ದಾವಣಗೆರೆ:
ಆಶ್ರಯ ಮನೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಮೂರು ಕಡೆಗಳಲ್ಲಿ ಭೂಮಿ ಖರೀದಿಸಲಾಗಿದ್ದು, ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು ಐದು ಸಾವಿರ ಆಶ್ರಯ ಮನೆಗಳನ್ನು ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಸೋಮವಾರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಸತಿಹೀನರಿಗೆ ಆಶ್ರಯ ಮನೆಗಳನ್ನು ವಿತರಣೆ ಮಾಡಬೇಕೆಂಬ ಉದ್ದೇಶದಿಂದಲೇ ಸಮೀಪದ ಬುಸವನಹಟ್ಟಿ, ಕರೂರು ಮತ್ತು ಅಶೋಕ ನಗರ ಪ್ರದೇಶಗಳಲ್ಲಿ ಸುಮಾರು 60 ಎಕರೆ ಭೂಮಿ ಖರೀದಿಸಲಾಗಿದೆ. ಈ ಯೋಜನೆಗೆ ಇನ್ನೂ ಭೂಮಿ ಬೇಕಿದ್ದು ಅದನ್ನು ಖರೀದಿಸುವ ಪ್ರಕ್ರಿಯೆ ನಡೆದಿದ್ದು, ಭೂಮಿ ಖರೀದಿಸಿದಾಕ್ಷಣ ಆಶ್ರಯ ಮನೆಗಳು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಆಶ್ರಯ ಮನೆ ನೀಡಲಾಗುತ್ತಿದೆ. ನಮಗೂ ಮನೆ ಕೊಡಿಸಿ ಎಂಬುದಾಗಿ ಪ್ರತಿದಿನ ನೂರಾರು ಜನರು ನನ್ನ ಹತ್ತಿರಕ್ಕೆ ಬರುತ್ತಿದ್ದಾರೆ. ಅಂಥ ಯಾವುದೇ ಪ್ರಕ್ರಿಯೆಗಳು ಸಧ್ಯ ನಡೆಯುತ್ತಿಲ್ಲ ಎಂದರು.
ಹಳೇ ಭಾಗದಲ್ಲಿ ಭಾರಿ ಮಳೆ ಬಂದರೆ ನೀರು ನಿಂತು ಪಾದಚಾರಿಗಳು, ವ್ಯಾಪಾರಸ್ಥರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಮಳೆ ನೀರು ಸರಾಗವಾಗಿ ಹರಿದು ಹೋಗಲಿ ಎಂಬ ಕಾರಣಕ್ಕೆ ಮಳೆ ನೀರು ಚರಂಡಿಯನ್ನು ಸ್ಮಾರ್ಟ್‍ಸಿಟಿ ಯೋಜನೆಯಡಿ ನಿರ್ಮಿಸಲಾಗುತ್ತಿದೆ ಎಂದರು.
ನಗರದ ಕೆ.ಆರ್. ಮಾರ್ಕೇಟ್ ರಸ್ತೆಯನ್ನು 652 ಮೀಟರ್ ಉದ್ದದಲ್ಲಿ 233 ಮೀಟರ್ ಸ್ಮಾರ್ಟ್ ರಸ್ತೆಯನ್ನಾಗಿ ಮತ್ತು 419 ಮೀಟರ್ (ಬೆಲ್ಲೂಡಿ ಗಲ್ಲಿ ರಸ್ತೆ, ಕೆ.ಆರ್.ರಸ್ತೆಯಿಂದ ಚಾಮರಾಜಪೇಟೆ ರಸ್ತೆ) ಸಾರ್ವಜನಿಕರಿಗೆ ಮತ್ತು ಪಾದಚಾರಿಗಳಿಗೆ ಅನುಕೂಲ ಆಗುವಂತೆ ರೂ. 3.66 ಕೋಟಿ ವೆಚ್ಚದಲ್ಲಿ ಫುಟ್‍ಪಾತ್ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಮಹಾವೀರ ರಸ್ತೆ, ಹಳೇ ಆಸ್ಪತ್ರೆ ರಸ್ತೆ, ಇಸ್ಲಾಂ ಪೇಟೆ, ಬಾರ್‍ಲೈನ್ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ 1.98 ಕೋಟಿ ರೂ. ವೆಚ್ಚದಲ್ಲಿ ಚರಂಡಿ ರಸ್ತೆ ನಿರ್ಮಿಸಲಾಗುವುದು. ಆಸ್ಪತ್ರೆಗೆ ಬರುವ ಜನರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದ ಅವರು, ಕುಂದುವಾಡ ಕೆರೆಯಲ್ಲಿನ ಉದ್ಯಾನವನದ ಅಭಿವೃದ್ಧಿಯನ್ನು ರೂ. 15 ಕೋಟಿ ವೆಚ್ಚದಲ್ಲಿ ಮಾಡಲಾಗುವುದು. ಈಗಾಗಲೇ ಇದಕ್ಕೆ ಅನುಮೋದ ದೊರೆತಿದ್ದು, ಇಷ್ಟರಲ್ಲೇ ಈ ಕೆಲಸ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟಿ, ಉಪಮೇಯರ್ ಚಮನ್‍ಸಾಬ್, ಸದಸ್ಯರಾದ ಮಂಜಮ್ಮ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ