ದಾವಣಗೆರೆ:
ಜಿಲ್ಲೆಯ ಸೂಳೆಕೆರೆ, ಸಂತೇಬೆನ್ನೂರು ಪುಷ್ಕರ್ಣಿ, ಅಮ್ಮನಗುಡ್ಡ, ದೇವರಹಳ್ಳಿ, ವದ್ದಿಗೆರೆ ಸೇರಿದಂತೆ ಚನ್ನಗಿರಿ ತಾಲೂಕಿನ ಐತಿಹಾಸಿಕ ತಾಣಗಳನ್ನು ಆಕರ್ಷಿತ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 56 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆಗೆ ಬಾಗೀನ ಅರ್ಪಿಸಿ, ದೋಣಿ ವಿಹಾರ ಹಾಗೂ ಜಲ ಸಾಹಸ ಕ್ರೀಡಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 56 ಕೋಟಿ ರೂ. ವೆಚ್ಚದಲ್ಲಿ ವಿಸ್ತøತ ವರದಿ ತಯಾರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಇನ್ನೆನ್ನೂ ಅನುದಾನ ಮಂಜೂರಾಗಬೇಕೆನ್ನುವಷ್ಟರಲ್ಲಿ ಚುನಾವಣೆ ಬಂತು. ಈಗ ಕೇಂದ್ರದಲ್ಲಿ ಹೊಸ ಸಚಿವರಿದ್ದು, ಬರುವ ಅಧಿವೇಶನದಲ್ಲಿ ಶತಾಯಗತಾಯ ಪ್ರಯತ್ನ ಮಾಡಿ, 56 ಕೋಟಿ ರೂ. ಅನುದಾನ ಮಂಜೂರು ಮಾಡಿಸಲಾಗುವುದು ಎಂದರು.
ಸೂಳೆಕೆರೆ ಸದಾ ತುಂಬಿರಬೇಕು. ಇದು ಪ್ರವಾಸಿ ತಾಣವಾಗಿ ಇಲ್ಲಿಗೆ ನಿರಂತರವಾಗಿ ಜನರು ಬಂದು ಹೋಗುವ ತಾಣ ಆಗಬೇಕೆಂಬ ಉದ್ದೇಶದಿಂದ ಹಿಂದೆಯೇ 6 ಕೋಟಿ ಅನುದಾನ ಕೊಡಿಸಿ, ಬೋಟಿಂಗ್ ವ್ಯವಸ್ಥೆ ಮಾಡಿಸಿದ್ದೆ. ಆದರೆ, ಸ್ವಲ್ಪದಿನದ ನಂತರ ಅದು ನಿಂತು ಹೋಯಿತು. ಆದರೆ, ಇದೀಗ ಮತ್ತೆ ಬೋಟಿಂಗ್ ವ್ಯವಸ್ಥೆ ಆರಂಭವಾಗಿದೆ ಎಂದರು.
ದಾವಣಗೆರೆ ಜಿಲ್ಲೆಯಲ್ಲಿ ಅತ್ಯುತ್ತಮ ಪ್ರವಾಸಿ ತಾಣಗಳಿದ್ದರೆ, ಅದು ಚನ್ನಗಿರಿ ಮತ್ತು ಸೂಳೆಕೆರೆ ಅನ್ನುವಂತೆ ಮಾದರಿ ಪ್ರವಾಸಿ ತಾಣವಾಗಿಸಲು ತಾವು ಹಾಗೂ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಹೇಳಿದರು.ದಾವಣಗೆರೆ ತಾಲೂಕಿನ ಬಾತಿ ಕೆರೆ ಅಗಲೀಕರಣ, ಸಿಸಿ ರಸ್ತೆ ನಿರ್ಮಾಣಕ್ಕೆ ತಮ್ಮ ಸರ್ಕಾರ ಬಂದ ನಂತರ 20 ಕೋಟಿ ಬಂದಿದೆ. ಮಾಯಕೊಂಡಕ್ಕೆ 7.30 ಕೋಟಿ ಮಂಜೂರಾಗಿದೆ. ಚನ್ನಗಿರಿ ತಾಲೂಕಿಗೆ 20-30 ಕೋಟಿ ತಂದು, ಮಾಡಾಳ್ ವಿರುಪಾಕ್ಷಪ್ಪ ಕೆಲಸ ಸಹ ಆರಂಭಿಸಿದ್ದಾರೆ. ದಾವಣಗೆರೆ ಉತ್ತರ, ಮಾಯಕೊಂಡದಲ್ಲಿ ಒಂದಿಷ್ಟು ಕೆಲಸಕ್ಕೆ ಹಿನ್ನಡೆಯಾಗಿ, ಹಣ ವಾಪಾಸಾಗಿತ್ತು. ಮತ್ತೆ ಸಿಎಂ ಬಳಿ ಮಾತನಾಡಿ, ಹಣ ಮಂಜೂರು ಮಾಡಿಸಿದ್ದು, ಕೆಲಸ ಶೀಘ್ರವೇ ಆರಂಭವಾಗಲಿವೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಕೆಲಸ ಮಾಡುವ ಆಸೆ ಹಾಗೂ ಇಚ್ಛಾಸಕ್ತಿಯೂ ಇದೆ. ಜನರ ಸಹಕಾರ ಅತ್ಯವಶ್ಯವಾಗಿದೆ. ಜಿಲ್ಲೆಯಲ್ಲಿ ಕ್ಷೇತ್ರದ ಕೆಲಸ ಮಾಡುವಲ್ಲಿ ಮಾಡಾಳ್ ವಿರುಪಾಕ್ಷಪ್ಪ ಮುಂಚೂಣಿಯಲ್ಲಿದ್ದಾರೆ. ಹೊಸದಾಗಿ ಆಯ್ಕೆಯಾಗಿರುವ ಲಿಂಗಣ್ಣಗೆ ಮಾಡಾಳ್ ವಿರುಪಾಕ್ಷಪ್ಪ ಗರಡಿಯಲ್ಲಿ ತರಬೇತಿ ಪಡೆಯಬೇಕಾಗಿದೆ ಎಂದರು.
ಕಳೆದ 10 ವರ್ಷದ ಹಿಂದೆ ಸೂಳೆಕೆರೆಯಿಂದ ಸಿರಿಗೆರೆ, ಚಿತ್ರದುರ್ಗ, ಸಂತೇಬೆನ್ನೂರು ಬೇರೆ ಬೇರೆಡೆ ಕುಡಿಯುವ ನೀರು ಒಯ್ಯುತ್ತಿದ್ದರು. ಸೂಳೆಕೆರೆ ಬರಿದಾಗುವ ಸ್ಥಿತಿ ಇತ್ತು. ಆಗ ಚುನಾವಣೆ ವೇಳೆ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಚನ್ನಗರಿಯಲ್ಲಿ ಸಿದ್ದೇಶ್ವರ ಅವರ ತೋಟಕ್ಕೆ ಮತ್ತು ಭೀಮಸಮುದ್ರಕ್ಕೆ ನೀರು ತೆಗೆದುಕೊಂಡು ಹೋಗಿದ್ದಾರೆ ಎಂಬುದಾಗಿ, ಕುಂದೂರು, ಕೂಲಂಬಿ, ಹರಿಹರ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ಮಾಡಿಸುತ್ತಿದ್ದಾರೆ ಎಂಬುದಾಗಿ, ಹರಪನಹಳ್ಳಿಗೆ ಹೋಗಿ, ದಾವಣಗೆರೆಯಲ್ಲಿ ಗಂಡಸರಿಲ್ಲವೇ? ಬೇರೆ ಊರಿನವನು ಇಲ್ಲಿ ಸ್ಪರ್ಧಿಸಬೇಕಾ ಅಂತಾ ಪ್ರಶ್ನಿಸಿದರು.
ಜಗಳೂರಿನಲ್ಲಿ ಭದ್ರಾ ಮೇಲ್ದಂಡೆಗೆ ಕಲ್ಲು ಹಾಕು ತ್ತಿರುವುದೇ ಸಿದ್ದೇಶ್ವರ್ ಹೀಗೆ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಆಗ ಲೋಕಸಭೆ ಚುನಾವಣೆಯಲ್ಲಿ ಮೊದ, ಮೊದಲು 24-25 ಸಾವಿರ ಕಾಂಗ್ರೆಸ್ ಲೀಡ್ ಆಗಿತ್ತು. ಅದನ್ನು ನೋಡಿಕೊಂಡು ಕೆಲವರು ಊರಲ್ಲಿರುವ ಎಲ್ಲಾ ಲಾಡು ಖರೀದಿಸಿ, ಶಾಮಿಯಾನ ಹಾಕಿಕೊಂಡು ಪಟಾಕಿ ಹಚ್ಚಲು ಸಿದ್ಧರಾಗಿದ್ದರು. ಆದರೆ, ಚನ್ನಗಿರಿ ಕ್ಷೇತ್ರದ ಮತದಾರರು 8500 ಸಾವಿರ ಲೀಡ್ ಕೊಟ್ಟರು. ಸಿದ್ದೇಶಪ್ಪ ಸೋತ ಅಂತಾ ಊರಲ್ಲೆಲ್ಲಾ ಕರೆದು, ಶಾಮಿಯಾನ ಹಾಕಿಸಿದವರು ಕೊನೆಗೇ ಸಿದ್ದೇಶಪ್ಪ 2024 ಮತಗಳಿಂದ ಗೆದ್ದ ವಿಚಾರ ಗೊತ್ತಾಗಿದ್ದರಿಂದ ತಮ್ಮ ಪಟಾಕಿ ಟುಸ್ ಅಂದಿದ್ದಕ್ಕೆ ಸಪ್ಪೆಯಾದರು ಎಂದು ಎದುರಾಳಿಗಳನ್ನು ಕುಟುಕಿದರು.
ನಾನು ಇಲ್ಲಿಂದ ಒಂದು ಹನಿ ನೀರನ್ನೂ ಭೀಮಸಮುದ್ರಕ್ಕೆ ತೆಗೆದುಕೊಂಡು ಹೋಗಿಲ್ಲ. ಕಳೆದ 25 ವರ್ಷಗಳಿಂದ ಭೀಮಸಮುದ್ರದ ಕೆರೆ ಖಾಲಿ ಇದೆ. ಶಾಸಕ ಮಾಡಾಳ್ ವಿರುಪಾಕ್ಷಪ್ಪ, ನಾನು ಏನಾದರೂ ಮಾಡಿ ಚನ್ನಗಿರಿ, ಮಾಯಕೊಂಡ, ಹೊನ್ನಾಳಿ ತಾಲೂಕು, ಸಿರಿಗೆರೆ, ಭೀಮಸಮುದ್ರಕ್ಕೆ ನೀರು ತುಂಬಿಸಲು ಜಗದೀಶ ಶೆಟ್ಟರ್ ಸಿಎಂ ಇದ್ದಾಗ ಬಜೆಟ್ಗೆ ಸೇರಿಸಿದೆವು. ವಡ್ನಾಳ್ ರಾಜಣ್ಣ ಶಾಸಕರಿದ್ದಾಗ ನಾವು ಮಾಡಿಸಿದ್ದ 600 ಕೋಟಿ ಪ್ರಸ್ತಾವನೆ ಯನ್ನು 400 ಕೋಟಿಗೆ ಇಳಿಸಿ, ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಈಗ ಅದೇ ಕೆಲಸವನ್ನು ಮಾಡಿಸಲು ಮತ್ತೆ ಮಾಡಾಳ್ ವಿರುಪಾಕ್ಷಪ್ಪ ಬರಬೇಕಾಯಿತು ಎಂದರು.
ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಸೂಳೆಕೆರೆ ತನ್ನ ಹೆಸರಿನಲ್ಲಿಯೇ ವೈಶಿಷ್ಟತೆ ಹೊಂದಿದೆ. 2008ರಿಂದ 2013ರ ವರೆಗೆ ಈ ಕೆರೆ ತುಂಬಿ ಮೂರು ಬಾರಿ ಕೊಡಿ ಬಿದ್ದಿತ್ತು. ಅಲ್ಲಿಂದ ಇಲ್ಲಿಯ ವರೆಗೆ ಈ ಕೆರೆ ತುಂಬಿಯೇ ಇರಲ್ಲಿಲ್ಲ. ಆದರೆ, ಈ ಬಾರಿ ತುಂಬಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವಿವಿಧ ಭಾಗಗಳ ಜನರಿಗೆ ಇದು ಕುಡಿಯುವ ನೀರಿನ ಆಸರೆಯಾಗಿದೆ ಎಂದು ಹೇಳಿದರು.
ಇದು ಅಪಘಾತ ವಲಯ ಆಗಿರುವುದರಿಂದ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆ ಮಾಡುವಂತೆ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂಳೆಕೆರೆ ಸುಂದರ ಪ್ರವಾಸಿ ತಾಣವಾಗಬೇಕೆಂಬುದು ನಮ್ಮ ಆಶಯವಾಗಿದೆ. ಆದರೆ, ಇಲ್ಲಿ ಅಭಿವೃದ್ಧಿಯ ವೇಳೆಯಲ್ಲಿ ಆಗುವ ಸಣ್ಣ ಲೋಪವನ್ನೇ ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳಬೇಡಿ, ಚುನಾವಣೆಯ ಸಂದರ್ಭದಲ್ಲಿ ಚುನಾವಣೆ ಮಾಡೋಣ ಬಾಕಿ ಸಮಯದಲ್ಲಿ ಅಭಿವೃದ್ಧಿಗೆ ಒತ್ತು ನೀಡೋಣ ಎಂದು ಸಲಹೆ ನೀಡಿದರು.
ಸೂಳೆಕೆರೆಯ ಸರ್ವೇ ಮಾಡಲು ನಮ್ಮ ವಿರೋಧವಿಲ್ಲ. ಸರ್ವೇಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಕೆರೆಯೆ ತುಂಬಿ ತನ್ನ ವ್ಯಾಪ್ತಿಯನ್ನು ಅಕ್ರಮಿಸಿಕೊಂಡಿದೆ. ಇದು 3 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ ಎಂದರು. ಮಾಯ ಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ಜಿ.ಪಂ. ಅಧ್ಯಕ್ಷೆ ಯಶೋಧ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಪದ್ಮ ಬಸವಂತಪ್ಪ, ಉಪವಿಭಾಗಾಧಿಕಾರಿ ಮಮತಾ, ಸಂಸದರ ಪತ್ನಿ ಗಾಯತ್ರಿ ಸಿದ್ದೇಶ್ವರ್, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಸಾಕಮ್ಮ ಗಂಗಾಧರ ನಾಯ್ಕ, ವಾಗೀಶ್, ಲೋಕೇಶ್, ಟಿ.ವಿ.ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ