ಬೆಂಗಳೂರು
ಅಮೆಜಾನ್ ಕಂಪನಿಯಿಂದ ೬೩೦ ರೂ ರಿಫಂಡ್ ಮಾಡುವ ಸೋಗಿನಲ್ಲಿ ಗ್ರಾಹಕನ ಮೊಬೈಲ್‌ಗೆ ಲಿಂಕ್ ಕಳುಹಿಸಿ ಪೇಟಿಎಂ ವಿವರ ಪಡೆದು ದುಷ್ಕರ್ಮಿಯೊಬ್ಬ ೫೨ ಸಾವಿರ ರೂ. ದೋಚಿದ್ದಾನೆ ಎಂದು ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ದೀಪಾವಳಿ ದಿನ ೬೩೦ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುವನ್ನು ಖರೀದಿಸಿದ್ದ ಸುನೀಲ್ ಅಹ್ಲಾವತ್ ಎಂಬುವರು ಉತ್ಪನ್ನ ಸರಿ ಇಲ್ಲವೆಂದು ವಾಪಸ್ ಮಾಡಿ ಹಣ ವಾಪಸ್ ಮಾಡುವಂತೆ ಮನವಿ ಮಾಡಿದ್ದರು.ನ.೨ರ ಸಂಜೆ ೪ ಗಂಟೆಗೆ ಸುನೀಲ್ ಮೊಬೈಲ್‌ಗೆ ಕರೆ ಮಾಡಿದ ದುಷ್ಕರ್ಮಿ ನೀವು ವಾಪಸ್ ಮಾಡಿದ ವಸ್ತು ಕಂಪನಿಗೆ ತಲುಪಿದೆ. ನಿಮ್ಮ ಹಣವನ್ನು ಆನ್‌ಲೈನ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತೇವೆ. ಅದಕ್ಕಾಗಿ ಸರಳ ವಿಧಾನವಿದೆ. ಅದನ್ನು ಅನುಸರಿಸಿ ಎಂದು ಹೇಳಿ ಮೊಬೈಲ್‌ಗೆ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಯ ವಿವರ ಅಪ್‌ಡೇಟ್ ಮಾಡುವಂತೆ ಸೂಚಿಸಿದ್ದರು.
ಲಿಂಕ್ ಕ್ಲಿಕ್ ಮಾಡಿದ ಸುನೀಲ್, ತನ್ನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಜೋಡಿಸಿದ್ದ ಪೇಟಿಎಂ ವಿವರವನ್ನು ತುಂಬಿದ್ದಾನೆ. ಕಳ್ಳರು ಲಿಂಕ್‌ನಲ್ಲಿದ್ದ ಮಾಹಿತಿ ಪಡೆದು ಯುಪಿಐ ಆಪ್ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಹಂತಹಂತವಾಗಿ ೪ ಬಾರಿ ಹಣ ವರ್ಗಾವಣೆ ಮಾಡಿಕೊಂಡಿದ್ದು, ಒಟ್ಟು ೫೨ ಸಾವಿರ ರೂ. ವಂಚನೆ ಮಾಡಿದ್ದಾರೆ.
ಸಂದೇಶ ಬಂದ ಕೂಡಲೇ ಎಚ್ಚೆತ್ತ ಸುನೀಲ್, ಸಹಾಯದ ನೆಪದಲ್ಲಿ ಕರೆ ಮಾಡಿದ್ದ ವ್ಯಕ್ತಿಗಳ ಮೊಬೈಲ್‌ಗೆ ವಾಪಸ್ ಕರೆ ಮಾಡಿದ್ದಾರೆ. ಅದು ಆಫ್ ಆಗಿತ್ತು. ಆಗ ಸೈಬರ್ ಕಳ್ಳರ ಕೈವಾಡ ಎಂಬುದು ಖಚಿತವಾಗಿದ್ದು ಈ ಸಂಬಂಧ ನೀಡಿರುವ ದೂರು ದಾಖಲಿಸಿರುವ ಸೈಬರ್ ಪೊಲೀಸರು ಆರೋಪಿಯ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








