ಹುಳಿಯಾರು
ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಮಾಡಿರುವ ತಿದ್ದುಪಡಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಸೆ.21ರಂದು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿಗೆ ತುಮಕೂರು ಜಿಲ್ಲೆಯಿಂದ 500 ಮಂದಿ ರೈತರು ತೆರಳಲಿದ್ದಾರೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಕೆಂಕೆರೆ ಸತೀಶ್ ತಿಳಿಸಿದ್ದಾರೆ.
ಸೆ.21ರಂದು ಬೆಳಿಗ್ಗೆ 11.15ಕ್ಕೆ ಬೆಂಗಳೂರಿನ ರೈಲು ನಿಲ್ದಾಣದಿಂದ ಮೆರವಣಿಗೆಯಲ್ಲಿ ತೆರಳಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಅಂದಿನಿಂದ ಅಧಿವೇಶನ ಮುಗಿಯುವವರೆಗೆ ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಎದುರು ಅಹೋರಾತ್ರಿ ಸತ್ಯಾಗ್ರಹ ನಡೆಸಲಾಗುವುದು. ಧರಣಿಯಲ್ಲಿ ಪಾಲ್ಗೊಳ್ಳಲು ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಈಗಾಗಲೇ ವಾಹನಗಳನ್ನು ನಿಗದಿಪಡಿಸಿಕೊಳ್ಳಲಾಗಿದ್ದು ರೈತರು ರೈತ ಸಂಘದ ಮುಖಂಡರನ್ನು ಸಂಪರ್ಕಿಸಿ ಹೆಚ್ಚಿನ ಸಂಖ್ಯೆಯಲ್ಲಿ ಧರಣಿಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಬಂಡವಾಳಶಾಹಿಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಇದರಿಂದ ರೈತರು ಬೀದಿ ಪಾಲಾಗಲಿದ್ದು ತಿದ್ದಪಡಿಯನ್ನು ಹಿಂದಕ್ಕೆ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಈ ಹೋರಾಟ ರೈತರ ಸಾವುಬದುಕಿ ಪ್ರಶ್ನೆಯ ಸಂಬಂಧವಾಗಿರುವುದರಿಂದ ಸತ್ಯಾಗ್ರಹವನ್ನು ಪಕ್ಷಭೇದ ಮರೆತು ಎಲ್ಲ ಶಾಸಕರು ಬೆಂಬಲಿಸಬೇಕು. ಸಂಘ–ಸಂಸ್ಥೆಗಳು, ಸಂಘಟನೆಗಳು ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸತೀಶ್ ಕೇಳಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ