ನೀರಾವರಿ ಯೋಜನೆಗೆ 522.11 ಕೋಟಿ ಮಂಜೂರು ..!

ಚಿತ್ರದುರ್ಗ
      ಹೊಳಲ್ಕೆರೆ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಭರಮಸಾಗರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷೆಯ ನೀರಾವರಿ ಯೋಜನೆಗೆ ಸರ್ಕಾರ 522.11 ಕೋಟಿ ರೂಪಾಯಿ ನೀಡಲು ಒಪ್ಪಿಗೆ ನೀಡಿದೆ. ಒಂದು ವಿಧಾನಸಭಾ ಕ್ಷೇತ್ರದ ಹೋಬಳಿಯ ವ್ಯಾಪ್ತಿಗೆ ದೊಡ್ಡಮೊತ್ತದ ಹಣ ಬಿಡುಗಡೆ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಮಂಜೂರಾತಿ ಪಡೆಯಲು ಶಾಸಕ ಎಂ.ಚಂದ್ರಪ್ಪ ನಡೆಸಿದ ಪ್ರಯತ್ನಕ್ಕೆ ಜಯಸಿಕ್ಕಿದೆ.
      ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಈ ಭಾಗದ ರೈತರ ಬಹುದಿನಗಳ ಕನಸಾಗಿತ್ತು. ಹಿಂದಿನ ಸರ್ಕಾರದಲ್ಲಿಯೂ ರೈತರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೀಗ ಚಂದ್ರಪ್ಪ ಅವರ ಪರಿಶ್ರಮದಿಂದ ಯೋಜನೆಗೆ ಸರ್ಕಾರ ಮಂಜೂರು ಮಾಡಿರುವುದು ಜನರಲ್ಲಿ ಸಂತಸ ಉಂಟು ಮಾಡಿದೆ
     ತುಂಗಾಭದ್ರಾ ನದಿಯಿಂದ ಏತನೀರಾವರಿಯಿಂದ ಪೈಪ್‍ಲೈನ್ ಮೂಲಕ ನೇರವಾಗಿ ಭರಮಸಾಗರದ ದೊಡ್ಡಕೆರೆಗೆ ನೀರು ಹರಿಯಲಿದ್ದು, ಇಲ್ಲಿಂದ ಉಳಿದ 39 ಕೆರೆಗಳಿಗೂ ನೀರು ತುಂಬಿಸುವುದು ಈ ಯೋಜನೆಯಲ್ಲಿದೆ. ಸತತ ಬರಗಾಲದಿಂದ ತತ್ತರಿಸಿದ್ದ ರೈತರು ಹಾಗೂ ಸಾಮಾನ್ಯ ವರ್ಗದ ಜನರಿಗೆ ಈ ಯೋಜನೆಗೆ 522 ಕೋಟಿ ರೂಪಾಯಿಯ ದೊಡ್ಡ ಮೊತ್ತ ಮಂಜೂರು ಮಾಡಿಸಿರುವುದರಿಂದ ಕೃಷಿಕಾರ್ಮಿಕರಲ್ಲಿ ಹರ್ಷತಂದಿದೆ.
   
    ಭರಮಸಾಗರ ಹೋಬಳಿ ಅಂದರೆ ಎಂ.ಚಂದ್ರಪ್ಪ ಅವರಿಗೆ ತುಂಬಾ ಪ್ರೀತಿ. ಅವರ ರಾಜಕೀಯ ಜೀವನ ರೂಪಿಸಿದ್ದು ಕೂಡಾ ಇದೇ ಭರಮಸಾಗರ. ಈ ಮೊದಲು ಇದು ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿಯೇ ಎರಡು ಭಾರಿ ಶಾಸಕರಾಗಿದ್ದರು. ಕ್ಷೇತ್ರವಿಂಗಡೆಯಾದ ಬಳಿಕ ಭರಮಸಾಗರ ಹೊಳಲ್ಕೆರೆಗೆ ಸೇರ್ಪಡೆಯಾಯಿತು. 
    ಈ ಭಾಗದ ರೈತರು ಹಾಗೂ ಸಿರಿಗೆರೆಯ ಸ್ವಾಮೀಜಿಯವರ ಕನಸಿನ ಯೋಜನೆಗೆ ಈಗ ಚಂದ್ರಪ್ಪ ಅವರು ಹಣ ಮಂಜೂರು ಮಾಡಿಸಿದ್ದಾರೆ. ಸ್ವಾಮೀಜಿಯವರು ಈ ಸಂಬಂಧ ಎರಡು ಮೂರು ಭಾರಿ ಶಾಸಕರೊಂದಿಗೆ ಚರ್ಚಿಸಿದ್ದರು. ಅದು ಏನು ಮಾಡುತ್ತಿರೋ ಗೊತ್ತಿಲ್ಲ. ಈಗ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರಿಂದ ಈ ಯೋಜನೆಗೆ ಹಣ ಬಿಡುಗಡೆ ಮಾಡಿಸಿಯೇ ತೀರಬೇಕು
ಎನ್ನುವ ತಾಕೀತು ಮಾಡಿದ್ದರು
    ಅದರಂತೆ ಕಳೆದ ಎರಡು –ಮೂರು ದಿನಗಳಿಂದ ಸಂಬಂಧಿಸಿ ಇಲಾಖೆಯ ಹಿರಿಯ ಅಧಿಕಾರಿಗಳು, ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆ ಸಂಪರ್ಕ ಸಾಧಿಸಿ ಕೊನೆಗೂ ದೊಡ್ಡ ಮೊತ್ತದ ಹಣ ಮಂಜೂರು ಮಾಡಿಸುವಲ್ಲಿ ಎಂ.ಚಂದ್ರಪ್ಪ ಯಶಸ್ವಿಯಾಗಿದ್ದಾರೆ.
ಸಿರಿಗೆರೆ ಶ್ರೀಗಳ ಕನಸು
      ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಎಂ.ಚಂದ್ರಪ್ಪ, ಇದು ಸಿರಿಗೆರೆ ಸ್ವಾಮೀಜಿಯವರ ಬಹುದಿನಗಳ ಕನಸಿನ ಯೋಜನೆ. ಅವರ ಸೂಚನೆಯಂತೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಮಂಜೂರು ಮಾಡಿಸಿದ್ದೇನೆ ಎಂದು ಹೇಳಿದರು
      ಭರಮಸಾಗರ ವ್ಯಾಪ್ತಿಯ 40 ಕೆರೆಗಳಿಗೆ ಯೋಜನೆಯಡಿಯಲ್ಲಿ ನೀರುತುಂಬಿಸಲಾಗುವುದು. ಮಂಜೂರಾದ ಮೊತ್ತವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಸರ್ಕಾರ ಸಮ್ಮತಿಸಿದೆ. ಎರಡು ತಿಂಗಳಲ್ಲಿ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿ ಸಲಾಗುವುದು ಎಂದರು
      ಯೋಜನೆಯ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ 40 ಕೆರೆಗಳಿಗೂ ಮುಂದಿನ ವರ್ಷದ ಅಂತ್ಯದೊಳಗೆ ನೀರು ಹರಿಯಲಿದ್ದು, ಯೋಜನೆಯಿಂದ ಸುಮಾರು 85ಕ್ಕೂ ಹೆಚ್ಚು ಗ್ರಾಮಗಳಿಗೆ ಅನುಕೂಲವಾಗಲದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link