ತುಮಕೂರು
ಎಲ್ಲಾ ಗ್ರಾಮಗಳು ಬಯಲು ಶೌಚ ಮುಕ್ತವಾಗಬೇಕು, ಕಸ ಮುಕ್ತವಾಗಬೇಕು, ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಬೇಕು. ಆಯಾ ಗ್ರಾಮಗಳು ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಹೊಂದಿರಬೇಕು ಆ ಮೂಲಕ ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಬೇಕು ಎಂಬುದು ಸ್ವಚ್ಚ ಭಾರತ್ ಅಭಿಯಾನದ ಆಶಯ.
ಇದೇ ಕಾರಣಕ್ಕಾಗಿ 2014ರ ಅಕ್ಟೋಬರ್ 2ರಂದು ಭಾರತ ಸರ್ಕಾರ ಘೋಷಿಸಿದ ಸ್ವಚ್ಚ ಭಾರತ್ ಅಭಿಯಾನದಡಿಯಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಕೂಡಾ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು ಈ ಸಂಬಂಧದ ಪ್ರಯತ್ನಗಳು ಆರಂಭವಾಗಿವೆ.
ತುಮಕೂರು ಜಿಲ್ಲೆಯ ಎಲ್ಲಾ 330 ಗ್ರಾಮ ಪಂಚಾಯ್ತಿಗಳಲ್ಲೂ ಘನ ತ್ಯಾಜ್ಯ ವಿಲೇವಾರಿ ಘಟಕಗಳು ಸ್ಥಾಪನೆ ಆಗಬೇಕಾಗಿದೆ. ಜಿಲ್ಲಾ ಪಂಚಾಯ್ತಿ ಹಾಗೂ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಮೊದಲ ಹಂತದಲ್ಲಿ 2019-20ನೇ ಸಾಲಿಗೆ 50 ಗ್ರಾಮ ಪಂಚಾಯ್ತಿಗಳನ್ನು ಘನ ತ್ಯಾಜ್ಯ ನಿರ್ವಹಣೆಗೆ ಆಯ್ಕೆ ಮಾಡಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸುವ ಚಟುವಟಿಕೆಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಈ ತಿಂಗಳ 6ರಂದು ಅಧಿಕೃತ ಚಾಲನೆ ನೀಡಿದರು.
ಆಯ್ಕೆ ಮಾಡಿರುವ 50 ಗ್ರಾಮ ಪಂಚಾಯ್ತಿಗಳ ಪೈಕಿ 43 ಗ್ರಾಪಂಗಳಿಗೆ ಘಟಕಗಳ ಸ್ಥಾಪನೆಗೆ ಜಮೀನು ಮಂಜೂರಾಗಿದ್ದು, 20 ಗ್ರಾಪಂಗಳಲ್ಲಿ ಕಸ ಸಂಗ್ರಹಣಾ ವಾಹನಗಳನ್ನು ಖರೀದಿಸಲಾಗಿದೆ. 16 ಗ್ರಾಪಂಗಳಲ್ಲಿ ಪ್ರತಿ ಮನೆಗೆ ಎರಡರಂತೆ ಕಸದ ಬುಟ್ಟಿಗಳನ್ನು ವಿತರಿಸಲಾಗಿದ್ದು, ಕಸ ಸಂಗ್ರಹಣೆ, ವಿಂಗಡಣೆ ಹಾಗೂ ವಿಲೇವಾರಿ ಕಾರ್ಯ ಆರಂಭವಾಗಿದೆ ಎಂದು ಈ ಯೋಜನೆಯ ನೋಡಲ್ ಅಧಿಕಾರಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಯೋಜನಾಧಿಕಾರಿ ಬಸವೇಗೌಡ ಹೇಳಿದರು.
ಈ 50 ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರಿಗೆ ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ತ್ಯಾಜ್ಯ ಘಟಕ ಸ್ಥಾಪಿಸುವ ಅರಿವು ಮೂಡಿಸುವ ಕಾರ್ಯಾಗಾರ ಆಯೋಜಿಸಲಾಗಿತ್ತು. ಸ್ವಚ್ಛತೆಯೇ ಸಮೃದ್ಧಿ ವೇದಿಕೆ ಮೂಲಕ ಸಂಬಂಧಿಸಿದ 50 ಗ್ರಾಮ ಪಂಚಾಯ್ತಿಗಳಲ್ಲಿ ಕಸ ಸಂಗ್ರಹಣೆ ಮತ್ತು ವಿಂಗಡಣೆ ಕುರಿತು ಹಲವು ರೀತಿಯ ಜಾಗೃತಿ ಕಾರ್ಯಕ್ರಮ, ಜಾಥಾ, ಸಭೆಗಳನ್ನು ಆಯೋಜಿಸಲಾಗಿತ್ತು.
ಅಲ್ಲದೆ ಆಯಾ ಗ್ರಾಮ ಪಂಚಾಯ್ತಿ ಹಂತದಲ್ಲೇ ಗ್ರಾಪಂ ಸದಸ್ಯರು, ಸಿಬ್ಬಂದಿ, ಆಶಾ. ಅಂಗನವಾಡಿ, ಎಎನ್‍ಎಂ, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಸ್ವಯಂ ಸೇವಕರುಗಳಿಗೆ ಘನ ತ್ಯಾಜ್ಯ ಕುರುತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಯೋಜನೆಯ ಅಧಿಕಾರಿ ಗಾಯತ್ರಿ ಹೇಳಿದರು.
ಗ್ರಾಪಂಗಳಲ್ಲಿ ಘನ ತ್ಯಾಜ್ಯ ಘಟಕಗಳನ್ನು ಪ್ರಾರಂಭಿಸುವ ಪ್ರಕ್ರಿಯೆ ಆರಂಭವಾಗಿದ್ದು, ಕ್ರಿಯಾ ಯೋಜನೆ ಅನುಮೋದನೆಗೊಂಡ ಎಲ್ಲಾ 37 ಗ್ರಾಪಂಗಳಲ್ಲಿ ಕಸ ಸಂಗ್ರಹಿಸಿ ತಾತ್ಕಾಲಿಕವಾಗಿ ಹಳೆ ಕಟ್ಟಡಗಳನ್ನು ಗುರುತಿಸಿ ಸಂಗ್ರಹಿಸಿದ ಕಸವನ್ನು ವಿಂಗಡಣೆ ಮಾಡಿ, ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದರು. ಉಳಿದ ಗ್ರಾಪಂಗಳ ಕ್ರಿಯಾ ಯೋಜನೆಯ ತಯಾರಿಕೆ, ಅನುಮೋದನೆಗೆ ಸಿದ್ಧವಾಗಿರುವ ಹಂತಗಳಲ್ಲಿವೆ.
ಉಳಿದ 280 ಗ್ರಾಪಂಗಳಲ್ಲೂ ಘನ ತ್ಯಾಜ್ಯ ವಿಲೇವಾರಿಗಾಗಿ ಪ್ರತಿ ಗ್ರಾಮ ಪಂಚಾಯ್ತಿಯನ್ನು ಘಟಕವನ್ನಾಗಿ ಪರಿಗಣಿಸಿ ಅಥವಾ ಸಾಧ್ಯವಿರುವ ಕಡೆ 2-3 ಗ್ರಾಪಂಗಳಿಗೆ ಒಂದರಂತೆ ಕ್ಲಸ್ಟರ್ ಮಾದರಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಕ್ಲಸ್ಟರ್ ಮಾದರಿಯಲ್ಲಿ ಪ್ರಾರಂಭಿಸಬೇಕಾದಲ್ಲಿ ಪಾಲ್ಗೊಳ್ಳುವ ಗ್ರಾಪಂಗಳ ಸಹಭಾಗಿತ್ವ ಹಾಗೂ ಸಂಯೋಜನೆ ಆಯಾಯ ಗ್ರಾಪಂಗಳ ಆಡಳಿತ ವ್ಯವಸ್ಥೆಯ ಒಮ್ಮತದ ತೀರ್ಮಾನ ಅಗತ್ಯತೆ ಇರುವುದರಿಂದ ಗ್ರಾಪಂಗಳ ಹಂತದಲ್ಲಿ ಸಮಾಲೋಚನೆಯನ್ನು ಆಯಾಯ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳ ಹಂತದಲ್ಲಿ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಗ್ರಾಪಂಗಳಿಗೆ ಪ್ರತಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ 20 ಲಕ್ಷ ರೂ. ನೆರವು ನೀಡಲಾಗುತ್ತದೆ. ಇದರಲ್ಲಿ ಕಸ ಸಂಗ್ರಹಣೆಯ ವಾಹನ, ಕಸದ ಬುಟ್ಟಿ, ಮತ್ತಿತರ ಪರಿಕರ ಖರೀದಿ ಮಾಬಹುದು. ಜೊತೆಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಣೆಗೆ ಶೆಡ್ ನಿರ್ಮಾಣ ಮಾಡಿಕೊಳ್ಳಬೇಕು, ಹಣದ ಕೊರತೆಯಾದರೆ ಗ್ರಾಪಂಗಳೇ ಭರಿಸಬೇಕಾಗುತ್ತದೆ. ತ್ಯಾಜ್ಯ ಘಟಕ ಸ್ಥಾಪನೆಗೆ ಕನಿಷ್ಟ 10 ಗುಂಟೆಯಿಂದ ಒಂದು ಎಕರೆವರೆಗೆ ಜಾಗದ ಅಗತ್ಯವಿದೆ. ಗ್ರಾಪಂ ವ್ಯಾಪ್ತಿಯ ಗ್ರಾಮಠಾಣಾ ಜಾಗ ಬಳಸಿಕೊಳ್ಳಬಹುದು, ಇಲ್ಲವೆ, ಆ ವ್ಯಾಪ್ತಿಯಲ್ಲಿ ಕಂದಾಯ ಜಾಗವಿದ್ದರೆ ತ್ಯಾಜ್ಯ ಘಟಕಕ್ಕೆ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ.
ಗ್ರಾಮ ಪಂಚಾಯ್ತಿಗಳು ತಮ್ಮ ಇಬ್ಬರು ಕಾರ್ಮಿಕರಿಗೆ ತರಬೇತಿ ನೀಡಿ ಅವರನ್ನು ಕಸ ಸಂಗ್ರಹಣೆ, ವಿಂಗಡಣೆಗೆ ನಿಯೋಜಿಸಿ ಕೊಳ್ಳಬೇಕು. ಪ್ರತಿ ಮನೆಯಿಂದ ಕಸ ಸಂಗ್ರಹಿಸಬೇಕು. ಹಸಿ ಕಸವನ್ನು ಕಾಂಪೋಸ್ಟ್ ಗೊಬ್ಬರವಾಗಿ ಮನೆಯಲ್ಲೇ ಮಾರ್ಪಡಿಸುವ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಕಾಂಪೋಸ್ಟ್ ಗೊಬ್ಬರಕ್ಕೆ ಬೇಡಿಕೆ ಇರುವುದರಿಂದ ಮನೆಯಯವರು ಗೊಬ್ಬರವನ್ನು ಲಾಭದ ವ್ಯವಹಾರವಾಗಿ ಮಾಡಿಕೊಳ್ಳಬಹುದು. ಗ್ರಾಪಂನಿಂದ ಪ್ಲಾಸ್ಟಿಕ್, ಪೇಪರ್, ಗಾಜಿನ ಬಾಟೆಲ್‍ಗಳನ್ನು ಸಂಗ್ರಹಿಸಬೇಕು. ಸಂಗ್ರಹಿಸಿದ ತ್ಯಾಜ್ಯವನ್ನು ಶೇಡ್‍ನಲ್ಲಿ ವಿಂಗಡಿಸಿ ಸಂಗ್ರಹಿಸಬೇಕು. ಸಂಗ್ರಹಣೆ ಹೆಚ್ಚಾದಾಗ ಗ್ರಾಪಂಗಳು ಗುಜರಿಯವರಿಗೆ ಹರಾಜಿನಲ್ಲಿ ಮಾರಬೇಕು ಎಂದು ತಿಳುವಳಿಕೆ ನೀಡಲಾಗಿದೆ. ಸಂಸ್ಕರಣೆಗೆ ವ್ಯವಸ್ಥೆ ಮಾಡಿಲ್ಲದ ಕಾರಣ ಸದ್ಯಕ್ಕೆ ಹಸಿ ಕಸ, ಮೆಡಿಕಲ್ ವೇಸ್ಟ್ ಸಂಗ್ರಹಿಸಬಾರದು ಎಂಬ ಸೂಚನೆ ನೀಡಲಾಗಿದೆ.
ಇದುವರೆಗೂ ಗ್ರಾಮ ಪಂಚಾಯ್ತಿಗಳಲ್ಲಿ ವ್ಯವಸ್ಥಿತವಾದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇಲ್ಲ. ಕಸವನ್ನು ಊರಿನ ತಿಪ್ಪೆ, ಖಾಲಿ ಜಾಗ, ರಸ್ತೆ ಬದಿ ಸುರಿಯಲಾಗುತ್ತದೆ. ಹೆಚ್ಚಿನ ಕಡೆ ಊರು ಪ್ರವೇಶಿಸಿದಾಗ ತಿಪ್ಪೆ, ರಸ್ತೆ ಬದಿಯ ಕಸದ ರಾಶಿಯ ದರ್ಶನವಾಗುತ್ತದೆ. ಕಸ ಕೊಳೆತು ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುತ್ತದೆ. ಹೀಗಾಗಿ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ನಡೆದರೆ ಗ್ರಾಮಗಳ ನೈರ್ಮಕ್ಕೆ, ಆರೋಗ್ಯ ಕಾಪಾಡಲು ಸಹಾಯಕವಾಗುತ್ತದೆ.
ಹಲವಾರು ಗ್ರಾಮ ಪಂಚಾಯ್ತಿಗಳು ತ್ಯಾಜ್ಯ ವಿಲೇವಾರಿ ಚಟುವಟಿಕೆಯನ್ನು ಉತ್ಸಾಹದಿಂದ ಮಾಡುತ್ತಿವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿವೆ. ತ್ಯಾಜ್ಯ ಸಂಗ್ರಹಿಸಿ ಗ್ರಾಮದ ಅನುಪಯುಕ್ತ ಕಟ್ಟಡದಲ್ಲಿ ವಿಂಗಡಿಸಿ ಸಂಗ್ರಹಿಸುತ್ತಿವೆ. ತುಮಕೂರು ತಾಲ್ಲೂಕಿನ ಕೆ. ಪಾಲಸಂದ್ರ, ತುರುವೇಕೆರೆ ತಾ.ನ ಮಾಯಸಂದ್ರ,, ತಿಪಟೂರು ತಾ.ನ ಬಿಳಿಗೆರೆ, ಶಿರಾ ತಾ.ನ ಬುಕ್ಕಾಪಟ್ಟಣ, ನಾದೂರು, ಪಾವಗಡ ತಾ. ಕೆ.ಟಿ.ಹಳ್ಳಿ ಮತ್ತಿತರ ಗ್ರಾಪಂಗಳು ಪರಿಣಾಮಕಾರಿಯಾಗಿ ತ್ಯಾಜ್ಯ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
