ಬೆಂಗಳೂರು
ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿಯ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕಾರ್ಯಕ್ಕಾಗಿ ರಾಜ್ಯ ಸರ್ಕಾರ ಇಂದು 500 ಕೋಟಿ ರೂ ಬಿಡುಗಡೆ ಮಾಡಿದೆ.ವಿಧಾನಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಈ ವಿಷಯ ತಿಳಿಸಿದರಲ್ಲದೆ,ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ತಲಾ ಎಂಟರಿಂದ 10 ಕೋಟಿ ರೂಪಾಯಿಗಳಿವೆ.ಆದರೆ ಇದು ಸಾಲದು ಎಂದು ವಿವರಿಸಿದರು.
ಇದೇ ಕಾರಣಕ್ಕಾಗಿ ಇಂದು 500 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು ಈ ಹಿಂದೆ ಬಿಡುಗಡೆ ಮಾಡಿದ 400 ಕೋಟಿ ರೂಗಳೂ ಸೇರಿದಂತೆ ಪ್ರವಾಹಪೀಡಿತ ಪ್ರದೇಶಗಳ ಜನರಿಗೆ ಸ್ಪಂದಿಸಲು ರಾಜ್ಯ ಸರ್ಕಾರ ಒಟ್ಟು 900 ರೂಪಾಯಿ ಬಿಡುಗಡೆ ಮಾಡಿದೆ ಎಂದು ಹೇಳಿದರು.
ಇಂದು ಬಿಡುಗಡೆ ಮಾಡಿದ ಹಣದ ಪೈಕಿ ಮೈಸೂರು ಜಿಲ್ಲೆಗೆ 30 ಕೋಟಿ ರೂಪಾಯಿ,ಕೊಡಗು ಜಿಲ್ಲೆಗೆ 10 ಕೋಟಿ ರೂಪಾಯಿ,ಬೆಳಗಾವಿ ಜಿಲ್ಲೆಗೆ 200 ಕೋಟಿ ರೂಪಾಯಿ,ಬಾಗಲಕೋಟೆ ಜಿಲ್ಲೆಗೆ 50 ಕೋಟಿ ರೂಪಾಯಿಗಳನ್ನು ಒದಗಿಸಲಾಗಿದೆ ಎಂದರು.
ಈ ಹಣ ತುರ್ತು ಪರಿಹಾರ ಕಾರ್ಯಗಳಿಗೆ ಎಂದು ಸ್ಪಷ್ಟ ಪಡಿಸಿದ ಅವರು ಕೇಂದ್ರ ಸರ್ಕಾರ ಇನ್ನೊಂದು ವಾರದಲ್ಲಿ ನೆರವು ನೀಡುವ ನಿರೀಕ್ಷೆ ಇದೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ನಾನು ಕೇಂದ್ರ ಗೃಹ ಸಚಿವರ ಜತೆಗೂ ಮಾತನಾಡಿದ್ದೇನೆ.ಕೇಂದ್ರದ ಹಿರಿಯ ಅಧಿಕಾರಿಗಳೊಂದಿಗೂ ಮಾತನಾಡಿದ್ದೇನೆ .ಕರ್ನಾಟಕಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.ಹಿಂದೆ ಬಿಡುಗಡೆ ಮಾಡಿದ ಹಣದಲ್ಲಿ ಪ್ರವಾಹ ಸಂತ್ರಸ್ತರಿಗೆ ತಲಾ ಹತ್ತು ಸಾವಿರ ರೂಪಾಯಿ ನೀಡುವುದು ಸೇರಿದಂತೆ ಹಲವು ಬಗೆಯ ನೆರವುಗಳನ್ನು ನೀಡಲಾಗಿದೆ.ಈಗ ನೀಡಲಾಗಿರುವ ಹಣದಲ್ಲಿ ಕಟ್ಟಡ,ಸೇತುವೆ ಸೇರಿದಂತೆ ತುರ್ತು ಕಾಮಗಾರಿಗಳನ್ನೂ ನಡೆಸಲಾಗುವುದು ಎಂದರು.
ಇನ್ನು ಮುಂದೆ ನದಿ ಪಾತ್ರದಲ್ಲಿರುವ,ಪದೇ ಪದೇ ಪ್ರವಾಹಕ್ಕೊಳಗಾಗುವ ಪ್ರದೇಶದ ಜನರನ್ನು ಎತ್ತಂಗಡಿ ಮಾಡಿ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗುವುದು.ಕೊಡಗು,ಚಿಕ್ಕಮಗಳೂರು ಜಿಲ್ಲೆಗಳಂತಹ ಪ್ರದೇಶಗಳಲ್ಲಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಲು ತಲಾ ಐದು ಲಕ್ಷ ರೂಪಾಯಿ ನೀಡಲಾಗುವುದು ಹಾಗೂ ಗುಡ್ಡ ಕುಸಿದು ಭೂಮಿ ಕಳೆದುಕೊಂಡವರಿಗೆ ಪರ್ಯಾಯ ಭೂಮಿ ನೀಡಲಾಗುವುದು ಎಂದರು.
ನಾನು ಪ್ರವಾಹಪೀಡಿತ ಜಿಲ್ಲೆಗಳಲ್ಲಿ ವ್ಯಾಪಕ ಪ್ರವಾಸ ನಡೆಸಿದ್ದೇನೆ.ಅಲ್ಲಿನ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ.ಅವರಿಗೆ ಅನುಕೂಲ ಒದಗಿಸಿಕೊಡುವ ನಿಟ್ಟಿನಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಮನೆ ಕಳೆದುಕೊಂಡವರಿಗೆ ವ್ಯಾಪಕ ನೆರವಿನ ಅಗತ್ಯವಿದ್ದು ಇವರಿಗಾಗಿ ಗೃಹ ಮಂಡಳಿ ವತಿಯಿಂದ ಒಂದು ಸಾವಿರ ಕೋಟಿ ರೂಗಳನ್ನು ಒದಗಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಪೌತಿ ಆಂದೋಲನ
ರಾಜ್ಯದಲ್ಲಿರುವ ಭೂಮಿಯ ಬಹುತೇಕ ಪ್ರಮಾಣ ಆಯಾ ಭೂಮಾಲೀಕರ ಹಿರಿಯರ ಹೆಸರಿನಲ್ಲಿದ್ದು ಇದನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಜನರಿಗೆ ಅನುಕೂಲವಾಗುವಂತೆ ಇಂದಿನಿಂದಲೇ ಪೌತಿ ಆಂದೋಲನವನ್ನು ಪ್ರಾರಂಭಿಸುವುದಾಗಿ ಅವರು ಹೇಳಿದರು.
ಬಹುತೇಕ ಭೂಮಿ ತಾತನ ಹೆಸರಿನಲ್ಲೋ,ಅಜ್ಜನ ಹೆಸರಿನಲ್ಲೂ ಇರುತ್ತದೆ.ಆದರೆ ಅದನ್ನು ವಂಶಪಾರಂಪರ್ಯವಾಗಿ ಹಂಚಿಕೊಳ್ಳುವ ಕೆಲಸವನ್ನು ಜನ ಮಾಡಿಲ್ಲ.ಪರಿಣಾಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ದೊರೆಯುವ ನೆರವನ್ನು ಸಮರ್ಪಕವಾಗಿ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ರೈತರಿಗೆ ಈಗ ಕೇಂದ್ರ ಸರ್ಕಾರ ಪ್ರತಿ ವರ್ಷ ಅರು ಸಾವಿರ ರೂಪಾಯಿಗಳನ್ನು ಕೊಡುತ್ತದೆ.ರಾಜ್ಯ ಸರ್ಕಾರ ನಾಲ್ಕು ಸಾವಿರ ರೂಪಾಯಿಗಳನ್ನು ಕೊಡುತ್ತದೆ.ಒಟ್ಟಿನಲ್ಲಿ ರೈತರಿಗೆ ಪ್ರತಿವರ್ಷ ಹತ್ತು ಸಾವಿರ ರೂಪಾಯಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರುತ್ತದೆ.
ಆದರೆ ಭೂಮಿ ಯಾರ ಹೆಸರಿನಲ್ಲಿದೆಯೋ?ಅವರಿಗೆ ಮಾತ್ರ ಹಣ ಬರುತ್ತಿದೆ.ಉಳಿದವರಿಗೆ ಲಭ್ಯವಾಗುತ್ತಿಲ್ಲ.ಹಾಗೆಯೇ ಒಂದೇ ಖಾತೆಯಲ್ಲಿ ಭೂಮಿ ಇದ್ದಾಗ ಉಳಿದವರಿಗೆ ಹಣ ಬರುವುದಿಲ್ಲ ಎಂದು ವಿವರ ನೀಡಿದರು.ಹೀಗಾಗಿ ವಂಶಪಾರಂಪರ್ಯವಾಗಿ ಬಂದ ಭೂಮಿಯನ್ನು ಕುಟುಂಬದವರು ನಿಮ್ಮ ಹೆಸರಿನಲ್ಲಿ ಮಾಡಿಕೊಳ್ಳಿ ಎಂದು ಹೇಳುವ ಸಲುವಾಗಿಯೇ ಪೌತಿ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು ಇದರ ಪರಿಣಾಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಲಭ್ಯವಾಗುವ ಅನುದಾನ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಲಿದೆ ಎಂದು ಹೇಳಿದರು.
ಗ್ರಾಮಲೆಕ್ಕಾಧಿಕಾರಿಗಳು,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮನೆ ಮನೆಗೆ ಹೋಗಿ ಈ ಆಂದೋಲನದ ಯಶಸ್ಸಿಗಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ