗದ ಸೂಚನೆಯಂತೆ ಮತದಾರರನ್ನು ಜಾಗೃತಗೊಳಿಸಲು ಜಿಲ್ಲಾ ಕೇಂದ್ರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮ ರೂಪಿಸಿದ್ದರಿಂದ ಮತದಾನದಲ್ಲಿ ಹೆಚ್ಚಳ ಕಂಡು ಬಂದಿದೆ ಎಂದು ಹೇಳಿದ್ದಾರೆ

        ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಕ್ಯಾಂಡಲ್ ಲೈಟ್ ಜಾಥಾ, ಜಾಗೃತಿ ಜಾಥಾ, ಕ್ರೀಡಾಕೂಟ, ಮತದಾನದ ಪ್ರತಿಜ್ಞಾ ವಿಧಿ ಬೋಧನೆ, ನೈತಿಕ ಮತದಾನಕ್ಕೆ ಪ್ರೇರೇಪಣೆ ರಂಗೋಲಿ ಪ್ರದರ್ಶನ, ಸೈಕಲ್ ರ್ಯಾಲಿ, ಬೈಕ್ ರ್ಯಾಲಿ, ವಿಕಲಚೇತನರಿಂದಲೂ ತ್ರಿಚಕ್ರ ವಾಹನ ರ್ಯಾಲಿ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಂದು ರೀತಿ ನೋಡುವುದಾದರೆ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಿಂತಲೂ ಸ್ವೀಪ್ ಕಾರ್ಯಕ್ರಮಗಳ ಮತದಾರರ ಜಾಗೃತಿ ಪ್ರಚಾರ ಭರಾಟೆಯೇ ಜಿಲ್ಲೆಯಲ್ಲಿ ಜೋರಾಗಿತ್ತು.

         ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಕೈಗೊಂಡ ಮತ ಜಾಗೃತಿ ಕಾರ್ಯಕ್ರಮಗಳು ನಿಜಕ್ಕೂ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿತ್ತು. ವಾರ್ತಾ ಇಲಾಖೆಯಿಂದ ಚಿತ್ರದುರ್ಗ ಬಸ್‍ನಿಲ್ದಾಣದಲ್ಲಿ ಏರ್ಪಡಿಸಿದ ಮೂರು ದಿನಗಳ ಮತ ಜಾಗೃತಿಯ ವಿಶೇಷ ವಸ್ತುಪ್ರದರ್ಶನವಂತೂ ಮತದಾರರಲ್ಲಿ ಜಾಗೃತಿ ಮೂಡಿಸುವಲ್ಲಿ ಉತ್ತಮ ಪರಿಣಾಮ ಬೀರಿತು,

          ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಮತದಾನವಾಗುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ನಿರೀಕ್ಷಿತ ಮಟ್ಟದ ಗುರಿ ತಲುಪಲು ಸಾಧ್ಯವಾಗದೇ ಇದ್ದರೂ, ಸಮಾಧಾನದ ಸಂಗತಿಯೆಂದರೆ, ಗ್ರಾಮೀಣ ಮತ್ತು ನಗರ ಪ್ರದೇಶದ ಮತದಾರರು ಅದರಲ್ಲೂ ಮಹಿಳೆಯರು ಹಾಗೂ ವಿಕಲಚೇತನರು ಹಿಂದೆಂದಿಗಿಂತಲೂ ಉತ್ಸಾಹದಿಂದ ಅತಿ ಹೆಚ್ಚು ಮತದಾನ ಮಾಡುವ ಮೂಲಕ ತಮ್ಮ ಸಾಮಥ್ರ್ಯವನ್ನು ಸಾಬೀತು ಮಾಡಿದ್ದಾರೆ.

          ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಎಲ್ಲ ಮತದಾರರೂ ಸಂವಿಧಾನಾತ್ಮಕ ಹಕ್ಕನ್ನು ತಪ್ಪದೆ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಗಟ್ಟಿಗೊಳ್ಳಲು ಸಾಧ್ಯ. ಒಟ್ಟಾರೆಯಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಶೇಕಡಾವಾರು ಮತದಾನಕ್ಕೆ ಹೋಲಿಸಿದಾಗ, ಸ್ವೀಪ್ ಕಾರ್ಯಕ್ರಮಗಳ ಪರಿಣಾಮವಾಗಿ ಈ ಬಾರಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link